ದಾವಣಗೆರೆ: ಪತಿಯ ಅಕ್ರಮ ಸಂಬಂಧ ಬಯಲಿಗೆಳೆದ ಪತ್ನಿ ಸಾವು; ಪೋಷಕರಿಂದ ಕೊಲೆ ಆರೋಪ
ದಾವಣಗೆರೆ, ಏಪ್ರಿಲ್ 19: ದಾವಣಗೆರೆಯಲ್ಲಿ ವಿವಾಹವಾಗಿ ಎರಡೇ ವರ್ಷಕ್ಕೆ ಕಾವ್ಯಾ ಎಂಬುವವರು ಸಾವನ್ನಪ್ಪಿದ್ದಾರೆ. ಈ ಪ್ರಕರಣ ಇದೀಗ ತಿರುವು ಪಡೆದುಕೊಂಡಿದ್ದು, ಆಕೆಯ ಸಾವು ಆತ್ಮಹತ್ಯೆಯಲ್ಲ, ಪತಿ ಕೊಲೆ ಮಾಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಸರ್ಕಾರಿ ನೌಕರನಾಗಿರುವ ಕಾವ್ಯಾ ಅವರ ಪತಿ ಮನು ಎಂಬಾತನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಕಾವ್ಯಾ ತನ್ನ ಪತಿ ನೀಡುತ್ತಿದ್ದ ಕಿರುಕುಳ ಮತ್ತು ಅಕ್ರಮ ಸಂಬಂಧದ ಬಗ್ಗೆ ಪೆನ್‌ಡ್ರೈವ್‌ನಲ್ಲಿ ಸಾಕ್ಷ್ಯ ಸಂಗ್ರಹಿಸಿದ್ದಳು ಎನ್ನಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದು, ಕಾವ್ಯಾ ಕುಟುಂಬ ನ್ಯಾಯಕ್ಕಾಗಿ ಆಗ್ರಹಿಸಿದೆ ಎಂದು ತಿಳಿದುಬಂದಿದೆ.

ದಾವಣಗೆರೆ ತಾಲೂಕಿನ ಮಂಡಲೂರು ಗ್ರಾಮದ ಬಡ ಕುಟುಂಬದ ಕಾವ್ಯಾ ಹಾಗೂ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದ ಮನು ಎಂಬುವವರು ಎರಡು ವರ್ಷಗಳ ಹಿಂದೆ ವಿವಾಹ ಆಗಿದ್ದರು. ಮನು ಅಂಚೆ ಇಲಾಖೆಯಲ್ಲಿ ಸರ್ಕಾರಿ ನೌಕರನಾಗಿದ್ದ ಎಂಬ ಕಾರಣಕ್ಕೆ, ಕಾವ್ಯಾ ಪೋಷಕರು ಸಾಲ ಮಾಡಿ 2.50 ಲಕ್ಷ ರೂಪಾಯಿ ನಗದು ಮತ್ತು 70 ಗ್ರಾಂ ಚಿನ್ನ ನೀಡಿ ಮದುವೆ ಮಾಡಿಕೊಟ್ಟಿದ್ದರು. ಈ ದಂಪತಿ ದಾವಣಗೆರೆ ನಗರದ ಅರಸು ಬಡಾವಣೆಯ ಕ್ವಾರ್ಟರ್ಸ್‌ನಲ್ಲಿ ವಾಸವಿದ್ದರು.
ಏಪ್ರಿಲ್ 17ರಂದು ಕಾವ್ಯಾ ತನ್ನ ತಾಯಿಯೊಂದಿಗೆ ಮಂತ್ರಾಲಯಕ್ಕೆ ಹೋಗಲು ಸಿದ್ಧತೆ ನಡೆಸಿದ್ದಳು. ಮನೆಯ ಮುಂದೆ ವಾಹನ ನಿಂತು ಎಲ್ಲರೂ ಕಾಯುತ್ತಿದ್ದರು. ಮಧ್ಯಾಹ್ನದಿಂದ ಕಾವ್ಯಾಳ ಫೋನ್ ಸ್ವಿಚ್ ಆಫ್ ಆಗಿತ್ತು. ರಾತ್ರಿ ವೇಳೆ ಮನು ತನ್ನ ಅತ್ತೆಗೆ ಫೋನ್ ಮಾಡಿ ಕಾವ್ಯಾ ಮಾತನಾಡುತ್ತಿಲ್ಲ ಎಂದು ತಿಳಿಸಿದ್ದಾನೆ. ಆಗ ಗಾಬರಿಯಾದ ಸಂಬಂಧಿಕರು ಧಾವಿಸಿದ ವೇಳೆ ಕಾವ್ಯಾ ಎಚ್ಚರವಿಲ್ಲದಂತೆ ಮಲಗಿದ್ದರು. ಮನು ಅಲ್ಲಿಂದ ಪರಾರಿಯಾಗಿದ್ದು, ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲೇ ಕಾವ್ಯಾ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ.
ಕಾವ್ಯಾಳ ಪತಿ ಮನುಗೆ ಮತ್ತೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿತ್ತು ಮತ್ತು ಆತ ಮಾದಕ ಚಟಕ್ಕೆ ಬಲಿಯಾಗಿದ್ದ ಎನ್ನಲಾಗಿದೆ. ಈ ಬಗ್ಗೆ ಕಾವ್ಯಾ ತನ್ನ ಪೋಷಕರಿಗೆ ತಿಳಿಸಿ ಅಳಲು ತೋಡಿಕೊಂಡಿದ್ದಳು. ಪತಿ ನೀಡುತ್ತಿದ್ದ ಕಿರುಕುಳ ಮತ್ತು ಆತನ ಅನೈತಿಕ ಸಂಬಂಧದ ಸಾಕ್ಷ್ಯಗಳನ್ನು ಕಾವ್ಯಾ ಒಂದು ಪೆನ್ ಡ್ರೈವ್‌ನಲ್ಲಿ ಸಂಗ್ರಹಿಸಿಟ್ಟಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಈ ಪೆನ್ ಡ್ರೈವ್ ಈಗ ಈ ಕೊಲೆ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗುವ ಸಾಧ್ಯತೆಯಿದೆ. ಇನ್ನೂ ಮಗಳ ಸಾವಿನಿಂದ ತಾಯಿ ಶಶಿಕಲಾ ಪ್ರಜ್ಞೆ ತಪ್ಪಿ ಆಸ್ಪತ್ರೆ ಸೇರಿದ್ದಾರೆ. ಸದ್ಯ ಪೊಲೀಸರು ಆರೋಪಿ ಮನುನನ್ನು ವಶಕ್ಕೆ ಪಡೆದಿದ್ದು, ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಶಂಕೆಯಡಿ ಪ್ರಕರಣ ದಾಖಲಿಲು ಮಾಡಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ.












Click it and Unblock the Notifications