ದಾವಣಗೆರೆ-ಹರಿಹರ ಜೋಡಿ ಮಾರ್ಗ ನಿರ್ಮಾಣ ಪೂರ್ಣ
ದಾವಣಗೆರೆ, ಸೆಪ್ಟೆಂಬರ್ 27 : ದಾವಣಗೆರೆ-ಹರಿಹರ ನಿಲ್ದಾಣಗಳ ನಡುವೆ ಜೋಡಿ ಹಳಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಚಿಕ್ಕಜಾಜೂರು-ಹುಬ್ಬಳ್ಳಿ ನಡುವಿನ 190 ಕಿ. ಮೀ. ದ್ವಿಪಥ ರೈಲ್ವೆ ಮಾರ್ಗ ಯೋಜನೆಯನ್ನು ಇಲಾಖೆ ಕೈಗೊಂಡಿದೆ.
Recommended Video
"ಈ ಯೋಜನೆಯ ಭಾಗವಾಗಿ ದಾವಣಗೆರೆ-ಹರಿಹರ ಅವಳಿ ನಗರದ ನಡುವೆ ಜೋಡಿ ರೈಲು ಹಳಿ ನಿರ್ಮಾಣ ಮಾಡಲಾಗಿದೆ. ಸೆಪ್ಟೆಂಬರ್ 28ರಂದು ಮಾರ್ಗದಲ್ಲಿ ರೈಲು ಗಾಡಿಗಳ ವೇಗ ತಪಾಸಣೆ ನಡೆಯಲಿದೆ" ಎಂದು ಮೈಸೂರು ವಿಭಾಗದ ನೈಋತ್ಯ ರೈಲ್ವೆ ಹಿರಿಯ ವಿಭಾಗೀಯ ಪರಿಚಾಲನಾ ವ್ಯವಸ್ಥಾಪಕ ಆರ್. ಸತೀಶ್ ಹೇಳಿದ್ದಾರೆ.
ರೈಲ್ವೆ ಸುರಕ್ಷಾ ಆಯುಕ್ತರು ದಾವಣಗೆರೆ-ಹರಿಹರ ನಿಲ್ದಾಣ ನಡುವೆ ಹೊಸದಾಗಿ ಹಾಕಲಾದ ಜೋಡಿ ಮಾರ್ಗದ ತಪಾಸಣೆಯನ್ನು ನಡೆಸಲಿದ್ದಾರೆ. ಪ್ರತಿ ಗಂಟೆಗೆ 100 ಕಿ.ಮೀ. ವೇಗದಲ್ಲಿ ರೈಲುಗಾಡಿಯನ್ನು ಓಡಿಸುವ ಮೂಲಕ ತಪಾಸಣೆ ನಡೆಸಲಾಗುತ್ತದೆ.

ಸೆಪ್ಟೆಂಬರ್ 28ರಂದು ಜನರು ನೂತನ ಜೋಡಿ ಮಾರ್ಗದ ಸಮೀಪ ಓಡಾಡಬಾರದು. ದಾವಣಗೆರೆ-ಹರಿಹರ ಹಳಿ ಅತಿಕ್ರಮಿಸಿ ಓಡಾಡುವುದು ಅಪರಾಧವಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಚಿಕ್ಕಜಾಜೂರು-ಹುಬ್ಬಳ್ಳಿ ದ್ವಿಪಥ ರೈಲು ಮಾರ್ಗ ಕಾಮಗಾರಿಗೆ 2015-16ರಲ್ಲಿ ಚಾಲನೆ ನೀಡಲಾಗಿದೆ. 1, 141 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. 2020-2021ರಲ್ಲಿ ಮಾರ್ಗದ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications