ದಾವಣಗೆರೆಯಲ್ಲಿ ಕರಗುತ್ತಿದೆ ಕೊರೊನಾ ಪಾಸಿಟಿವಿಟಿ: ಸಾವಿನ ಪ್ರಮಾಣ ಏರುಮುಖ!
ದಾವಣಗೆರೆ, ಜೂನ್ 30: ಕೋವಿಡ್ ಒಂದೆನೆಯ ಅಲೆ ಹಾಗೂ ಎರಡನೇ ಅಲೆಗೆ ಸಿಕ್ಕು ನಲುಗಿದ್ದ ಬೆಣ್ಣೆನಗರಿ ದಾವವಣಗೆರೆ ಜನರಿಗೆ ಸಿಹಿ ಸುದ್ದಿಯೊಂದು ಲಭಿಸಿದೆ. ಕೊರೊನಾ ಪಾಸಿಟಿವಿಟಿ ಈಗ ಶೇ.3.04 ಆಗಿದ್ದು, ಜಿಲ್ಲೆಯ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಸಿಎಂ ಯಡಿಯೂರಪ್ಪ ಸಹ ಕೊರೊನಾ ಸೋಂಕು ಹರಡುವಿಕೆ ಕಡಿಮೆಯಾಗಬೇಕು, ಜೊತೆಗೆ ಪಾಸಿಟಿವಿಟಿ ಶೇ.5ರೊಳಗೆ ಆದಷ್ಟು ಬೇಗ ತರಬೇಕು ಎಂಬ ಸೂಚನೆ ನೀಡಿದ್ದರು. ಅದರಂತೆಯೇ ಈಗ ಪಾಸಿಟಿವಿಟಿ ರೇಟ್ ಕಡಿಮೆಯಾಗಿದೆ. ಆದರೆ, ಸಾವಿನ ಪ್ರಮಾಣ ಶೇ.2.02 ಆಗಿರುವುದು ಆತಂಕ ಮೂಡಿಸಿದೆ. ಆದರೂ ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಹಂತ ಹಂತವಾಗಿ ನಿಯಂತ್ರಣಕ್ಕೆ ಬರುತ್ತಿರುವ ಮುನ್ಸೂಚನೆ ಸಿಕ್ಕಿದೆ.
ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಹರಡಿದ್ದ ಕೊರೊನಾ ಸೋಂಕಿತ ಪ್ರಕರಣಗಳು ಕಡಿಮೆಯಾಗುತ್ತಿವೆ. ದಿನ ಕಳೆದಂತೆ ಪಾಸಿಟಿವಿಟಿ ದರ ಕಡಿಮೆಯಾಗಿದೆ. ಕಳೆದ ಎರಡು ವಾರದ ಹಿಂದೆ ಶೇ.5.42 ಇದ್ದ ಪಾಸಿಟಿವಿಟಿ ಒಂದು ವಾರದ ಅಂತರದಲ್ಲಿ ಸುಮಾರು ಶೇ.2.38ರಷ್ಟು ಕಡಿಮೆಯಾಗಿದ್ದು, ಸಮಾಧಾನಕರ ಸಂಗತಿಯಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಪಾಸಿಟಿವಿಟಿ ಇದೆ?
ದಾವಣಗೆರೆ ಜಿಲ್ಲೆಯಲ್ಲಿ ಜೂನ್ 21ರಿಂದ 27ರವರೆಗೆ 22,334 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, 752 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ದಾವಣಗೆರೆ ತಾಲೂಕಿನಲ್ಲಿ 6116 ಟೆಸ್ಟ್ ಪೈಕಿ 376 ಸೋಂಕು ದೃಢಪಟ್ಟಿದ್ದು, ಶೇ.6.15 ಪಾಸಿಟಿವಿಟಿ ಇದೆ. ಅತಿ ಕಡಿಮೆ ಎಂದರೆ ಜಗಳೂರಿನಲ್ಲಿ ಶೇ.1.44 ಇದ್ದು, ಉಳಿದಂತೆ ಚನ್ನಗಿರಿ ಶೇ.3.73, ಹರಿಹರ ಶೇ.2.08, ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕಿನಲ್ಲಿ ಶೇ.1.80 ಪಾಸಿಟಿವಿಟಿ ದಾಖಲಾಗಿದೆ.

ದಾವಣಗೆರೆ ನಗರದಲ್ಲಿ ಸೋಂಕಿನ ಪ್ರಕರಣ ಹೆಚ್ಚಿದೆ
ಆದರೆ ದಾವಣಗೆರೆ ನಗರದಲ್ಲಿ ಕೊರೊನಾ ಸೋಂಕಿನ ಪ್ರಕರಣ ಹೆಚ್ಚಿದೆ. ತಾಲೂಕುಗಳಲ್ಲಿ ಕಡಿಮೆಯಾಗಿರುವುದರಿಂದ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಶ್ರಮಕ್ಕೆ ಫಲ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ ಆರು ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ.

ದಾವಣಗೆರೆ ಮಾತ್ರ ಯಲ್ಲೋ ಝೋನ್‌ನಲ್ಲಿದೆ
ಜೂನ್ 14ರಿಂದ 20ರವರೆಗೆ ಒಟ್ಟು 22,063 ಪರೀಕ್ಷೆ ನಡೆಸಲಾಗಿದ್ದು, 1196 ಜನರಲ್ಲಿ ಸೋಂಕಿರುವುದು ಖಚಿತವಾಗಿತ್ತು. ಆಗ ಶೇ.5.42 ಪಾಸಿಟಿವಿಟಿ ಇತ್ತು. ಇನ್ನು ಸಾವಿನ ಪ್ರಮಾಣವೂ ಸಹ ಕಡಿಮೆಯಾಗಿದೆ. ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಗ್ರೀನ್ ವಲಯ ಎಂದು ಹೇಳಲಾಗುತ್ತಿದೆಯಾದರೂ, ದಾವಣಗೆರೆ ಮಾತ್ರ ಯಲ್ಲೋ ಝೋನ್‌ನಲ್ಲಿದೆ. ಆದರೆ ನಿನ್ನೆ ಬಂದ ರಿಪೋರ್ಟ್‌ನಲ್ಲಿ ಮತ್ತಷ್ಟು ಪಾಸಿಟಿವಿಟಿ ಕಡಿಮೆಯಾಗಿದೆ. 264 ಕೊರೊನಾ ಸೋಂಕಿತರು ಮೊದಲ ಅಲೆಯಲ್ಲಿ ಬಲಿಯಾಗಿದ್ದರೆ, ಎರಡನೇ ಅಲೆಯಲ್ಲಿ ಕೇವಲ ಮೂರುವರೆ ತಿಂಗಳಿನಲ್ಲಿ 277 ಮಂದಿ ಮೃತಪಟ್ಟಿದ್ದಾರೆ.

ಬ್ಲ್ಯಾಕ್ ಫಂಗಸ್ ಗುಣಮುಖಿತರ ಸಂಖ್ಯೆ ಹೆಚ್ಚಳ
"ಇನ್ನು ದಾವಣಗೆರೆ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್‌ಗೆ 108 ಜನರು ಬಳಲುತ್ತಿದ್ದರು. ಆದರೆ ಇದುವರೆಗೆ 59 ಜನರು ಗುಣಮುಖರಾಗಿ ತೆರಳಿದ್ದರೆ, 49 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ,'' ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.












Click it and Unblock the Notifications