ಚಂದ್ರಶೇಖರ್ ನಾಪತ್ತೆ ಪ್ರಕರಣ; ಇದೊಂದು ಪೂರ್ವನಿಯೋಜಿತ ಅಪಹರಣ ಎಂದ ರೇಣುಕಾಚಾರ್ಯ
ದಾವಣಗೆರೆ, ನವೆಂಬರ್, 03: ನನ್ನ ಸಹೋದರ ಎಂ. ಪಿ. ರಮೇಶ್ ಪುತ್ರ ಚಂದ್ರಶೇಖರ್ ನಿಗೂಢ ನಾಪತ್ತೆ ಪ್ರಕರಣದ ಬಗ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೊಂದು ಪೂರ್ವನಿಯೋಜಿತ ಅಪಹರಣ. ಪೊಲೀಸರು ಬೇರೆ ಪ್ರಕರಣಗಳಲ್ಲಿ ಆರೋಪಿಗಳನ್ನು ಬೇಗ ಪತ್ತೆ ಹಚ್ಚುತ್ತಾರೆ. ಆದರೆ ನನ್ನ ಸಹೋದರನ ಪುತ್ರ ಚಂದ್ರಶೇಖರ್ ಬಗ್ಗೆ ಇದುವರೆಗೂ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ. ಇದು ಬೇಸರ ತಂದಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದ್ದಾರೆ.
ಹೊನ್ನಾಳಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಚಂದ್ರು ಎಲ್ಲೇ ಇದ್ದರೂ ಸುರಕ್ಷಿತವಾಗಿ ಮರಳಬೇಕು ಎಂಬುದು ನಮ್ಮೆಲ್ಲರ ಆಸೆ, ನಿರೀಕ್ಷೆ ಆಗಿದೆ. ಆತನಿಗಾಗಿ ಯಾವುದೇ ತ್ಯಾಗಕ್ಕಾದರೂ ಸಿದ್ಧನಿದ್ದೇನೆ ಎಂದು ಹೇಳಿದರು. ಮನೆಯಲ್ಲಿ ಎಲ್ಲರೂ ನೋವಿನ ಮಡುವಿನಲ್ಲಿದ್ದಾರೆ. ಚಂದ್ರಶೇಖರ್ ನಾಪತ್ತೆಯಾದ ಬಳಿಕ ಯಾರೂ ಸರಿಯಾಗಿ ನಿದ್ದೆ, ಊಟ ಮಾಡುತ್ತಿಲ್ಲ. ನೆಮ್ಮದಿ ಇಲ್ಲವಾಗಿದ್ದು, ಆತ ಏನಾಗಿದ್ದಾನೆ ಎಂಬ ಭಯದಲ್ಲೇ ಬದುಕುತ್ತಿದ್ದೇವೆ. ಸಿಸಿಟಿವಿಯ ದೃಶ್ಯಾವಳಿಯಲ್ಲಿ ಆತನ ಕಾರು ಹೋಗಿರುವ ಬಗ್ಗೆ ಗೊತ್ತಾಗಿದೆ. ಆದರೆ ಕಾರನ್ನು ಆತನೇ ಚಲಾಯಿಸುತ್ತಿದ್ದಾನೆಯೇ ಅಥವಾ ಬೇರೆಯವರು ಚಲಾಯಿಸಿದ್ದಾರೆಯೋ ಎಂಬುದು ಗೊತ್ತಿಲ್ಲ. ಹಿಂದೆಯೂ ಒಂದು ಕಾರು ಬಂದಿದೆ. ಇದನ್ನು ನೋಡಿದರೆ ಪ್ರೀ ಪ್ಲಾನ್ ಕಿಡ್ನ್ಯಾಪ್ ಎಂದು ಆರೋಪ ಮಾಡಿದರು.
ಮಗನೇ ಸುರಕ್ಷಿತವಾಗಿ ಬಾ: ಹೊನ್ನಾಳಿಯಲ್ಲಿ ಶಾಸಕ ರೇಣುಕಾಚಾರ್ಯ ಕಣ್ಣೀರು

ಪೊಲೀಸ್ ಇಲಾಖೆಯಿಂದ ತನಿಖೆ
ಪೊಲೀಸ್ ಇಲಾಖೆಯವರು ತನಿಖೆ ಮಾಡುತ್ತಿದ್ದಾರೆ. ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸೇರಿದಂತೆ ಎಲ್ಲರೂ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಹೊನ್ನಾಳಿ - ನ್ಯಾಮತಿ ಅವಳಿ ಕ್ಷೇತ್ರ ಮಾತ್ರವಲ್ಲ, ಬೇರೆ ಬೇರೆ ಜಿಲ್ಲೆಗಳಿಂದಲೂ ಫೋನ್ ಕರೆಗಳು ಬರುತ್ತಿವೆ. ಎಲ್ಲರೂ ಸಮಾಧಾನ, ಧೈರ್ಯ, ಆತ್ಮವಿಶ್ವಾಸವನ್ನು ತುಂಬುತ್ತಿದ್ದಾರೆ. ಅವರಿಗೆಲ್ಲರಿಗೂ ನಾನು ಚಿರರುಣಿ ಆಗಿರುತ್ತೇನೆ. ಚಂದ್ರು ಪತ್ತೆಗಾಗಿ ಬಿಜೆಪಿ ಕಾರ್ಯಕರ್ತರು, ಕ್ಷೇತ್ರದ ಜನರು ವ್ಯಾಟ್ಸಪ್‌ನಲ್ಲಿ ಸ್ಟೇಟಸ್ ಹಾಕಿಕೊಳ್ಳುತ್ತಿದ್ದಾರೆ. ಹಳ್ಳಿಗಳಲ್ಲಿ ದೇವರ ಮೊರೆ ಹೋಗಿರುವ ಜನರು ಚಂದ್ರಶೇಖರ್‌ಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ವಿಶೇಷಾಧಿಕಾರಿ ಆಗಿ ದೇವರಾಜ್ ನೇಮಕ
ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದು ಅಲಿಯಾಸ್ ಚಂದ್ರಶೇಖರ್ ಮಿಸ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ಮೇರೆಗೆ ತನಿಖೆ ನಡೆಸಲು ಈ ಹಿಂದೆ ಹೊನ್ನಾಳಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ದೇವರಾಜ್ ಅವರನ್ನು ವಿಶೇಷಾಧಿಕಾರಿ ಆಗಿ ನೇಮಕ ಮಾಡಲಾಗಿದೆ. ಪ್ರಸ್ತುತ ಉಡುಪಿಯ ಮಣಿಪಾಲದಲ್ಲಿ ಇನ್ಸ್‌ಪೆಕ್ಟರ್ ಆಗಿರುವ ದೇವರಾಜ್ ಹೊನ್ನಾಳಿಯಲ್ಲಿ ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿ ಎಂದೇ ಪ್ರಸಿದ್ಧಿ ಆಗಿದ್ದಾರೆ. ಕೊಲೆ, ಅಪರಾಧ, ದರೋಡೆ ಪ್ರಕರಣಗಳನ್ನು ಎದುರಿಸಿದವರಾಗಿದ್ದರು. ಹಾಗೂ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿ ಆಗಿದ್ದರು.

ಟ್ವಿಸ್ಟ್ ಪಡೆದ ಚಂದ್ರು ನಾಪತ್ತೆ ಪ್ರಕರಣ
ಖಡಕ್ ಆಗಿ ಕರ್ತವ್ಯ ನಿರ್ವಹಿಸಿದ್ದ ಕ್ರೈಂ ಸ್ಪೆಷಲಿಸ್ಟ್ ಹಾಗೂ ಕೇಂದ್ರ ಗೃಹ ಸಚಿವರ ಪದಕಕ್ಕೆ ಭಾಜನರಾಗಿದ್ದ ದೇವರಾಜ್ ಅವರನ್ನು ವಿಶೇಷ ಕರ್ತವ್ಯದ ಮೇಲೆ ನಿಯೋಜಿಸಲಾಗಿದೆ. ದಿನಕಳೆದಂತೆ ಚಂದ್ರು ನಾಪತ್ತೆ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದ್ದು, ಇದೀಗ ರೇಣುಕಾಚಾರ್ಯ ಇದೊಂದು ಕಿಡ್ನ್ಯಾಪ್ ಅಂತಾ ಹೇಳಿರುವುದು ಅಚ್ಚರಿ ಮೂಡಿಸಿದೆ. ಈ ಪ್ರಕರಣ ಪೊಲೀಸರಿಗೂ ಕೂಡ ಸವಾಲಾಗಿ ಪರಿಣಮಿಸಿದೆ.

ಸಿಸಿಟಿವಿ ಪರಿಶೀಲಿಸಿದ್ದ ಪೊಲೀಸರು
ಶಾಸಕ ರೇಣುಕಾಚಾರ್ಯರ ಸಹೋದರನ ಪುತ್ರ ನಾಪತ್ತೆ ಪ್ರಕರಣ ಕ್ಷಣಕ್ಷಣಕ್ಕೂ ಆತಂಕ ಹೆಚ್ಚಿಸುತ್ತಿದೆ. ಚಂದ್ರಶೇಖರ್ ಬಳಸುತ್ತಿದ್ದ ಕಾರು ನ್ಯಾಮತಿ ಮಾರ್ಗವಾಗಿ ಹೊನ್ನಾಳಿ ಕಡೆಗೆ ಬಂದದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸತೊಡಗಿದ್ದಾರೆ. ಎಂ. ಪಿ. ರಮೇಶ್ ಪುತ್ರ ಚಂದ್ರಶೇಖರ್ ಕಾಣೆಯಾಗುವ ಮುನ್ನಾ ದಿನದ ರಾತ್ರಿ 11:30ಕ್ಕೆ ಶಿವಮೊಗ್ಗದ ಜವಾಹಾರ್ ಲಾಲ್ ಇಂಜಿನಿಯರಿಂಗ್ ಕಾಲೇಜು ಬಳಿ ತನ್ನ ಸ್ನೇಹಿತನ ಜೊತೆ ಮೊಬೈಲ್‌ನಲ್ಲಿ ಮಾತನಾಡಿದ್ದಾರೆ. ಆತನ ಹೆಸರು ಕಿರಣ್ ಎನ್ನಲಾಗುತ್ತಿದ್ದು, ಮೊಬೈಲ್ ಕರೆ ಆಧರಿಸಿ ಮಾಹಿತಿ ಕಲೆ ಹಾಕಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ: ಚಂದ್ರುಗೆ ಕರೆ ಮಾಡಿದ್ದು ಯಾರು