ಜಾಮೀನು ಮಂಜೂರಾಗುತ್ತಿದ್ದಂತೆ ಮಾಡಾಳ್ ವಿರೂಪಾಕ್ಷಪ್ಪ ಪ್ರತ್ಯಕ್ಷ: ಚನ್ನಗಿರಿಯಲ್ಲಿ ಅದ್ಧೂರಿ ಸ್ವಾಗತ
ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ ಆಗಮಿಸುತ್ತಿದ್ದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕ
ದಾವಣಗೆರೆ, ಮಾರ್ಚ್ 7: ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಗುತ್ತಿಗೆದಾರರಿಂದ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಬಂಧನ ಆಗಿತ್ತು.
ಲೋಕಾಯುಕ್ತ ಪೊಲೀಸರು ಈ ಪ್ರಕರಣದಲ್ಲಿ ವಿರೂಪಾಕ್ಷಪ್ಪರನ್ನು ಮೊದಲ ಆರೋಪಿಯಾಗಿಸಿದ್ದರು. ಆ ಬಳಿಕ ನಾಪತ್ತೆಯಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಮಧ್ಯಂತರ ಜಾಮೀನು ಸಿಗುತ್ತಿದ್ದಂತೆ ಗ್ರಾಮದ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಮನೆಗೆ ಬಂದರು. ಗ್ರಾಮಕ್ಕೆ ಮಾಡಾಳ್ ವಿರೂಪಾಕ್ಷಪ್ಪ ಆಗಮಿಸುತ್ತಿದ್ದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡರು.

ಮಾಡಾಳ್ ವಿರೂಪಾಕ್ಷಪ್ಪ ಹುಲಿ ಎಂಬ ಜೈಕಾರವನ್ನೂ ಕೆಲವರು ಹಾಕಿದರು. ತೆರೆದ ವಾಹನದಲ್ಲಿ ಬಂದ ಮಾಡಾಳ್ ವಿರೂಪಾಕ್ಷಪ್ಪರನ್ನು ನೋಡುತ್ತಿದ್ದಂತೆ ಹಸ್ತಲಾಘವಕ್ಕೆ ಮುಗಿಬಿದ್ದರು. ಈ ವೇಳೆ ಒಬ್ಬರ ಮೇಲೊಬ್ಬರಂತೆ ಮುಗಿಬಿದ್ದು ಹೂವಿನ ಹಾರ ಹಾಕಿ ಸಂಭ್ರಮಿಸಿದರು.
ಕೆ ಎಸ್ ಡಿ ಎಲ್ ಗೆ ಸಂಬಂಧಿಸಿದ ಕಾಮಗಾರಿ ಟೆಂಡರ್ ನೀಡಲು ಮಾಡಾಳ್ ಪುತ್ರ ಪ್ರಶಾಂತ್ ಕಚೇರಿಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದರು. ಆ ಬಳಿಕ ಮನೆ ಮೇಲೆ ದಾಳಿ ಮಾಡಿದಾಗ ಆರು ಕೋಟಿ ರೂಪಾಯಿಗೂ ಅಧಿಕ ಹಣ, ಚಿನ್ನಾಭರಣ ಪತ್ತೆಯಾಗಿತ್ತು. ಪುತ್ರ ಬಂಧನವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದರು. ಯಾರ ಕೈಗೂ ಸಿಕ್ಕಿರಲಿಲ್ಲ. ಅಜ್ಞಾತ ಸ್ಥಳದಲ್ಲಿದ್ದರು. ಜಾಮೀನು ಮಂಜೂರು ಆಗುತ್ತಿದ್ದಂತೆ ಖುಷಿ ಖುಷಿಯಿಂದಲೇ ಗ್ರಾಮಕ್ಕೆ ಆಗಮಿಸಿದ್ದಾರೆ.
ಇನ್ನು "ಲಂಚ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದರೂ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅದ್ಧೂರಿ ಮೆರವಣಿಗೆ ಮಾಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ಮಾಡಾಳ್ ವಿರೂಪಾಕ್ಷಪ್ಪರು ಸಹ ಏನೋ ಸಾಧನೆ ಮಾಡಿಬಂದಿದ್ದೇನೆ ಎಂಬ ರೀತಿಯಲ್ಲಿ ವರ್ತನೆ ಮಾಡಿದರು.

40 ಲಕ್ಷ ರೂಪಾಯಿ ಲಂಚ ಪಡೆಯುವಾಗ ಪುತ್ರ ಸಿಕ್ಕಿ ಬಂಧನವಾಗಿದ್ದರೂ ಮಾಡಾಳ್ ವಿರೂಪಾಕ್ಷಪ್ಪರ ಮುಖದಲ್ಲಿ ಬೇಸರ ಕಂಡು ಬರಲಿಲ್ಲ. ಭ್ರಷ್ಟಾಚಾರ ಪ್ರಕರಣ ಸಂಬಂಧ ಆರು ದಿನಗಳ ಬಳಿಕ ಅಜ್ಞಾತ ಸ್ಥಳಕ್ಕೆ ಹೋಗಿದ್ದರು. ಜಾಮೀನು ಪಡೆದು ಬಂದಾಗ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗಲಾಯಿತು. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರಿಗೆ ರಾಜಮರ್ಯಾದೆ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ" ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications