ದಾವಣಗೆರೆ: ಈ ವಾರದಲ್ಲೇ ಅರ್ಧಶತಕ ಮುಟ್ಟುತ್ತಾ ಕ್ವಿಂಟಾಲ್ ಅಡಿಕೆ ಧಾರಣೆ?-ಈಗಿನ ಅಂಕಿಅಂಶಗಳನ್ನು ಗಮನಿಸಿ
ದಾವಣಗೆರೆ, ಜನವರಿ, 02: 2023 ಮುಗಿದಿ ಎಲ್ಲರೂ ಈಗಾಗಲೇ ಅದ್ಧೂರಿಯಾಗಿ 2024 ಅನ್ನು ಬರಮಾಡಿಕೊಂಡಿದ್ದಾರೆ. ಈ ವರ್ಷ ಅಡಿಕೆ ಬೆಳೆಗಾರರಿಗೆ ಖುಷಿ ತಂದಿದೆ. ಮತ್ತೆ ಅಡಿಕೆ ಧಾರಣೆಯಲ್ಲಿ ಏರಿಕೆ ಕಂಡಿದ್ದು, ಇದರಿಂದ ಬೆಳೆಗಾರರು ತುಸು ಸಂತಸಗೊಂಡಿದ್ದಾರೆ.
ಕಳೆದ ವರ್ಷ ಜುಲೈ ತಿಂಗಳಿನಲ್ಲಿ 57 ಸಾವಿರ ರೂಪಾಯಿ ಪ್ರತಿ ಕ್ವಿಂಟಲ್ ಅಡಿಕೆ ಧಾರಣೆ ಇತ್ತು. ಆದರೆ ಈ ವರ್ಷ ಅಷ್ಟು ಇಲ್ಲದಿದ್ದರೂ 49 ಸಾವಿರ ರೂಪಾಯಿ ಗಡಿಯತ್ತ ಬಂದಿದೆ. ಕಳೆದ ಹದಿನೈದರಿಂದ 20 ದಿನಗಳಿಂದ ಏರು ಮುಖದಲ್ಲಿ ಸಾಗುತ್ತಿದೆ. ಧಾರಣೆಯಲ್ಲಿ ಹೆಚ್ಚು ಆಗದಿದ್ದರೂ ಏರುಮುಖದಲ್ಲಿ ಸಾಗುತ್ತಿರುವುದು ಬೆಳೆಗಾರರಲ್ಲಿ ಸ್ವಲ್ಪ ನೆಮ್ಮದಿ ತಂದಂತಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಭತ್ತದ ಜೊತೆ ಅಡಿಕೆಯು ಪ್ರಮುಖ ಬೆಳೆ ಆಗಿದೆ. ಅದರಲ್ಲಿಯೂ ಅಡಿಕೆ ನಾಡು ಚನ್ನಗಿರಿ, ದಾವಣಗೆರೆ, ಹೊನ್ನಾಳಿ ಸೇರಿದಂತೆ ಹಲವೆಡೆ ಅಡಿಕೆ ಬೆಳೆಯಲಾಗುತ್ತದೆ. ವಾಣಿಜ್ಯ ಬೆಳೆಯಲ್ಲಿ ಪ್ರಮುಖವಾದುದು. ಇನ್ನು 50 ಸಾವಿರ ರೂಪಾಯಿ ಗಡಿ ಮುಟ್ಟುವ ಸಾಧ್ಯತೆಯಿದೆ ಎಂದು ಅಡಿಕೆ ಮಂಡಿ ವರ್ತಕರು ಹೇಳುತ್ತಿದ್ದಾರೆ.
ಕಳೆದ ವರ್ಷ ಸಾಕಷ್ಟು ಬಾರಿ ಏರಿಳಿತ ಕಂಡಿದ್ದ ಅಡಿಕೆ ಧಾರಣೆಯು ಜುಲೈ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. 60 ಸಾವಿರ ರೂಪಾಯಿ ದಾಟಬಹುದು ಎಂದುಕೊಂಡವರು ನಿರಾಸೆ ಅನುಭವಿಸಿದ್ದರು. ಮತ್ತೆ ಅಂದರೆ ಒಂದೇ ತಿಂಗಳಿಗೆ ಬರೋಬ್ಬರಿ 9 ಸಾವಿರ ರೂಪಾಯಿ ಕಡಿಮೆಯಾಗಿತ್ತು. ಧಾರಣೆಯು 47 ಸಾವಿರ ರೂಪಾಯಿಗೆ ಇಳಿಕೆಯಾಗಿತ್ತು.
ಸೆಪ್ಟಂಬರ್, ಅಕ್ಟೋಬರ್ ತಿಂಗಳಿನಲ್ಲಿ 46 ಸಾವಿರ ರೂಪಾಯಿಗೆ ಕುಸಿತ ಕಂಡಿತ್ತು. ವರ್ಷದ ಕೊನೆ ತಿಂಗಳು ಡಿಸೆಂಬರ್‌ನಲ್ಲಿ ಏರುಮುಖದಲ್ಲಿ ಸಾಗಿತ್ತು. ಈಗ 49 ಸಾವಿರ ರೂಪಾಯಿ ಗಡಿ ಮುಟ್ಟಿದೆ. ಮತ್ತಷ್ಟು ಧಾರಣೆಯಲ್ಲಿ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಹೊಸ ವರ್ಷದ ಆರಂಭದಲ್ಲಿ ಅಡಿಕೆ ದರ ಹೆಚ್ಚಳವಾಗಿದೆ. ರಾಶಿ ಅಡಿಕೆ ಗರಿಷ್ಠ ಬೆಲೆ ಕ್ವಿಂಟಲ್‌ಗೆ 48,900 ರೂಪಾಯಿ ಇದ್ದು, ಕನಿಷ್ಠ ಬೆಲೆ 43,099 ರೂಪಾಯಿ ದಾಖಲಿಸಿದೆ.
2023 ವರ್ಷದ ಕೊನೆ ತಿಂಗಳಲ್ಲಿ ಅಂದರೆ ದಿಸೆಂಬರ್‌ನಲ್ಲಿ ಬೆಲೆ ಏರು ಮುಖದಲ್ಲಿ ಸಾಗಿತ್ತು. 2024ರ ಹೊಸ ವರ್ಷದಲ್ಲಿಯೂ ಸಹ ಜಾಸ್ತಿಯಾಗಿದ್ದು, ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಈಗಲೇ ಅಡಿಕೆ ಮಾರುಕಟ್ಟೆಗೆ ಬಿಟ್ಟರೆ ಲಾಭ ಸಿಗುವುದಿಲ್ಲ. 50 ಸಾವಿರ ರೂಪಾಯಿ ಗಡಿ ದಾಟಿದ ಬಳಿಕ ಅಡಿಕೆ ಮಾರುಕಟ್ಟೆಗೆ ಬಿಡಲು ರೈತರು ಹಾಗೂ ಖೇಣಿದಾರರು ನಿರ್ಧರಿಸಿದ್ದಾರೆ. ಹಾಗಾಗಿ, ಮಾರುಕಟ್ಟೆಗೆ ಹೆಚ್ಚಾಗಿ ಅಡಿಕೆ ಸರಬರಾಜಾಗುತ್ತಿಲ್ಲ.
2023ರಲ್ಲಿ ಸಾಕಷ್ಟು ಏರಿಳಿತ ಕಂಡಿದ್ದರೂ, ವರ್ಷದ ಕೊನೆ ತಿಂಗಳಲ್ಲಿ ಮತ್ತೆ ಏರಿಕೆಯಾಗಿದ್ದು, ರೈತರಲ್ಲಿ ಖುಷಿ ತಂದಿತ್ತು. 2023ರ ಏಪ್ರಿಲ್‌ನಲ್ಲಿ 48 ಸಾವಿರವಿದ್ದ ಬೆಲೆ, ಮೇನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್‌ನಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಜುಲೈನಲ್ಲಿ 57 ಸಾವಿರ ತಲುಪಿತ್ತು. ಆಗಸ್ಟ್ ತಿಂಗಳಲ್ಲಿ ಸತತ ಇಳಿಕೆ ಕಂಡು 48 ಸಾವಿರ ತಲುಪಿತ್ತು.
ಸೆಪ್ಟೆಂಬರ್ ಮೊದಲ 15 ದಿನ 46 ಸಾವಿರಕ್ಕೆ ಕುಸಿದು ಆತಂಕ ಉಂಟು ಮಾಡಿತ್ತು. ಮತ್ತೆ ಏರುಮುಖದಲ್ಲಿ ಸಾಗಿದ್ದು ಅಕ್ಟೋಬರ್ ತಿಂಗಳ ಕೊನೆ ವಾರದಲ್ಲಿ. ಆಗ 47,800 ಏರಿಕೆ ದಾಖಲಿಸಿತ್ತು. ನವೆಂಬರ್ ತಿಂಗಳಿನಲ್ಲಿ ಅಡಿಕೆ ಧಾರಣೆಯಲ್ಲಿ ಏರಿಕೆಯಾಗಲೀ, ಇಳಿಕೆಯಾಗಲೀ ಆಗಲಿಲ್ಲ. 47 ಸಾವಿರ ರೂಪಾಯಿ ಸ್ಥಿರ ಧಾರಣೆ ಮಾರುಕಟ್ಟೆಯಲ್ಲಿ ದಾಖಲಾಗಿತ್ತು. ಆದರೆ ಡಿಸೆಂಬರ್ ತಿಂಗಳಿನಲ್ಲಿ ಮಾತ್ರ 49 ಸಾವಿರ ರೂಪಾಯಿ ಗಡಿ ದಾಟುವ ಮೂಲಕ ಅಡಿಕೆ ಬೆಳೆಗಾರರ ಸಂತಸಕ್ಕೆ ಕಾರಣವಾದರೂ, ಇಳುವರಿ ಕಡಿಮೆಯಾಗಿದ್ದು ಬೇಸರ ತರಿಸಿತ್ತು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 43,099 ರೂಪಾಯಿ, ಗರಿಷ್ಠ ಬೆಲೆ 48,900 ರೂಪಾಯಿ ವಹಿವಾಟು ನಡೆಸಿದೆ. ಸರಾಸರಿ ಬೆಲೆ 47,916 ರೂಪಾಯಿಗೆ ಮಾರಾಟವಾಗಿದೆ. ಇನ್ನೂ ಬೆಟ್ಟೆ ಅಡಿಕೆ ಗರಿಷ್ಠ 38,536 ರೂಪಾಯಿಗೆ ಮಾರಾಟವಾಗಿದೆ. ಒಟ್ಟಾರೆ, ಅಡಿಕೆ ಧಾರಣೆ ಸ್ಥಿರವಾಗಿದ್ದು, ಏರುಮುಖದಲ್ಲಿ ಸಾಗುತ್ತಿರುವುದು ಅಡಿಕೆ ಬೆಳೆಗಾರರಲ್ಲಿ ಸಮಾಧಾನ ತಂದಿದೆ.












Click it and Unblock the Notifications