ದಾವಣಗೆರೆ: ಮತ್ತೆ ಇಳಿಮುಖದತ್ತ ಸಾಗುತ್ತಿರುವ ಅಡಿಕೆ ಧಾರಣೆ, ಅಂಕಿಅಂಶಗಳ ವಿವರ ತಿಳಿಯಿರಿ
ದಾವಣಗೆರೆ, ಫೆಬ್ರವರಿ, 10: ಅಡಿಕೆ ಬೆಳೆಗಾರರು ವರ್ಷದ ಆರಂಭದಲ್ಲಿ ಖುಷಿಗೊಂಡಿದ್ದರು. ಕಳೆದ ವರ್ಷದ ಕೊನೆಯಲ್ಲಿ ಸ್ವಲ್ಪ ಆತಂಕ ಮನೆ ಮಾಡಿದ್ದರೂ ಈ ವರ್ಷ ಲಾಭದಾಯಕವಾಗುತ್ತದೆ, ಅಡಿಕೆ ಧಾರಣೆ ಹೆಚ್ಚಳವಾಗುತ್ತದೆ ಎಂಬ ನಿರೀಕ್ಷೆ ಹೊಂದಿದ್ದರು. ಕ್ವಿಂಟಾಲ್ 52 ಸಾವಿರದಿಂದ 60 ಸಾವಿರ ರೂಪಾಯಿ ಆಗಬಹುದು ಎಂಬ ಲೆಕ್ಕಾಚಾರ ಹಾಕಿದ್ದರು. ಇದಕ್ಕೆ ಪೂರಕ ಎಂಬಂತೆ ಆರಂಭದಲ್ಲಿ ಧಾರಣೆಯು ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಆದರೆ ಇದೀಗ ಅದೇ ಆಡಿದ್ದೇ ಆಟ ಎಂಬಂತೆ ಕುಸಿಯುತ್ತಾ ಸಾಗುತ್ತಿದೆ.
ಕಳೆದ ಹದಿನೈದು ದಿನಗಳಲ್ಲಿ ಬರೋಬ್ಬರಿ 2,200 ರೂಪಾಯಿ ಪ್ರತಿ ಕ್ವಿಂಟಲ್ ಅಡಿಕೆಗೆ ಕಡಿಮೆ ಆಗಿದ್ದು, ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಕಳೆದ ಹದಿನೈದು ದಿನಗಳಿಂದ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ನಿರಂತರವಾಗಿ ಕುಸಿಯುತ್ತಾ ಸಾಗುತ್ತಿದೆ. ವರ್ಷದ ಆರಂಭದಲ್ಲಿ 200, 300, 400 ರೂಪಾಯಿಯಷ್ಟು ಏರಿಕೆ ಕಂಡಿದ್ದ ಅಡಿಕೆ ದರ ಶುಕ್ರವಾರದ ಮಾರುಕಟ್ಟೆಯಲ್ಲಿ 2,200 ರೂಪಾಯಿಗೂ ಅಧಿಕ ಕಡಿಮೆ ಆಗಿರುವುದರಿಂದ ಬೆಳೆಗಾರರು ಅಡಿಕೆಯನ್ನು ಮಾರುಕಟ್ಟೆಗೆ ಬಿಡಬೇಕೋ ಬೇಡವೋ ಎಂಬ ಚಿಂತೆಯಲ್ಲಿ ಮುಳುಗುವಂತೆ ಮಾಡಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಅತಿ ಹೆಚ್ಚು ಅಡಿಕೆ ಬೆಳೆ ಬೆಳೆಯಲಾಗುತ್ತಿದೆ. ಇಲ್ಲಿಯೇ ಮಾರಾಟ ಹೆಚ್ಚು. ಉಳಿದಂತೆ ಹೊನ್ನಾಳಿ, ಹರಿಹರದಲ್ಲಿಯೂ ಅಡಿಕೆ ತೋಟಗಳಿವೆ. ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ, ಜಗಳೂರು ಸೇರಿದಂತೆ ಅಲ್ಲಲ್ಲಿ ಅಡಿಕೆ ತೋಟಗಳಿದ್ದು, ಅಡಿಕೆ ಕೊಯ್ಲು ಮುಗಿದಿದೆ. 60 ಸಾವಿರ ರೂಪಾಯಿ ಗಡಿ ಮುಟ್ಟಬಹುದು ಎಂದುಕೊಂಡಿದ್ದ ರೈತರಲ್ಲಿ ಮೊಗದಲ್ಲಿ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿದೆ.
ಜನವರಿ ತಿಂಗಳಿನಲ್ಲಿ ಏರುಮುಖದತ್ತ ಸಾಗಿದ್ದ ಅಡಿಕೆ ಧಾರಣೆಯು ಕಳೆದ ಹದಿನೈದು ದಿನಗಳಿಂದ ಹೆಚ್ಚಾಗಿ ಕುಸಿತ ಕಾಣುತ್ತಿರುವುದು ಯಾಕೆ ಎಂಬ ಗೊಂದಲದಲ್ಲಿ ಮುಳುಗಿದ್ದಾರೆ. ಅಡಿಕೆ ಧಾರಣೆಯು ಕುಸಿತ ಕಾಣುವಾಗ 200, 300, 500 ರೂಪಾಯಿ ಆಗುತಿತ್ತು. ಆದರೆ ಒಮ್ಮೆಲೆ 2,200 ರೂಪಾಯಿ ಧಾರಣೆ ಕುಸಿದಿದ್ದು, ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.
ಜನವರಿ 15ರಿಂದ ಇಳಿಮುಖದತ್ತ ಸಾಗುತ್ತಿರುವ ಅಡಿಕೆ ಧಾರಣೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುತ್ತೋ? ಏರಿಕೆ ಆಗುತ್ತೋ ಎಂಬ ಗೊಂದಲವೂ ಮೂಡುವಂತೆ ಮಾಡಿದೆ. ಒಂದು ತಿಂಗಳು ಏರುಮುಖ, ಮತ್ತೊಂದು ತಿಂಗಳು ಇಳಿಮುಖ ಎಂಬಂತಾಗಿದೆ. ದೊಡ್ಡ ದೊಡ್ಡ ಅಡಿಕೆ ಬೆಳೆಗಾರರು ಅಡಿಕೆ ಸಂಗ್ರಹಿಸಿಟ್ಟು, ಒಳ್ಳೆಯ ಧಾರಣೆ ಬಂದಾಗ ಮಾರುಕಟ್ಟೆಗೆ ಬಿಡುತ್ತಾರೆ.
ಒಂದು ಹೆಕ್ಟೇರ್, ಎರಡು ಹೆಕ್ಟೇರ್, ಮೂರು ಹೆಕ್ಟೇರ್ ಅಡಿಕೆ ತೋಟ ಹೊಂದಿರುವವರೇ ಹೆಚ್ಚು. ಇಂತಹವರು ವರ್ಷದಲ್ಲಿ ಬಂದ ಅಡಿಕೆ ಮಾರುಕಟ್ಟೆಗೆ ಬಿಟ್ಟು ಸಾಲ ತೀರಿಸಲು ಮುಂದಾಗುತ್ತಾರೆ. ಅಡಿಕೆ ಧಾರಣೆ ಕುಸಿತ ಕಂಡಿರುವುದರಿಂದ ಅಡಿಕೆ ಬಿಟ್ಟು ಹಣ ಪಡೆಯಬೇಕೋ ಇನ್ನು ಸ್ವಲ್ಪ ದಿನಗಳ ಕಾಯಬೇಕೋ ಎಂಬ ಗೊಂದಲದಲ್ಲಿ ಮುಳುಗಿದ್ದಾರೆ.
ಪ್ರತಿ ಕ್ವಿಂಟಲ್ ಅಡಿಕೆಯ ಗರಿಷ್ಠ ಧಾರಣೆ 48,399 ರಪಾಯಿ, ಕನಿಷ್ಠ ಬೆಲೆ 45,599 ರೂಪಾಯಿ ಆಗಿದೆ. ಕಳೆದ ವರ್ಷದ ಜೂನ್‌ನಲ್ಲಿ 50,000 ರೂಪಾಯಿ ಗಡಿ ದಾಟಿದ್ದ ಅಡಿಕೆ ಧಾರಣೆ ಅತಿ ಹೆಚ್ಚು ಅಂದರೆ ಜುಲೈ ತಿಂಗಳಿನಲ್ಲಿ ದಾಖಲಿಸಿತ್ತು. ಕ್ವಿಂಟಲ್ ಅಡಿಕೆ 57,000 ರೂಪಾಯಿ ದಾಖಲಿಸಿತ್ತು. ಅದಾದ ಒಂದೇ ತಿಂಗಳಿಗೆ ಬರೋಬ್ಬರಿ 9,000 ರೂಪಾಯಿ ಕುಂಠಿತವಾಗಿತ್ತು. ಹಾಗಾಗಿ, ಈಗ ಇರುವ ದರವೇ ಉತ್ತಮ ಅಡಿಕೆ ಬಿಡುತ್ತೇವೆ ಎಂದು ಕೆಲ ಅಡಿಕೆ ಬೆಳೆಗಾರರು ಹೇಳಿದರೆ, ಮತ್ತೆ ಕೆಲವರು ಏರಿಕೆಯಾಗಬಹುದೆಂಬ ವಿಶ್ವಾಸದಲ್ಲಿದ್ದಾರೆ.
2023ರ ಆಗಸ್ಟ್ ತಿಂಗಳಿನಲ್ಲಿ ಶುರುವಾದ ಅಡಿಕೆ ಧಾರಣೆ ಕುಸಿತ ಡಿಸೆಂಬರ್ ತಿಂಗಳವರೆಗೆ ಇತ್ತು. ವರ್ಷದ ಕೊನೆಯಲ್ಲಿ ಸ್ವಲ್ಪ ಮಟ್ಟದಲ್ಲಿ ಏರಿಕೆ ಕಂಡರೂ, ಜನವರಿ ತಿಂಗಳಿನಲ್ಲಿಯೂ ಇದು ಮುಂದುವರಿದಿತ್ತು. ಆದರೆ ಕಳೆದ ತಿಂಗಳ ಕೊನೆ ಹಾಗೂ ಫೆಬ್ರವರಿ ಮೊದಲ ವಾರ ಹಾಗೂ ಈ ವಾರವೂ ದರ ಕುಸಿತ ಆಗಿದ್ದು, ಅನ್ನದಾತರು ಕಂಗಾಲಾಗುವಂತೆ ಮಾಡಿದೆ.
ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ಗರಿಷ್ಠ ಬೆಲೆ 48,399 ರೂಪಾಯಿ ಆಗಿದ್ದರೆ, ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 45,599 ರೂಪಾಯಿ ಆಗಿದೆ. 47,548 ರೂಪಾಯಿ ಸರಾಸರಿ ಇದ್ದು, ಬೆಟ್ಟೆ ಅಡಿಕೆ ಗರಿಷ್ಠ 35,629 ರೂಪಾಯಿಗೆ ವಹಿವಾಟು ಮುಗಿಸಿದೆ.












Click it and Unblock the Notifications