ದಾವಣಗೆರೆಯಲ್ಲಿ ವಿಷವಿಕ್ಕಿ 150ಕ್ಕೂ ಹೆಚ್ಚು ನಾಯಿಗಳ ಕೊಲೆ
ದಾವಣಗೆರೆ, ನವೆಂಬರ್ 29: 150 ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ವಿಷ ಹಾಕಿ ಸಾಮೂಹಿಕವಾಗಿ ಹತ್ಯೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಬೆಳಗುಟ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿಯ ಆದೇಶದ ಮೇರೆಗೆ ಬೀದಿ ನಾಯಿಗಳಿಗೆ ವಿಷಯುಕ್ತ ಇಂಜೆಕ್ಷನ್ ನೀಡಿ ಶನಿವಾರ ಸಾಮೂಹಿಕವಾಗಿ ಹತ್ಯೆ ಮಾಡಲಾಗಿದೆ.
ಹತ್ಯೆ ಮಾಡಿದ ನಾಯಿಗಳನ್ನು ಬಳಿಕ ಸುಡಲಾಗಿದೆ. ಆದರೆ ವಿಷ ಹಾಕಿರುವ ಕಾರಣ ಕೆಲ ನಾಯಿಗಳು ಸಂಪೂರ್ಣವಾಗಿ ದಹನವಾಗಿಲ್ಲ.

ನಾಯಿಗಳ ಮಾರಣಹೋಮದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು ಇದೀಗ 80 ನಾಯಿಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಜತೆಗೆ ಬೆಂಗಳೂರಿನ ಎನ್.ಜಿ.ಒ ಒಂದರ ಪ್ರಯತ್ನದ ಮೇರೆಗೆ ಪೊಲೀಸರು ಸೋಮವಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಪ್ರಾಣಿ ಹಿಂಸೆ ತಡೆ ಕಾಯ್ದೆ 1960ರ ಸೆಕ್ಷನ್ 11 ಮತ್ತು ಐಪಿಸಿ ಸೆಕ್ಷನ್ 428 ಮತ್ತು 429ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ರಾತ್ರಿ ವೇಳೆಯಲ್ಲಿ ಮಕ್ಕಳು, ಮಹಿಳೆ ಹಾಗೂ ಹಸುಗಳ ಮೇಲೆ ನಾಯಿಗಳು ದಾಳಿ ಮಾಡುತ್ತಿದ್ದವು. ನಾಯಿಗಳ ಕಾಟವನ್ನು ತಪ್ಪಿಸುವ ಸಲುವಾಗಿ ಗ್ರಾಮ ಪಂಚಾಯಿತಿ ಈ ರೀತಿಯ ಕಠಿಣ ನಿರ್ಧಾರ ತೆಗೆದುಕೊಂಡಿದೆ ಎಂದು ಕಾಂಪ್ಯಾಶನ್ ಅನ್ಲಿಮಿಟೆಡ್ ಪ್ಲಸ್ ಆ್ಯಕ್ಷನ್ (ಸಿಯುಪಿಎ) ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಪ್ರಾಣಿ ಅಧಿಕಾರಿ ಕೆ.ಬಿ ಹರೀಶ್ ಹೇಳಿದ್ದಾರೆ.












Click it and Unblock the Notifications