D.Sudhakar Profile: ಹಿರಿಯೂರಿನಲ್ಲಿ ಮೂರನೇ ಗೆಲುವಿನ ನಿರೀಕ್ಷೆಯಲ್ಲಿರುವ ಡಿ.ಸುಧಾಕರ್ ವ್ಯಕ್ತಿ ಪರಿಚಯ
ಚಿತ್ರದುರ್ಗ, ಮಾಚ್ 29: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯ ಚಟುವಟಿಕೆಗಳು ಗರಿಗೆದರಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಜೊತೆಗೆ ಈ ಬಾರಿ ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹಾಗೂ ಆಮ್ ಆದ್ಮಿ ಪಕ್ಷ ಕೂಡ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿವೆ.
ಸದ್ಯ ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಘೋಷಣೆಯಾಗಿದ್ದು, ಸ್ಥಳೀಯ ಅಭ್ಯರ್ಥಿ ಗನ್ನಾಯಕನಹಳ್ಳಿ ಹೆಚ್ ಮಹೇಶ್ ಆಯ್ಕೆಯಾಗಿದ್ದರೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಡಿ.ಸುಧಾಕರ್ ಅವರಿಗೆ ಟಿಕೆಟ್ ನೀಡಲಾಗಿದೆ. ಟಿಕೆಟ್ ಘೋಷಣೆಗೂ ಮುನ್ನವೇ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದ ಡಿ.ಸುಧಾಕರ್, ಈ ಬಾರಿ ಚುನಾವಣೆ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿರುವ ನಾಯಕರಲ್ಲಿ ಡಿ.ಸುಧಾಕರ್ ಕೂಡ ಒಬ್ಬರು. ಈ ಬಾರಿಯ ಹಿರಿಯೂರು ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ರಾಜಕೀಯ ಪರಿಚಯ ಇಲ್ಲಿದೆ.
1961 ಮಾರ್ಚ್ 28ರಂದು ಚಳ್ಳಕೆರೆಯಲ್ಲಿ ಜನಿಸಿದ ಡಿ.ಸುಧಾಕರ್ ಈವರೆಗೆ ನಾಲ್ಕು ವಿಧಾನಸಭಾ ಚುನಾವಣೆಯನ್ನು ಎದುರುರಿಸಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಐದನೇ ಬಾರಿ ಕಣಕ್ಕಿಳಿಯಲಿದ್ದಾರೆ. ಮಾಜಿ ಸಚಿವ ಡಿ ಸುಧಾಕರ್ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಒಂದು ಬಾರಿ ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
2004ರಲ್ಲಿ ಚಳ್ಳಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣಾ ಕಣಕ್ಕಿಳಿದ ಡಿ ಸುಧಾಕರ್ ಬಿಜೆಪಿ ಅಭ್ಯರ್ಥಿ ಜಿ. ಬಸವರಾಜ್ ಮಂಡಿ ಮಠ ಅವರನ್ನು 27,351 ಮತಗಳ ಅಂತರದಲ್ಲಿ ಸೋಲಿಸುವ ಮೂಲಕ ವಿಧಾನಸೌಧ ಪ್ರವೇಶಿಸಿದರು. 2008ರಲ್ಲಿ ಚಳ್ಳಕೆರೆ ಮೀಸಲು ಕ್ಷೇತ್ರವಾದ್ದರಿಂದ ಹಿರಿಯೂರು ಕ್ಷೇತ್ರಕ್ಕೆ ಪಕ್ಷೇತರವಾಗಿ ಬಂದು ಭರ್ಜರಿ ಜಯಗಳಿಸಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದರು ಎಂಬ ಹೆಸರು ಪಡೆದರು.

ನಂತರ ನಡೆದ 2013 ರ ಚುನಾವಣೆಯಲ್ಲಿ ಪ್ರಬಲ ಜೆಡಿಎಸ್ ಅಭ್ಯರ್ಥಿ ಎ. ಕೃಷ್ಣಪ್ಪನ ವಿರುದ್ಧ 1,205 ಮತಗಳ ಅಂತದಲ್ಲಿ ಕೂದಲೆಳೆ ಅಂತರದಲ್ಲಿ ಪ್ರಯಾಸದ ಗೆಲುವು ಪಡೆದರು. ಹಿರಿಯೂರು ಕ್ಷೇತ್ರದಲ್ಲೇ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಡಿ.ಸುಧಾಕರ್‌ಗೆ ಬಿಜೆಪಿ ಸೋಲಿನ ರುಚಿ ತೋರಿಸಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ವಿರುದ್ಧ 12,875 ಮತಗಳ ಅಂತದಲ್ಲಿ ಸೋಲು ಕಂಡರು.
ಶಿಕ್ಷಣ ಪ್ರೇಮಿ, ಬಡವರ ಬಂಧು, ದೀನ ದಲಿತರ ಆಶಾಕಿರಣ, ಅಭಿವೃದ್ಧಿಯ ಹರಿಕಾರ, ಹೀಗೆ ವಿವಿಧ ಹೆಸರುಗಳಿಂದ ಕರೆಸಿಕೊಳ್ಳುವ ಶಾಸಕ ಡಿ. ಸುಧಾಕರ್ ಕಳೆದ ತಮ್ಮ ಅಧಿಕಾರ ಅವಧಿಯಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಯ ಆದ್ಯತೆಗೆ ಒತ್ತು ನೀಡಿದ್ದು ವಿಶೇಷವಾಗಿ ಮೂಲಭೂತ ಸೌಕರ್ಯಕ್ಕೆ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ ಎನ್ನುವುದು ಸ್ಥಳೀಯ ಅಭಿಪ್ರಾಯವಾಗಿದೆ.
ಡಿ ಸುಧಾಕರ್ ಅವರ ಪ್ರಮುಖ ಸಾಧನೆ ಎಂದರೆ 2016 ಬರಗಾಲದಲ್ಲಿ ತಮ್ಮ ಸ್ವಂತ ಹಣದಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಹಿರಿಯೂರಿನ ಉಡುವಳ್ಳಿ ಮತ್ತು ಮೇಟಿಕುರ್ಕೆ ಕೆರೆಯಲ್ಲಿ ಸುಮಾರು 450 ಎಕರೆ ಪ್ರದೇಶದಲ್ಲಿ ಮೇವು ಬೆಳೆದು ಪ್ರತಿಯೊಬ್ಬ ರೈತನ ಕುಟುಂಬದ ಜಾನುವಾರುಗಳಿಗೆ ಮೇವು ವಿತರಿಸಿ ಮಾದರಿ ಶಾಸಕ ಎಂಬ ಬಿರುದು ಪಡೆದಿದ್ದರು.

ಇನ್ನು ಈ ಬಾರಿಯ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಹಿರಿಯೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಡಿ. ಸುಧಾಕರ್ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಹಿರಿಯೂರು ನಗರದ 31 ವಾರ್ಡ್‌ಗಳಲ್ಲಿ ಸಂಚರಿಸಿ ಪ್ರತಿ ಮನೆ ಮನೆಗೂ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಉಳಿದಂತೆ ಗ್ರಾಮೀಣ ಪ್ರದೇಶಗಳ ಹಳ್ಳಿಗಳಿಗೂ ಭೇಟಿ ನೀಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಒಟ್ಟಾರೆ ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ.












Click it and Unblock the Notifications