ಡೆಡ್ ಸ್ಟೋರೇಜ್ ತಲುಪಿದ ವಾಣಿ ವಿಲಾಸ ಜಲಾಶಯ ನೀರಿನ ಮಟ್ಟ
ಹಿರಿಯೂರು, ಮೇ 22: ಚಿತ್ರದುರ್ಗ ಜಿಲ್ಲೆಯ ಏಕೈಕ ಅಣೆಕಟ್ಟು ಎಂದು ಕರೆಸಿಕೊಂಡಿರುವ ಹಿರಿಯೂರಿನ ವಿವಿ ಸಾಗರ (ಮಾರಿಕಣಿವೆ) ಜಲಾಶಯದ ಹಿನ್ನೀರಿನ ಮಟ್ಟ ಸಂಪೂರ್ಣ ಬತ್ತಿ ಹೋಗುತ್ತಿದ್ದು, ಡೆಡ್ ಸ್ಟೋರೇಜ್ ಹಂತಕ್ಕೆ ಬಂದು ನಿಂತಿದೆ.
ಹಿರಿಯೂರು ಸತತ ಬರಗಾಲಕ್ಕೆ ತತ್ತರಿಸಿ ಹೋಗಿದ್ದು, ಸುಮಾರು ಹತ್ತು ವರ್ಷಗಳ ಕಾಲ ತಾಲ್ಲೂಕಿನಲ್ಲಿ ಯಾವುದೇ ಪ್ರಮಾಣದ ಮಳೆ ಆಗಿಲ್ಲದ ಕಾರಣ ಜಲಾಶಯಕ್ಕೆ ನೀರು ಕೂಡ ಹರಿದು ಬಂದಿಲ್ಲ. ವಿವಿ ಸಾಗರ ಜಲಾಶಯದ ಒಟ್ಟು ನೀರಿನ ಮಟ್ಟ 135 ಅಡಿ ಇದ್ದು, ಪ್ರಸ್ತುತ ಜಲಾಶಯದಲ್ಲಿ 62.5. ಅಡಿ ನೀರು ಇರುವುದರಿಂದ ಡೆಡ್ ಸ್ಟೋರೇಜ್ ಹಂತಕ್ಕೆ ಬಂದು ನಿಂತಿದೆ. ಡೆಡ್ ಸ್ಟೋರೇಜ್ ತಲುಪಲು ಎರಡೂವರೆ ಅಡಿ ಮಾತ್ರ ಬಾಕಿ ಇದೆ. ಇತ್ತ ನೀರಿನ ಮಟ್ಟ ಕಡಿಮೆ ಆಗಿರುವುದರಿಂದ, ಆ ನೀರನ್ನು ಬಳಸಲು ಜೆಸಿಬಿ ಮೂಲಕ ಚರಂಡಿ ನಿರ್ಮಾಣ ಮಾಡಿ ಪೈಪ್ ಲೈನ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಕೆಲವು ಅಡಿಗಳಷ್ಟು ಬಾಕಿ ಇರುವ ಈ ನೀರು ಖಾಲಿ ಆದರೆ ಡೆಡ್ ಸ್ಟೋರೇಜ್ ಹಂತ ತಲುಪಿ 60 ಅಡಿಗೆ ಬಂದು ನಿಲ್ಲುತ್ತದೆ.
1898 ರಿಂದ 1907ರಲ್ಲಿ ಮೈಸೂರು ಅರಸರ ಕಾಲದಲ್ಲಿ ವಾಣಿ ವಿಲಾಸ ಜಲಾಶಯ ನಿರ್ಮಾಣಗೊಂಡಿದ್ದು, ಹಿರಿಯೂರು, ಚಿತ್ರದುರ್ಗ ಹಾಗೂ ಕಾಲ ಬದಲಾದಂತೆ ಚಳ್ಳಕೆರೆ ತಾಲ್ಲೂಕಿನ ಕುದಾಪುರದಲ್ಲಿರುವ DRDOಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಹಿಂದೆ ಪ್ರಮುಖವಾಗಿ ಹಿರಿಯೂರು ಭಾಗದ ಅಚ್ಚುಕಟ್ಟು ಪ್ರದೇಶಗಳಿಗೆ ಕೃಷಿ ಬಳಕೆಯ ಉದ್ದೇಶಕ್ಕಾಗಿ ಡ್ಯಾಂ ನಿರ್ಮಾಣ ಮಾಡಲಾಗಿತ್ತು.

ಆದರೆ ಮಲೆನಾಡಿನಂತೆ ಕಂಗೊಳಿಸುತ್ತಿದ್ದ ಹಿರಿಯೂರಿಗೆ ಇದೀಗ ಬರ ಎದುರಾಗಿದ್ದು, ಸುಮಾರು ನಲ್ವತ್ತು ಸಾವಿರಕ್ಕೂ ಹೆಚ್ಚು ಎಕರೆಗಳಲ್ಲಿ ತೆಂಗು, ಅಡಿಕೆ, ಬಾಳೆ ಸೇರಿದಂತೆ ಮತ್ತಿತರ ತೋಟಗಳು ಒಣಗಿ ರೈತನ ಬದುಕು ಹೀನಾಯ ಸ್ಥಿತಿ ತಲುಪಿದೆ. ಒಂದು ವೇಳೆ ಈ ಬಾರಿ ಮಳೆ ಕೈಕೊಟ್ಟರೆ ಇರುವ ತೋಟಗಳೂ ಒಣಗಿ, ಜಲಾಶಯದಲ್ಲಿ ಉಳಿದಿರುವ ನೀರೂ ಬತ್ತಿ ಹೋಗಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆಯಿದೆ.
ವಾಣಿ ವಿಲಾಸ ಜಲಾಶಯದ ಒಟ್ಟು ಎತ್ತರ 43.28 ಮೀಟರ್ (142 ಅಡಿ), ಉದ್ದ 405.50 ಮೀಟರ್, ಜಲಾವೃತ ಪ್ರದೇಶ 5374 ಚದರ ಕಿಲೋಮೀಟರ್, ಡ್ಯಾಂ ನೀರಿನ ಸಾಮರ್ಥ್ಯ 850.30 (30 TMC) ಇದೆ. ಡ್ಯಾಂ ನೀರಿನ ಮಟ್ಟ ಇದೀಗ ಡೆಡ್ ಸ್ಟೋರೇಜ್ ಹಂತ ತಲುಪಿದ್ದು, ಮುಂದಿನ ದಿನಗಳಲ್ಲಿ ಉಳಿದ ನೀರಿನ ಉಪಯೋಗ ಹೇಗೆ ಎಂಬುದೇ ಪ್ರಶ್ನೆಯಾಗಿದೆ.












Click it and Unblock the Notifications