Vani Vilasa Sagara Dam: ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಹೆಚ್ಚಿದ ಒಳಹರಿವು: ತುಂಬಲು ಇನ್ನೆಷ್ಟು ಅಡಿ ಬಾಕಿಯಿದೆ?
Vani Vilasa Sagara Dam: ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಪುರ ಬಳಿ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ವಾಣಿವಿಲಾಸ ಜಲಾಶಯಕ್ಕೆ ಒಳಹರಿವು ಮುಂದುವರೆದಿದೆ. ಇದರಿಂದ ದಿನದಿಂದಿ ದಿನಕ್ಕೆ ನೀರಿನ ಪ್ರಮಾಣ ಏರಿಕೆ ಆಗುತ್ತಲೇ ಇದೆ. ಹಾಗಾದರೆ ಜಲಾಶಯದಲ್ಲಿ ಇದೀಗ ಅಂದರೆ ಇಂದು (ಅಕ್ಟೋರ್ 07) ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.
ಒಟ್ಟು 135 ಅಡಿ (30 ಟಿಎಂಸಿ) ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ವಿವಿ ಸಾಗರ ಜಲಾಶಯಕ್ಕೆ ಪ್ರಸ್ತುತ 2,426 ಕ್ಯೂಸೆಕ್ ಒಳಹರಿವು ನೀರು ಹರಿದುಬರುತ್ತಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 121.50 ಅಡಿಗೆ ತಲುಪಿದೆ. ಇನ್ನು ಕಳೆದ 2022ರಲ್ಲಿ 89 ವರ್ಷಗಳ ಬಳಿಕ ಡ್ಯಾಂ ಕೋಡಿ ಬಿದ್ದಿತ್ತು. ಹಿಂದಿನ ವರ್ಷದಲ್ಲಿ ಹೇಳಿಕೊಳ್ಳುವಂತಹ ಮಟ್ಟದಲ್ಲಿ ನೀರು ಬಂದಿರಲಿಲ್ಲ.

ಈ ವರ್ಷದಲ್ಲಿ ಜಲಾಶಯಕ್ಕೆ ಭದ್ರಾ ನೀರು ಸೇರಿದಂತೆ ಮಳೆ ನೀರು ಕೂಡ ಹರಿದು ಬರುತ್ತಿದೆ. ಮತ್ತೊಂದು ಕಡೆ ಎತ್ತಿನಹೊಳೆ ಯೋಜನೆಯಿಂದ ವಿವಿ ಸಾಗರ ಜಲಾಶಯಕ್ಕೆ ಬರಬೇಕಾಯಿದ್ದ ನೀರು ಬರುತ್ತಿಲ್ಲ. ಒಂದು ವೇಳೆ ಈ ನೀರು ಬಂದರೆ ಜಲಾಶಯ ಶೀಘ್ರದಲ್ಲೇ ತುಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಮತ್ತೊಂದೆಡೆ ಹವಾಮಾನ ಇಲಾಖೆ ಮತ್ತೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಒಂದು ವೇಳೆ ಮಳೆ ಮುಂದುವರೆದರೆ, ಜಲಾಶಯಕ್ಕೆ ಒಳಹರಿವು ಮತ್ತಷ್ಟು ಹೆಚ್ಚಳ ಆಗಲಿದೆ.
ಹಿರಿಯೂರು ತಾಲ್ಲೂಕಿನಲ್ಲಿ ನೀರಿನ ಅಭಾವ ಸೃಷ್ಟಿಯಾಗಿದ್ದರಿಂದ ಈ ಭಾಗದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ 1907ರಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ವಿವಿ ಸಾಗರ ಡ್ಯಾಂನ್ನು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಟ್ಟಿಸಿದ್ದಾರೆ.
ಇನ್ನು ಸಾವಿರಾರು ಅಡಿಗಳಷ್ಟು ಬೋರ್ ವೆಲ್ ಕೊರೆಸಿದರೂ ನೀರು ಸಿಗುತ್ತಿರಲಿಲ್ಲ. ಇದೀಗ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳ ಹಿನ್ನೆಲೆಯಲ್ಲಿ ಸುತ್ತ ಮುತ್ತಲಿನ ರೈತರಿಗೆ ಅನುಕೂಲವಾಗಲಿದೆ. ಮತ್ತೊಂದು ಕಡೆ ಬೋರ್ ವೆಲ್‌ಗಳ ಅಂತರ್ಜಲ ಮಟ್ಟವೂ ಕೂಡ ಹೆಚ್ಚಳ ಆಗುತ್ತಲೇ ಇದೆ.
ರಾಜ್ಯದ ಬಹುತೇಕ ಜಲಾಶಯಗಳು ಮುಂಗಾರು ಹಂಗಾಮಿನಲ್ಲಿ ತುಂಬುವುದು ವಾಡಿಕೆ ಇದೆ. ಆದರೆ ವಾಣಿ ವಿಲಾಸ ಸಾಗರ ಜಲಾಶಯದ ನೀರಿನ ಹರಿವು ಗಮನಿಸಿದಾಗ ಹಿಂಗಾರು ಮಳೆಗೆ ಅತೀ ಹೆಚ್ಚು ನೀರು ಸಂಗ್ರಹಣೆ ಆಗುತ್ತಿರುವುದು ವಿಶೇಷವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ "ವೇದಾ" ನದಿ ಕಡೂರಿನ ಬಳಿ "ಅವತಿ" ಎಂಬ ನದಿಯನ್ನು ಸೇರಿ ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ.
ಹಿರಿಯೂರು ತಾಲೂಕಿನ ವಾಣಿ ವಿಲಾಸಪುರದ ಬಳಿ ಎರಡು ಗುಡ್ಡಗಳ ಮಧ್ಯೆ ನಿರ್ಮಿಸಿರುವ ಜಲಾಶಯವೇ ಮಾರಿಕಣಿವೆ ಅಣೆಕಟ್ಟು. ಇನ್ನು ವಾಣಿ ವಿಲಾಸ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್ ಪೀಸ್ ಎಂದು ಗುರುತಿಸಲಾಗಿದೆ. ಈ ಅಣೆಕಟ್ಟನ್ನು 1898ರಲ್ಲಿ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪರಾಜಮ್ಮಣಿ ಆದೇಶದ ಮೇರೆಗೆ 'ತಾರಾ ಚಾಂದ್ ದಲಾಲ್' ಎಂಬ ಇಂಜಿನಿಯರ್ ನೇತೃತ್ವದ ತಂಡವು ನಿರ್ಮಾಣ ಕಾಮಗಾರಿ ಆರಂಭಿಸಿತ್ತು.












Click it and Unblock the Notifications