ಕನ್ನಡ ವಿರೋಧಿ ಟಿಪ್ಪು ಜಯಂತಿ ಏಕೆ?: ಚಿಮೂ ಆಕ್ರೋಶ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಚಿತ್ರದುರ್ಗ, ನವೆಂಬರ್ 3: ಇತಿಹಾಸದಲ್ಲಿನ ದಾಖಲೆಗಳು, ಸಂಶೋಧನೆಗಳು ಟಿಪ್ಪು ಸುಲ್ತಾನ್ ನನ್ನು ಮತಾಂಧ, ಭಾಷಾಂಧ ಎಂದು ಸಾರುತ್ತಿದೆ. ಆದರೂ ರಾಜ್ಯ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗಿರುವುದು ದೊಡ್ಡ ಅಪಚಾರ ಎಂದು ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಹೇಳಿದ್ದಾರೆ.

ಇಲ್ಲಿನ ಡಿಸಿ ಕಚೇರಿ ಹತ್ತಿರ ಬುಧವಾರ ರಾಜವೀರ ಮದಕರಿನಾಯಕ ಗೌರವ ಸಂರಕ್ಷಣಾ ವೇದಿಕೆ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಆಯೋಜಿಸಿದ್ದ 'ಸಾಂಕೇತಿಕ ಒನಕೆ ಪ್ರತಿಭಟನೆ'ಯಲ್ಲಿ ಅವರು ಟಿಪ್ಪು ಬಗ್ಗೆ ತಾವು ಸಂಗ್ರಹಿಸಿದ್ದ ದಾಖಲೆ ಮಾಹಿತಿಯನ್ನು ಓದಿದರು.
ಟಿಪ್ಪು ಸುಲ್ತಾನ್ ನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ವೈಭವೀಕರಿಸಲಾಗಿದೆ ಎಂದು ಹೇಳಿದರು.[ಟಿಪ್ಪು ಜಯಂತಿ ಆಚರಣೆಗೆ ಕೊಡಗಿನಲ್ಲಿ ವಿರೋಧದ ಅಲೆ]

Chidananda Murthy

ಎಲ್ಲ ರಾಜರಂತೆಯೇ ಟಿಪ್ಪು: ಟಿಪ್ಪು ಎಲ್ಲ ರಾಜರಂತೆ ಶತ್ರುಗಳ ಜೊತೆ ಹೋರಾಡಿ 1799ರಲ್ಲಿ ಸಾವನ್ನಪ್ಪಿದನೇ ವಿನಾ ಸ್ವಾತಂತ್ರ್ಯ ಹೋರಾಟಗಾರ ಆಗಿರಲಿಲ್ಲ. ಅವನನ್ನು ಗಾಂಧೀಜಿ, ಪಟೇಲ್‌, ಸುಭಾಷ್ ಚಂದ್ರ ಬೋಸ್‌ ಜತೆ ಹೋಲಿಸಿದರೆ ಸತ್ಯಕ್ಕೆ ಅವಮಾನ ಮಾಡಿದಂತೆ ಆಗುತ್ತದೆ ಎಂದು ಅವರು ಹೇಳಿದರು.

ಶೃಂಗೇರಿ, ಮೇಲುಕೋಟೆ ಮಠಗಳಿಗೆ ಟಿಪ್ಪು ದತ್ತಿ ಕೊಟ್ಟಿದ್ದರೆ, ಅದೇನಿದ್ದರೂ ತನ್ನ ಅಧಿಕಾರಿಗಳ ವಿಶ್ವಾಸ ಪಡೆಯಲು ಮಾತ್ರ. ಮೇಲುಕೋಟೆ ಮತ್ತು ಶ್ರೀರಂಗಪಟ್ಟಣದ 700 ಬ್ರಾಹ್ಮಣ ಕುಟುಂಬಗಳ ಪೂರ್ವಜರನ್ನು ದೀಪಾವಳಿಯಂದೇ ಟಿಪ್ಪು ಕೊಂದ ಹಿನ್ನೆಲೆಯಲ್ಲಿ ಇವತ್ತಿಗೂ ಅಲ್ಲಿನವರು ಶೋಕದಿನವಾಗಿ ಭಾವಿಸುತ್ತಾರೆ ಎಂದರು.[ಕೊಡಗು: ಪೊಲೀಸ್ ಭದ್ರತೆಯಲ್ಲಿ ಟಿಪ್ಪು ಜಯಂತಿ]

ಕನ್ನಡ ವಿರೋಧಿ: ಮೈಸೂರು ರಾಜ್ಯದ ಆಡಳಿತ ಭಾಷೆ ಕನ್ನಡವಾಗಿತ್ತು. ಆತ ಅದನ್ನು ರದ್ದುಪಡಿಸಿ, ಪರ್ಸೋ ಅರೇಬಿಕ್‌ ಭಾಷೆಯನ್ನು ಆಡಳಿತ ಭಾಷೆ ಮಾಡಿದ. ಆತನ ಜಯಂತಿಯನ್ನು ಯಾವ ಕಾರಣಕ್ಕಾಗಿ ಆಚರಿಸಬೇಕು? ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗಿನ ಸಾವಿರಾರು ಜನ ಹಿಂದೂ ಮತ್ತು ಕ್ರಿಶ್ಚಿಯನ್ನರನ್ನು ಬಲವಂತವಾಗಿ ಮತಾಂತರಿಸಿ ಯುದ್ಧ ಶಿಕ್ಷಣ ನೀಡಿ, ಅದನ್ನು ಅಹಮ್ಮದೀಯ ಪಡೆ ಎಂದು ಕರೆದ.

ಟಿಪ್ಪು ತಂದೆ ಹೈದರಾಲಿಯೂ ಧರ್ಮಾಂಧ. ಮದಕರಿ ನಾಯಕರನ್ನು ಬಂಧಿಸಿ, ವಿಷ ಕುಡಿಸಿ ಕೊಂದವನು ಆತ. ಚಿತ್ರದುರ್ಗದ ಅಪಾರ ಸಂಪತ್ತಿನ ಜತೆಗೆ ಇಲ್ಲಿನ ಉಚ್ಚಂಗಿ ಎಲ್ಲಮ್ಮ, ಏಕನಾಥೇಶ್ವರಿ, ಸಂಪಿಗೆ ಸಿದ್ದೇಶ್ವರ ದೇಗುಲಗಳ ಸಂಪತ್ತನ್ನು ಲೂಟಿ ಮಾಡಿದ. ಈ ಕಾರಣಗಳಿಂದ ಟಿಪ್ಪು ಜಯಂತಿ ಆಚರಿಸಲು ಅನುಮತಿ ನೀಡಬಾರದು ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tippu Sultan was against to Kannada, why should we celebrate his jayanti in Karnataka, asked by senior researcher M.Chidananda Murthy in Chitradurga on Wednesday.
Please Wait while comments are loading...