Ration card: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಮುಗಿಬಿದ್ದ ಮಹಿಳೆಯರು, ಮುಂದಾಗಿದ್ದೇನು ಗೊತ್ತಾ?
ಹಿರಿಯೂರು, ಡಿಸೆಂಬರ್, 03: ಹೊಸದಾಗಿ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದರೆಂಬ ಮಾಹಿತಿ ತಿಳಿದ ಮಹಿಳೆಯರು ಮಧ್ಯರಾತ್ರಿಯಿಂದಲೇ ಸಾಲು ಸಾಲಾಗಿ ನಿಂತು ಬರಿಗೈಲಿ ಹಿಂತಿರುಗಿದ ಘಟನೆ ಭಾನುವಾರ ನಗರದಲ್ಲಿ ನಡೆದಿದೆ.
ನಗರದ ಕರೂರು ವೈಶ್ಯ ಬ್ಯಾಂಕ್ ಹಿಂಭಾಗದ ಕರ್ನಾಟಕ ಒನ್ ಸಮಗ್ರ ನಾಗರೀಕ ಕೇಂದ್ರ ಹಾಗೂ ತಾಲೂಕಿನಲ್ಲಿರುವ ಗ್ರಾಮ ಒನ್ ಕೇಂದ್ರಗಳಲ್ಲಿ ಸಮಸ್ಯೆ ಸಂಭವಿಸಿದೆ. ಹೊಸದಾಗಿ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದರೆಂಬ ನಕಲಿ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇದನ್ನು ನೋಡಿದ ಮಹಿಳೆಯರು ಶನಿವಾರ ಮಧ್ಯರಾತ್ರಿಯಿಂದಲೇ ಅರ್ಜಿ ಸಲ್ಲಿಸುವ ಕರ್ನಾಟಕ ಒನ್ ಕೇಂದ್ರದ ಮುಂಭಾಗದಲ್ಲಿ ಚಾಪೆ ಹಾಸಿ ಕುಳಿತು ಕಾಯುಲು ಮುಂದಾಗಿ ಈ ವೇಳೆ ನೂಕುನುಗ್ಗಲು ಉಂಟಾಯಿತು.

ಬೆಳಗ್ಗೆ 11 ಗಂಟೆಯವರೆಗೂ ಕಾದು ಕುಳಿತರು ಅಂಗಡಿಯವರು ಬಾಗಿಲು ತೆರೆಯಲಿಲ್ಲ. ಈ ವೇಳೆ ಇದನ್ನು ಗಮನಿಸಿದ ಕೆಲವು ಸಾರ್ವಜನಿಕರು ಇದು ಫೇಕ್ ಸುದ್ದಿಯಾಗಿದ್ದು, ಇಲಾಖೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಆದ್ದರಿಂದ ತಾವುಗಳು ಕಾದು ಕುಳಿತರು ಪ್ರಯೋಜನವಿಲ್ಲ ಎಂದು ತಿಳಿ ಹೇಳಿದಾಗ ಮಹಿಳೆಯರು ಬೇಸರಗೊಂಡು ಅಲ್ಲಿಂದ ಬರಿಗೈಯಲ್ಲಿ ಮನೆಗೆ ಹಿಂದಿರುಗಿದ್ದಾರೆ.
ಈ ನಕಲಿ ಪೋಸ್ಟರ್ ಹರಿದಾಡುತ್ತಿದ್ದರೂ ತಾಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರಿಗೆ ಯಾವುದೇ ಸರಿಯಾದ ಮಾಹಿತಿ ನೀಡದೇ ಇರುವುದು ಇಂತಹ ಅಸಮಾಧಾನ ಘಟನೆಗೆ ಕಾರಣರಾಗಿದ್ದಾರೆ. ಹೊಸದಾಗಿ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದರೆಂದು ತಿಳಿದು ನಾನು ಅರ್ಜಿ ಸಲ್ಲಿಸಲು ಬೆಂಗಳೂರಿನಿಂದ ಬಂದು ಬೆಳಗ್ಗೆ 6 ಗಂಟೆಯಿಂದ ಕ್ಯೂನಲ್ಲಿ ನಿಂತಿಕೊಂಡೆ ಎಂದು ವ್ಯಕ್ತಿ ಮಂಜುನಾಥ್ ಅಸಮಾಧಾನ ಹೊರಹಾಕಿದರು.
12 ಗಂಟೆಯಾದರೂ ಸಹ ಗ್ರಾಮ ಒನ್ ಕೇಂದ್ರ ಬಾಗಿಲು ತೆರೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಿನಿಂದ ಬಂದಿದ್ದ ವ್ಯಕ್ತಿ ಮಂಜುನಾಥ್ ಸರ್ಕಾರವನ್ನು ಆಗ್ರಹಿಸಿದರು.












Click it and Unblock the Notifications