Breaking: ಆಂಧ್ರಪ್ರದೇಶ ಪ್ರವೇಶಿಸಲಿರುವ ಭಾರತ್ ಜೋಡೋ ಯಾತ್ರೆ, ಶನಿವಾರ ಬಳ್ಳಾರಿ ಪ್ರವೇಶ
ಚಿತ್ರದುರ್ಗ , ಅಕ್ಟೋಬರ್ 14: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಶುಕ್ರವಾರ ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ರಾಂಪುರದಿಂದ ಆರಂಭಗೊಂಡಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೂಲಕ ಅಕ್ಟೋಬರ್ 10ರಂದು ಪಾದಯಾತ್ರೆ ಚಿತ್ರದುರ್ಗ ಜಿಲ್ಲೆಯನ್ನು ಪ್ರವೇಶಿಸಿತ್ತು. ಹಿರಿಯೂರು, ಚಳ್ಳಕೆರೆ ತಾಲ್ಲೂಕಿನ ಮೂಲಕ ಗುರುವಾರ ಮೊಳಕಾಲ್ಮೂರು ತಲುಪಿತ್ತು.
ಚಿತ್ರದುರ್ಗದ ಜಿಲ್ಲೆಯಲ್ಲಿ 5ನೇ ದಿನ ಪಾದಯಾತ್ರೆ ಶುಕ್ರವಾರ ನಿಗದಿತ ಸಮಯಕ್ಕಿಂತ 45 ನಿಮಿಷಗಳ ಕಾಲ ತಡವಾಗಿ ಆರಂಭವಾಯಿತು. ಪಾದಯಾತ್ರೆಯು ಆಂಧ್ರ ಪ್ರದೇಶವನ್ನು ಪ್ರವೇಶಿಸಿ ಸಂಜೆ ವೇಳೆಗೆ ಬಳ್ಳಾರಿ ಗಡಿ ಪ್ರದೇಶ ತಲುಪಲಿದೆ. ಶುಕ್ರವಾರ ಆಂಧ್ರ ಪ್ರದೇಶದ ಓಬಳಾಪುರಂನಲ್ಲಿ ಪಾದಯಾತ್ರೆ ನಡೆಯಲಿದೆ. ಶನಿವಾರ ಬೆಳಗ್ಗೆ 10 ಗಂಟೆಗೆ ಗಣಿನಾಡು ಬಳ್ಳಾರಿಗೆ ಪಾದಯಾತ್ರೆ ತಲುಪಲಿದೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿ ಹಲವು ನಾಯಕರು ರಾಹುಲ್ ಗಾಂಧಿಗೆ ಸಾಥ್ ನೀಡುತ್ತಿದ್ದಾರೆ.
ಬಳ್ಳಾರಿಯಲ್ಲಿ ಬೃಹತ್ ಸಮಾವೇಶ; ಭಾರತ್ ಜೋಡೋ ಯಾತ್ರೆ ಶನಿವಾರ ಗಣಿನಾಡು ಬಳ್ಳಾರಿ ತಲುಪಲಿದ್ದು, ಅಂದೇ ಬೃಹತ್ ಸಮಾವೇಶ ಕೂಡ ನಡೆಯಲಿದೆ. ಇದು ಕರ್ನಾಟಕಕ್ಕೆ ಭಾರತ್ ಜೋಡೋ ತಲುಪಿದ ನಂತರ ನಡೆಯುತ್ತಿರುವ ಮೊದಲ ಸಮಾವೇಶವಾಗಲಿದೆ.
ಪ್ರಿಯಾಂಕ ವಾದ್ರಾ ಭಾಗಿಯಾಗುವ ಈ ಸಮಾವೇಶದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳುವ ಮೂಲಕ ಶಕ್ತಿ ಪ್ರದರ್ಶನ ತೋರಲಿದ್ದಾರೆ. ಶನಿವಾರ ಮಧ್ಯಾಹ್ನ 1 ಗಂಟೆಗೆ ಸಮಾವೇಶವನ್ನು ಆಯೋಜಿಸಲಾಗಿದೆ.

ರಾಜ್ಯದಲ್ಲಿ ಈಗಾಗಲೇ ಚಾಮರಾಜನಗರ, ಮಂಡ್ಯ, ತುಮಕೂರು, ಚಿತ್ರದುರ್ಗದಲ್ಲಿ ಪಾದಯಾತ್ರೆ ಭಾರೀ ಯಶಸ್ಸು ಸಾಧಿಸಿ ಮುನ್ನುಗ್ಗುತ್ತಿದೆ. ಇದೀಗ ಬಳ್ಳಾರಿ ಸಮಾವೇಶದೊಂದಿಗೆ ಪಾದಯಾತ್ರೆಗೆ ಮತ್ತಷ್ಟು ಬಲ ತುಂಬಲು ಕಾಂಗ್ರೆಸ್ ನಿರ್ಧರಿಸಿದೆ.












Click it and Unblock the Notifications