ಮುರುಘಾ ಸ್ವಾಮೀಜಿ ಜಾಮೀನು; ನ.8ರಂದು ತೀರ್ಪು ಸಾಧ್ಯತೆ
ಚಿತ್ರದುರ್ಗ, ನವೆಂಬರ್ 02; ಪೋಕ್ಸೊ ಕಾಯ್ದೆಯಡಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಸ್ವಾಮೀಜಿ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಕ್ತಾಯಗೊಳಿಸಿ ಆದೇಶ ಕಾಯ್ದಿರಿಸಿದೆ. ಜಾಮೀನು ಕೋರಿ ಶಿವಮೂರ್ತಿ ಶರಣರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರವೂ ಮುಂದುವರಿಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ನವೆಂಬರ್ 8ರಂದು ಆದೇಶ ಪ್ರಕಟಿಸುವ ಸಂಭಾವ್ಯ ದಿನಾಂಕವನ್ನು ಪ್ರಕಟಿಸಿದೆ. ಒಡನಾಡಿ ಸೇವಾ ಸಂಸ್ಥೆ ಪರ ವಕೀಲರು ವಾದ ಮಂಡಿಸಿ, ಆರೋಪಿ ಶರಣರು ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನು ನೀಡಿದರೆ ಸಂತ್ರಸ್ತ ಬಡ ಮಕ್ಕಳಿಗೆ ಬೆದರಿಕೆ ಎದುರಾಗುವ ಸಾಧ್ಯತೆ ಇದೆ. ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿರುವ ಶರಣರ ನಡೆ ಮ್ಯಾಜಿಸ್ಟ್ರೇಟರ ಮುಂದೆ ಬಾಲಕಿಯರು ನೀಡಿರುವ ಹೇಳಿಕೆಯಲ್ಲಿ ಸಂಪೂರ್ಣ ಬಿಂಬಿತವಾಗಿದೆ. ನ್ಯಾಯಪೀಠ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೋರಿದರು.

ಪ್ರಾಸಿಕ್ಯೂಷನ್ ವಿರೋಧ: ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಸ್ವಾಮೀಜಿ ಮಠದಲ್ಲಿನ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಓದುತ್ತಿದ್ದ ಮೂರು-ನಾಲ್ಕನೇ ತರಗತಿಯ ಬಡ ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದ್ದಾರೆ. ಅವರೊಬ್ಬ ಪ್ರಭಾವಿ ವ್ಯಕ್ತಿಯಾಗಿದ್ದು ಅವರಿಗೆ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಷನ್ ಹೈಕೋರ್ಟ್‌ನಲ್ಲಿ ಮನವಿ ಮಾಡಿದೆ. ಹಾಗಾಗಿ ನ್ಯಾಯಾಲಯ ಈ ಅಂಶವನ್ನು ಪರಿಗಣಿಸಿದರೆ ಸ್ವಾಮೀಜಿಗೆ ಜಾಮೀನು ಸಿಗುವುದು ಕಷ್ಟವಾಗಬಹುದು.
ರಾಜ್ಯ ಪ್ರಾಸಿಕ್ಯೂಟರ್ ವಾದ ಮಂಡಿಸಿ, 'ಸಂತ್ರಸ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂದು ವೈದ್ಯಕೀಯ ವರದಿ ಹೇಳಿಲ್ಲ. ಇದು ಪೋಕ್ಸೊ ಪ್ರಕರಣವಾದ್ದರಿಂದ ಹಟಸಂಭೋಗ ನಡೆದಿದ್ದರೆ ಮಾತ್ರವೇ ಅಪರಾಧ ಎಂಬುದು ಇಲ್ಲಿ ಪರಿಗಣನಾರ್ಹವಲ್ಲ. ಸ್ವಾಮೀಜಿ ಮಕ್ಕಳನ್ನು ರಾತ್ರಿ ಊಟವಾದ ನಂತರ ತಮ್ಮ ಕೊಠಡಿಗೆ ಕರೆಸಿಕೊಂಡು ಲೈಂಗಿಕವಾಗಿ ಶೋಷಿಸುತ್ತಿದ್ದರು. ಸಂತ್ರಸ್ತ ಬಾಲಕಿಯರ ಖಾಸಗಿ ಅಂಗಾಂಗ ಸ್ಪರ್ಶಿಸುತ್ತಿದ್ದರು ಎಂಬ ಅಂಶಗಳು ಮ್ಯಾಜಿಸ್ಟ್ರೇಟ್ ಮುಂದೆ ಬಾಲಕಿಯರು ನೀಡಿರುವ ತಮ್ಮ ಸ್ವಯಂ ಹೇಳಿಕೆಯಲ್ಲಿ ವ್ಯಕ್ತವಾಗಿವೆ' ಎಂದು ಹೇಳಿದ್ದಾರೆ.
ಪೊಲೀಸರು ಮುರುಘಾ ಶರಣರನ್ನು 2022ರ ಸೆಪ್ಟೆಂಬರ್ 1ರಂದು ಬಂಧಿಸಿದ್ದು, ಅಂದಿನಿಂದಲೂ ಅವರು ಚಿತ್ರದುರ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮುರುಘಾಮಠದ ಶಿವಮೂರ್ತಿ ಸ್ವಾಮೀಜಿ ಪೋಕ್ಸೊ ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಕ್ರಿಮಿನಲ್ ಕೇಸ್ ಎದುರಿಸುವಂತಾಗಲು ಮಠದ ಮಾಜಿ ಆಡಳಿತಾಧಿಕಾರಿ ಎಸ್. ಕೆ. ಬಸವರಾಜನ್ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯೂ ಆದ ಅವರ ಪತ್ನಿ ಸೌಭಾಗ್ಯ ಬಸವರಾಜನ್ ದಂಪತಿಯ ಕ್ರಿಮಿನಲ್ ಪಿತೂರಿಯ ಕಾರಣ. ಹೀಗೆಂದು ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಸ್ವಾಮೀಜಿ ಪರ ವಕೀಲರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.
ಅರ್ಜಿದಾರರ ಪರ ವಾದಿಸಿದ ವಕೀಲರು, ಇಬ್ಬರು ಸಂತ್ರಸ್ತ ಬಾಲಕಿಯರು ಶರಣರ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮುನ್ನ ಒಂದು ತಿಂಗಳು ಬಸವರಾಜನ್ ಮತ್ತು ಸೌಭಾಗ್ಯ ವಶದಲ್ಲಿ ಅವರ ಮನೆಯಲ್ಲೇ ತಂಗಿದ್ದರು.
ತದನಂತರ ಚಿತ್ರದುರ್ಗದಿಂದ ದೂರದ ಮೈಸೂರಿಗೆ ತೆರಳಿ ಒಡನಾಡಿ ಎಂಬ ಸಂಸ್ಥೆಯ ಆಶ್ರಯ ಪಡೆದು ದೂರು ದಾಖಲಿಸಿದರು. ಇದೊಂದು ಪೂರ್ವನಿಯೋಜಿತ ಕೃತ್ಯ. ಸಂತ್ರಸ್ತ ಬಾಲಕಿಯರು ಮಠದ ಆವರಣದಲ್ಲಿನ ಹಾಸ್ಟೆಲ್‌ನಲ್ಲೇ ಇದ್ದರು, ಅವರ ಉಸ್ತುವಾರಿಯನ್ನು ಮಹಿಳಾ ವಾರ್ಡನ್ ನೋಡಿಕೊಳ್ಳುತ್ತಿದ್ದರು. ಸ್ವಾಮೀಜಿ ಹದಿನೈದು ದಿನಕ್ಕೋ ಅಥವಾ ತಿಂಗಳಿಗೆ ಒಮ್ಮೆಯೋ ಬಾಲಕಿಯರಿಗೆ ಇಂಗ್ಲಿಷ್ ಮತ್ತು ಸಂಸ್ಕೃತದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ವಾದ ಮಂಡಿಸಲಾಗಿದೆ.












Click it and Unblock the Notifications