ರಾಹುಲ್ ಗಾಂಧಿಗಿಂತ ಪೆದ್ದ ಯಾರೂ ಇಲ್ಲ; ಸಚಿವ ಶ್ರೀ ರಾಮುಲು
ಚಿತ್ರದುರ್ಗ, ಅಕ್ಟೋಬರ್, 28: ಈ ಹಿಂದೆ ಸಿದ್ದರಾಮಯ್ಯ ಬಿ. ಶ್ರೀರಾಮುಲುನಂತಹ ಪೆದ್ದ ಯಾರು ಇಲ್ಲ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಬಳ್ಳಾರಿಯಲ್ಲಿ ಸಚಿವರು ಪ್ರತಿಕ್ರಿಯಿಸಿದ್ದು, "ದೇಶದಲ್ಲಿ ರಾಹುಲ್ ಗಾಂಧಿಗಿಂತ ಪೆದ್ದ ಯಾರೂ ಇಲ್ಲ" ಎಂದು ತಿರುಗೇಟು ನೀಡಿದರು.
ಶುಕ್ರವಾರ ಚಿತ್ರದುರ್ಗದಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಛೀ, ಥೂ ಅನ್ನಿಸಿಕೊಂಡೇ ಆಡಳಿತ ಮಾಡಿದೆ. ಹಿಂದುಳಿದ ಸಮುದಾಯವನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಆದರೂ ಸಹ ಕಾಂಗ್ರೆಸ್ ಹಿಂದುಳಿದ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿಲ್ಲ" ಎಂದು ವಾಗ್ದಾಳಿ ನಡೆಸಿದರು.
"ಶ್ರೀರಾಮುಲು ಪೆದ್ದ ಎಂದು ಸಿದ್ದರಾಮಯ್ಯ ಟೀಕಿಸುತ್ತಾರೆ. ದೇಶದಲ್ಲಿ ರಾಹುಲ್ ಗಾಂಧಿಗಿಂತ ಪೆದ್ದ ಯಾರೂ ಇಲ್ಲ, ಸಿದ್ದರಾಮಯ್ಯ ಟೀಕಿಸುತ್ತಾರೆ ಎಂದರೆ ಸರಿದಾರಿಯಲ್ಲಿದ್ದೇವೆ ಎಂದರ್ಥ" ಎಂದರು.

ನ. 20ಕ್ಕೆ ಬಳ್ಳಾರಿಯಲ್ಲಿ ಎಸ್‌ಟಿ ಸಮಾವೇಶ; ಮಾಜಿ ಸಚಿವ ಶಿವನಗೌಡ ನಾಯಕ್ ಮಾತಿಗೆ ಧ್ವನಿಗೂಡಿಸಿದ ಶ್ರೀರಾಮುಲು, "ಜನಸಂಖ್ಯೆ ಆಧಾರದ ಮೇಲಿನ ಮೀಸಲಾತಿ ಯಾರೂ ಕೊಟ್ಟಿರಲಿಲ್ಲ. ಸಂವಿಧಾನದ ಆಶಯದಂತೆ ನಮ್ಮ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ ಸರ್ಕಾರ" ಎಂದರು.
"ಈ ಹಿಂದೆ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಮೀಸಲಾತಿ ಹೆಚ್ಚಿಸಬಹುದಿತ್ತು. ಆದರೆ ಇಚ್ಚಾಶಕ್ತಿ ಇರಲಿಲ್ಲ. ಇನ್ನು ಬರುವ ನವೆಂಬರ್ 20ಕ್ಕೆ ಬಳ್ಳಾರಿಯಲ್ಲಿ ಎಸ್‌ಟಿ ಸಮಾವೇಶ ಆಯೋಜನೆ ಮಾಡಲಾಗಿದೆ. ಸಿಎಂ ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಇದಾಗಿದೆ" ಎಂದು ತಿಳಿಸಿದರು.
"ಬಳ್ಳಾರಿಯಲ್ಲಿ ನಡೆಯುವ ಪರಿಶಿಷ್ಟ ಪಂಗಡ ಸಮಾವೇಶದ ಮೂಲಕ ರಾಜ್ಯ, ರಾಷ್ಟ್ರಕ್ಕೆ ಹೊಸ ಸಂದೇಶ ನೀಡುವುದರ ಜೊತೆಗೆ ಶಕ್ತಿ ಪ್ರದರ್ಶನ ಆಗಬೇಕು. ನನಗೆ ಅಧಿಕಾರಕ್ಕಿಂತ ಸಮಾಜ ಮುಖ್ಯವಾಗಿದೆ. ಅದಕ್ಕಾಗಿ ನಾನು ಕೊನೆಯವರೆಗೂ ದುಡಿಯುತ್ತೇನೆ" ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

ನಮ್ಮ ಸಮಾಜವೇ ಬಂಧು, ಬಳಗ; "ಸಮುದಾಯ ನನಗೆ ಎಲ್ಲವನ್ನೂ ನೀಡಿದೆ. ನನಗೆ ಬಂಧು, ಬಳಗವೆಲ್ಲ ನಮ್ಮ ಸಮಾಜವೇ ಆಗಿದೆ. ನಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿಗಳು ಮೀಸಲಾತಿ ಘೋಷಿಸಿದ್ದಾರೆ. ಶ್ರೀರಾಮುಲು ಬೆಳೆಯಲು ಸಮಾಜ ಕಾರಣ, ನಮ್ಮ ನಾಯಕ ಸಮುದಾಯದವರು ಬಿಜೆಪಿ ಪರವಾಗಿ ಇರಬೇಕು. ಮುಂದೆಯೂ ನಮ್ಮ ಸಮಾಜವನ್ನು ಗುರುತಿಸಬೇಕಾದರೆ ನಾವು ಬಿಜೆಪಿ ಪರ ನಿಲ್ಲಬೇಕು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಪರಿಶಿಷ್ಟ ಪಂಗಡಕ್ಕೆ ಅನುಕೂಲ ಕಲ್ಪಿಸಿದೆ. ನಾವು ಇದಕ್ಕಾಗಿ ಪ್ರಧಾನಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಬೇಕಿದೆ" ಎಂದರು.












Click it and Unblock the Notifications