ಭೂ ಕಬಳಿಕೆ ಆರೋಪ: ನನಗೆ ಯಾವ ನೋಟಿಸ್ ಕೊಟ್ಟಿಲ್ಲ, ಪಾರದರ್ಶಕವಾಗಿದ್ದೇನೆ ಎಂದ ಸಚಿವ ಡಿ.ಸುಧಾಕರ್
ಚಿತ್ರದುರ್ಗ, ಸೆಪ್ಟೆಂಬರ್, 15: ಭೂ ಕಬಳಿಕೆ ಹಾಗೂ ಅಟ್ರಾಸಿಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ಯಾವ ನೋಟಿಸ್ ಕೊಟ್ಟಿಲ್ಲ, ಬಂದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾವ ನೋಟಿಸ್ ಬಂದಿಲ್ಲ. ನೋಟಿಸ್ ಬಂದರೆ ನಾನು ತೆಗೆದುಕೊಂಡು, ನ್ಯಾಯಕ್ಕೆ ತಲೆ ಬಾಗುವೆ ಎಂದರು.
ರಾಜ್ಯದಲ್ಲಿ ವಿರೋಧ ಪಕ್ಷಗಳು ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಒತ್ತಾಯ ಮಾಡಲಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇದು ರಾಜಕೀಯ, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದರೆ ಯಶಸ್ವಿ ಆಗುತ್ತಾರಾ ಎಂದು ವಿರೋಧ ಪಕ್ಷಗಳ ಆರೋಪಕ್ಕೆ ಟಾಂಗ್ ನೀಡಿದರು. ಸತ್ಯ ಯಾವತ್ತಿದ್ದರೂ ಗೆಲ್ಲಬೇಕು. ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಅಷ್ಟೇ, ನಾನು ಬಿಜೆಪಿ, ಜೆಡಿಎಸ್ ರಾಜಕೀಯ ಮುಖಂಡರ ಜೊತೆ ಮಾತನಾಡಿದೆ. ಅವರು ನನಗೆ ವೈಯಕ್ತಿಕ ಗೆಳೆಯರು ಎಂದರು.

ಸ್ವಲ್ಪ ದಾಖಲೆ ನೋಡಿ ನನ್ನ ಬಗ್ಗೆ ರಿಯಾಕ್ಟ್ ಮಾಡಿ ಎಂದೇ, ಅದಕ್ಕೆ ಅವರು ಈ ಪ್ರಕರಣದಲ್ಲಿ ಸುಧಾಕರ್ ಅವರದ್ದು ಏನು ತಪ್ಪು ಇಲ್ಲ ಅಂತ ಗೊತ್ತು, ಆದರೂ ನಾವು ರಾಜಕಾರಣ ಮಾಡುತ್ತೇವೆ ಅಂತಾ ನನಗೆ ಹೇಳುತ್ತಾರೆ ಎಂದರು. ನಮ್ಮ ಪ್ರಜಾಪ್ರಭುತ್ವ ತುಂಬಾ ಸ್ಟ್ರಾಂಗ್ ಇದೆ. ಎಷ್ಟೊ ಜನ ಅಪರಾಧಿಗಳು ತಪ್ಪಿಸಿಕೊಳ್ಳಲಿ. ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು. ಜೀವನದಲ್ಲಿ ನಾನು ತುಂಬಾ ಕಷ್ಟ ಪಟ್ಟು ಮೇಲೆ ಬಂದಿದ್ದೇನೆ ಎಂದರು.
63 ವರ್ಷ ಜಿಲ್ಲೆಯಲ್ಲಿ, ರಾಜ್ಯದಲ್ಲಿ ನಾನು ಏನು ಅಂತಾ ಜನರು ನೋಡಿದ್ದಾರೆ. ಒಬ್ಬ ಅಲ್ಪಸಂಖ್ಯಾತನಾಗಿ ಈ ಜಿಲ್ಲೆ ಜನ ನನ್ನ 4 ಬಾರಿ ಗೆಲ್ಲಿಸಿದ್ದಾರೆ. ಇದಕ್ಕೆ ಕಾರಣ ನನ್ನ ಪ್ರಾಮಾಣಿಕತೆ, ವಿಶ್ವಾಸ ನೋಡಿ ತಾನೇ ಗೆಲ್ಲಿಸಿದ್ದಾರೆ. ಜನಾಂಗ ಇಲ್ಲದವನಿಗೆ ಹೀಗೆ ಜನ ನಂಬಿಕೆ ಇಟ್ಟು ಗೆಲ್ಲಿಸುತ್ತಾರಾ? ಇದರಲ್ಲಿ ಕುತಂತ್ರ ರಾಜಕೀಯ ತುಂಬಾ ಅಡಗಿದೆ ಎಂದರು.
2008ರಲ್ಲಿ ಮಂತ್ರಿ ಆದ ಒಂದು ತಿಂಗಳೊಳಗೆ ನನ್ನ ಮೇಲೆ ಸಿಬಿಐ ಕೇಸ್ ಹಾಕಿದ್ದರು. ಆವಾಗ ಬಿಜೆಪಿಯವರು ಕೈ ಬಿಟ್ಟಿದ್ದಾರಾ? ಆಗ ಅವರ ಜೊತೆ ಮೂರು ವರ್ಷ ಕಂಪ್ಲೀಟ್ ಇದ್ದೆ. ಈಗ ರಾಜಕೀಯ ಮಾಡುತ್ತಿದ್ದಾರೆ ಮಾಡಲಿ. ಈಗಾಗಲೇ ನಾನು ಸಿಎಂ, ಡಿಸಿಎಂ, ಗೃಹ ಸಚಿವರ ಜೊತೆ ಮಾತಾಡಿದ್ದೇನೆ. ನಾನು ಪಾರದರ್ಶಕವಾಗಿ ಇದ್ದೇನೆ, ನಾನ್ಯಾಕೆ ಭಯಪಡಲಿ ಎಂದರು.
ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ
ಭೂ ಕಬಳಿಕೆ ಹಾಗೂ ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಜೆಡಿಎಸ್ ನಿನ್ನೆ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿತ್ತು.
ಜಿಲ್ಲಾಧ್ಯಕ್ಷ ಎಂ.ಜಯಣ್ಣ ನೇತೃತ್ವದಲ್ಲಿ ಸಚಿವ ಡಿ. ಸುಧಾಕರ್ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ದಲಿತರ ವಿರೋಧಿ ಸಚಿವರನ್ನು ಸಂಪುಟದಿಂದ ಕೈ ಬಿಡುವಂತೆ ಆಗ್ರಹಿಸಿದ್ದರು.
ಪ್ರತಿಭಟನೆಯಲ್ಲಿ ಮಾತನಾಡಿದ ಎಂ.ಜಯಣ್ಣ, ರಾಜ್ಯದಲ್ಲಿ ಪುಂಖಾನುಪುಂಖವಾಗಿ ದಲಿತರ, ಮಹಿಳೆಯರ ಪರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು ಸುಧಾಕರ್ ಅವರಿಂದ ರಾಜೀನಾಮೆ ಪಡೆಯಬೇಕು. ದಲಿತರ ಮಹಿಳೆಯರ ಮೇಲೆ ದೌರ್ಜನ್ಯ ಮಾಡುವುದು ಸರಿಯಲ್ಲ. ಈಗಾಗಲೇ ಎಲ್ಲಾ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ನನ್ನದಲ್ಲ. ಮಾಧ್ಯಮಗಳಲ್ಲಿ ಮಿಮಿಕ್ರಿಯೆ ಮಾಡಿ ತೋರಿಸಿದ್ದಾರೆ ಎಂದು ಸಚಿವರು ಸಮರ್ಥಿಸಿ ಕೊಳ್ಳುವುದು ಭಂಡತನ ಎಂದಿದ್ದರು.
ತಾಲೂಕಿನಲ್ಲಿ ಧೀಮಂತ ನಾಯಕರಾದ ದಿ ಕೆಎಚ್. ರಂಗನಾಥ್, ಡಿ ಮಂಜುನಾಥ್ ಇಂತಹ ನಾಯಕರು ಆಡಳಿತ ನಡೆಸಿರುವ ಕ್ಷೇತ್ರದಿಂದ ಆಯ್ಕೆಯಾಗಿ ಸಚಿವ ಡಿ. ಸುಧಾಕರ್ ರೌಡಿಯಂತೆ ವರ್ತಿಸಿದ್ದಾರೆ. ಇಂತಹ ಸಚಿವರನ್ನು ಸರ್ಕಾರ ರಕ್ಷಣೆ ಮಾಡುವುದು ಸರಿಯಲ್ಲ ಎಂದಿದ್ದರು.
ನಗರದ ಆಸ್ಪತ್ರೆ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದರು.
ಡಿ.ಸುಧಾಕರ್ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ಯಶೋಧರ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಿವಶಂಕರ್, ತಾಲೂಕು ಅಧ್ಯಕ್ಷ ಹನುಮಂತರಾಯ, ಬಿದರಿಕೆರೆ ಚಿದಾನಂದ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.
ಇನ್ನು ಹಿರಿಯೂರು ಮಾಜಿ ಶಾಸಕಿ ಕೆ.ಪೂರ್ಣಿಮಾ ಕೂಡ ಸಚಿವ ಡಿ.ಸುಧಾಕರ್ ರಾಜೀನಾಮೆಗೆ ಆಗ್ರಹಿಸಿದ್ದರು, ಇಲ್ಲವಾದರೆ ಹಿರಿಯೂರು ತಾಲೂಕಿನಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ದಲಿತರ ಹೆಸರಿನಲ್ಲಿ ರಾಜಕೀಯ ಮಾಡಿ, ಇಂದು ಅದೇ ನಮ್ಮ ದಲಿತ ಬಂಧುಗಳ ಮೇಲೆ ಜಾತಿನಿಂದನೆ ಹಾಗೂ ಭೂಕಬಳಿಕೆ ಮಾಡಿ ನ್ಯಾಯ ಕೇಳಲು ಬಂದ ಹೆಣ್ಣು ಮಕ್ಕಳ ಮೇಲೆ ನಿಮ್ಮ ದೌರ್ಜನ್ಯ ಹಾಗೂ ಗೂಂಡಾಗಿರಿ ಎಷ್ಟು ಸರಿ...? ಪ್ರಶ್ನೆ ಮಾಡಿದ್ದಾರೆ. ರಾಜ್ಯದ ಸಚಿವರಾದ ನಿಮ್ಮ ಬಾಯಿಯಲ್ಲಿ ಇಂಥ ಮಾತುಗಳು ಹಾಗೂ ಜನಸಾಮಾನ್ಯರ ಬಳಿ ನೀವು ನಡೆದುಕೊಳ್ಳುವ ರೀತಿ ತೀರ ಖಂಡನೀಯವಾಗಿದೆ. ಮುಖ್ಯಮಂತ್ರಿಗಳು ನಿಮ್ಮ ಸಂಪುಟದ ಸಚಿವರೊಬ್ಬರ ಮೇಲೆ ಅಟ್ರಾಸಿಟಿ ಎಫ್.ಐ.ಆರ್ ಆದರು ಕೂಡ ಇನ್ನೂ ಬಂಧನವಾಗಿಲ್ಲ ಹಾಗೂ ನ್ಯಾಯ ಕೇಳಲು ಹೋದ ಬಡ ಜನರ ಮೇಲೆ ಗೂಂಡಾಗಿರಿ ಮಾಡಿರುವ ನಿಮ್ಮ ಸಚಿವರ ಮೇಲೆ ನಿಮ್ಮ ಕ್ರಮವೇನು ಎಂದು ಪೂರ್ಣಿಮಾ ಶ್ರೀನಿವಾಸ್ ಮುಖ್ಯಮಂತ್ರಿಗಳನ್ನು ಪ್ರಶ್ನೆ ಮಾಡಿದ್ದರು.
ಇತ್ತ ಯಲಹಂಕದಲ್ಲಿ ನಡೆದಿದೆ ಎನ್ನಲಾದ ಜಾತಿ ನಿಂದನೆ ಹಾಗೂ ಭೂ ಕಬಳಿಕೆ ವಿಚಾರದಲ್ಲಿ ಸಚಿವ ಡಿ.ಸುಧಾಕರ್ ವಿರುದ್ಧದ ತನಿಖೆ ಚುರುಕುಗೊಂಡಿದೆ. ಈ ವಿಚಾರವಾಗಿ ಯಲಹಂಕ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಅಲ್ಲದೇ ಪ್ರಕರಣ ಸಂಬಂಧ ಸಚಿವರು ಸೇರಿದಂತೆ ಹಲವರಿಗೆ ನೋಟಿಸ್ ನೀಡಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.












Click it and Unblock the Notifications