Hiriyur constituency; ಬಿಜೆಪಿಗೆ ಬಲ ನೀಡಲಿದೆಯೇ ಭದ್ರಾ ಮೇಲ್ದಂಡೆ?
ಹಿರಿಯೂರು ಕ್ಷೇತ್ರವನ್ನು ಸ್ಥಳೀಯರಿಗಿಂತಲೂ ಹೊರಗಿನವರು ಪ್ರತಿನಿಧಿಸಿರುವುದೇ ಅಧಿಕ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿರುವುದು ಇಲ್ಲಿ ಬಿಜೆಪಿಗೆ ಬಲ ತುಂಬಲಿದೆ ಎಂದು ಅಂದಾಜಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರ ಬರದ ನಾಡು ಎಂದು ಖ್ಯಾತಿಗಳಿಸಿತ್ತು. ವೇದಾವತಿ ನದಿ ದಂಡೆಯ ಮೇಲಿದ್ದರೂ ನೀರು ಮರೀಚಿಕೆಯಾಗಿತ್ತು. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಕ್ಷೇತ್ರದ ಜೀವನಾಡಿ ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಯಾಗಿದೆ. ಅಂತರ್ಜಲ ಮಟ್ಟ ಸುಧಾರಣೆಗೊಂಡು ಬೋರ್‌ವೆಲ್‌ಗಳು ಮರುಜೀವ ಪಡೆದಿವೆ. ಈ ಬಾರಿಯ ಚುನಾವಣೆಯಲ್ಲಿ ಭದ್ರಾ ನೀರು ತಂದಿರುವುದೇ ವಿಚಾರವಾಗುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿದೆ, ಇದು ಮತ ತಂದು ಕೊಡಲಿದೆಯೇ? ಕಾದು ನೋಡಬೇಕಿದೆ.
ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಗ್ರಾಮದ ಬಳಿ ಇರುವ ವಾಣಿ ವಿಲಾಸ ಸಾಗರ (ಮಾರಿಕಣಿವೆ) ಜಲಾಶಯ 2022ರಲ್ಲಿ ಭರ್ತಿಯಾಗಿ ಕೋಡಿ ಬಿದ್ದಿತ್ತು. 1933ರ ಬಳಿಕ ಮೊದಲ ಬಾರಿ ಜಲಾಶಯ ಕೋಡಿ ಬಿದಿದ್ದು ತಾಲೂಕಿನ ಜನರಲ್ಲಿ ಸಂತಸ ಉಂಟು ಮಾಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಟ್ಟುವ ವೇದಾ ನದಿ ಕಡೂರಿನಲ್ಲಿ ಅವತಿ ಎಂಬ ನದಿಯನ್ನು ಸೇರಿ ವೇದಾವತಿಯಾಗಿ ಹಿರಿಯೂರು ತಾಲೂಕಿಗೆ ಬರುತ್ತದೆ. ವಾಣಿ ವಿಲಾಸಪುರದಲ್ಲಿ ಎರಡು ಗುಡ್ಡಗಳ ನಡುವೆ ಈ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಭದ್ರಾ ನದಿಯ ನೀರನ್ನು ಇಲ್ಲಿಗೆ ಹರಿಸಲಾಗಿದೆ.

ಹಿರಿಯೂರು ಕ್ಷೇತ್ರವನ್ನು ಸ್ಥಳೀಯರಿಗಿಂತಲೂ ಹೊರಗಿನವರು ಪ್ರತಿನಿಧಿಸಿರುವುದೇ ಅಧಿಕ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಾರಂಪರಿಕ ಮತಗಳನ್ನು ಹೊಂದಿವೆ. ಕ್ಷೇತ್ರ ಇದುವರೆಗೂ ಎದುರಿಸಿದ 15 ಚುನಾವಣೆಗಳ ಪೈಕಿ 10ರಲ್ಲಿ ಕಾಂಗ್ರೆಸ್ ಗೆಲುವಿನ ಬಾವುಟ ಹಾರಿಸಿದೆ. ಚಳ್ಳಕೆರೆ ಎಸ್ಪಿ ಮೀಸಲು ಕ್ಷೇತ್ರವಾದ ಬದಲಾದ ಬಳಿಕ 2008ರಲ್ಲಿ ಡಿ. ಸುಧಾಕರ್ ಪಕ್ಷೇತರನಾಗಿ ಹಿರಿಯೂರಿನಲ್ಲಿ ಕಣಕ್ಕಿಳಿದು ಗೆದ್ದರು. ಬಿಜೆಪಿ ಸರ್ಕಾರಕ್ಕೆ ಬೆಂಬಲ ಕೊಟ್ಟು ಸಚಿವರು ಆದರು. 2013ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಗೆದ್ದರು. 2018ರಲ್ಲಿ ಬಿಜೆಪಿಯ ಪೂರ್ಣಿಮಾ ಶ್ರೀನಿವಾಸ್ ಸುಧಾಕರ್ ಸೋಲಿಸಿ ಕ್ಷೇತ್ರವನ್ನು ಬಿಜೆಪಿಗೆ ಗೆದ್ದುಕೊಟ್ಟರು.
ಈ ಬಾರಿ ಡಿ. ಸುಧಾಕರ್ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ 93 ಸಾವಿರ ಸದಸ್ಯರ ನೋಂದಣಿ ಮಾಡಿಸಿ ರಾಜ್ಯಕ್ಕೆ ಮೊದಲ ಸ್ಥಾನಗಳಿಸಿದರು. ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಸಮಸ್ಯೆ ಎಂದರೆ ಕಾಂಗ್ರೆಸ್ ಟಿಕೆಟ್‌ಗಾಗಿ ಕ್ಷೇತ್ರದಿಂದ 8 ಮುಖಂಡರು ಅರ್ಜಿ ಹಾಕಿದ್ದಾರೆ. ಕಾಂಗ್ರೆಸ್ ಬಿಫಾರಂ ನನ್ನ ಜೇಬಿನಲ್ಲಿಯೇ ಇದೆ ಎಂದು ಅವರು ಚುರುಕಿನಿಂದ ಓಡಾಡಿ ಚುನಾವಣೆ ತಯಾರಿ ಮಾಡುತ್ತಿದ್ದಾರೆ.
ಹಾಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮತ್ತೆ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಬಲವೂ ಅವರಿಗೆ ಸಿಕ್ಕಿದೆ. ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 25 ಸಾವಿರ ಮತಗಳ ಅಂತರದಿಂದ ಪೂರ್ಣಿಮಾ ಅವರನ್ನು ಮತ್ತೆ ಗೆಲ್ಲಿಸಿ ಎಂದು ಕರೆ ಕೊಟ್ಟು ಹೋಗಿದ್ದಾರೆ. ಪೂರ್ಣಿಮಾ ಅವರ ಪತಿ ಡಿ. ಟಿ. ಶ್ರೀನಿವಾಸ್, ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ, ಹಿಂದಿನ ಚುನಾವಣೆಗಳಲ್ಲಿ ಸೋತ ಕೆಲವರು ಬಿಜೆಪಿ ಟಿಕೆಟ್‌ಗಾಗಿ ತೆರೆಮರೆಯ ಪ್ರಯತ್ನ ಕೈಗೊಂಡಿದ್ದಾರೆ.

ಮಾಜಿ ಸಚಿವ ಡಿ. ಸುಧಾಕರ್ ಟಿಕೆಟ್ ಆಕಾಂಕ್ಷಿ. ಆದರೆ ಕಾಂಗ್ರೆಸ್ ಟಿಕೆಟ್‌ಗೆ ಜಿ. ಜಯರಾಮಯ್ಯ, ಸಿ. ವೀರಭದ್ರಬಾಬು, ಸಿ. ಬಿ. ಪಾಪಣ್ಣ, ಆರ್. ಮಂಜುನಾಥ್, ಬಿ. ಸೋಮಶೇಖರ್ ಸೇರಿದಂತೆ ಹಲವಾರು ಜನ ಆಕ್ಷಾಂಕ್ಷಿಗಳಿದ್ದಾರೆ. ಎಐಸಿಸಿ ವೀಕ್ಷಕ ಮಯೂರ್ ಜಯಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಡಿ. ಸುಧಾಕರ್ ಮತ್ತು ಬಿ. ಸೋಮಶೇಖರ್ ಬೆಂಬಲಿಗರು ಕೈ-ಕೈ ಮೀಲಾಯಿಸುವ ಹಂತಕ್ಕೆ ಅಸಮಾಧಾನ ಹೊರಹಾಕಿದ್ದರು. ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಂತೂ ಸ್ಪಷ್ಟ.
ಜೆಡಿಎಸ್ ಒಕ್ಕಲಿಗ ಸಮುದಾಯದವರನ್ನು ಅಖಾಡಕ್ಕೆ ಇಳಿಸಲಿದೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ಜಯಣ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜಿ. ಎಸ್. ಶಿವಪ್ರಸಾದ್ ಗೌಡ, ಕೆ. ಜಿ. ಮೂಡಲಗಿರಿಯಪ್ಪ, ಎಂ. ವೀರಭದ್ರಪ್ಪ ಟಿಕೆಟ್ ಆಕಾಂಕ್ಷಿಗಳು. ಫೆಬ್ರವರಿ ತಿಂಗಳಿನಲ್ಲಿ ಎಚ್. ಡಿ. ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ಮುಗಿಸಿದ್ದಾರೆ. ಜೆಡಿಎಸ್‌ನ 2ನೇ ಪಟ್ಟಿಯಲ್ಲಿ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗಬಹುದು.
ಈ ಬಾರಿಯ ಚುನಾವಣೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ಆಮ್ ಆದ್ಮಿ ಪಕ್ಷಗಳು ಸಹ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿವೆ. ಕೆಲವು ದಿನಗಳ ಹಿಂದೆ ಜನಾರ್ದನ ರೆಡ್ಡಿಯೇ ಇಲ್ಲಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ ಅವರು ಗಂಗಾವತಿಯಿಂದ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದಾರೆ.
ಕ್ಷೇತ್ರದ ಒಟ್ಟು ಮತದಾರರು 2,39,579. ಪುರುಷರು 1,19,097. ಮಹಿಳೆಯರು 1,20,467. ಇತರೆ 15.












Click it and Unblock the Notifications