89 ವರ್ಷಗಳ ಬಳಿಕ ಬಹುತೇಕ ಭರ್ತಿಯಾದ ವಾಣಿ ವಿಲಾಸ ಸಾಗರ ಜಲಾಶಯ
ಚಿತ್ರದುರ್ಗ, ಸೆಪ್ಟೆಂಬರ್ 01: ರಾಜ್ಯದ ಪುರಾತನ ಅಣೆಕಟ್ಟುಗಳಲ್ಲಿ ಒಂದಾದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯ 89 ವರ್ಷಗಳ ಬಳಿಕ ಬಹುತೇಕ ಭರ್ತಿಯಾಗಿದ್ದು, ದಾಖಲೆ ಮಟ್ಟದಲ್ಲಿ ನೀರು ಸಂಗ್ರಹವಾಗಿದೆ. ಜಲಾಶಯದ ಕೋಡಿ ಬೀಳಲು ಕ್ಷಣಗಣನೆ ಆರಂಭವಾಗಿದೆ.
ನೀರಿನ ಸಂಹಗ್ರಹದಲ್ಲಿ ವಿವಿ ಸಾಗರ ದಾಖಲೆ
ಪ್ರಸ್ತುತ ಜಲಾಶಯದ ನೀರಿನ ಮಟ್ಟ 129.85 ಅಡಿ ಇದ್ದು, ಇಂದಿನ ವರದಿಯಲ್ಲಿ ಜಲಾಶಯಕ್ಕೆ 3,546 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದೆ. 1933ರಲ್ಲಿ 130.25 ಅಡಿ ನೀರು ಸಂಗ್ರಹವಾಗಿ ಕೋಡಿ ಬಿದ್ದಿತ್ತು. ಇದೀಗ ಜಲಾಶಯ ಮತ್ತೆ ನೀರಿನ ಸಂಗ್ರಹಲ್ಲಿ ದಾಖಲೆ ನಿರ್ಮಿಸಿದೆ. ಜಲಾಶಯ ನಿರ್ಮಾಣ ಆದಾಗಿನಿಂದಲೂ ಎರಡನೇ ಬಾರಿಗೆ ಕೋಡಿ ಬಿದ್ದಿದ್ದು, ದಾಖಲೆ ನಿರ್ಮಿಸಲಿದೆ. ಕಳೆದ ಎರಡು ತಿಂಗಳಿನಿಂದ ಸುರಿದ ಮಳೆಯಿಂದಾಗಿ ಈ ವರ್ಷ ಜಲಾಶಯದಲ್ಲಿ ಸುಮಾರು 10 ಅಡಿಗಳಷ್ಟು ನೀರು ಸಂಗ್ರಹವಾಗಿದೆ.
1932ರಲ್ಲಿ 125.50 ಅಡಿ, 1933ರಲ್ಲಿ 135.25 ಅಡಿ, 1934ರಲ್ಲಿ 130.24 ಅಡಿ ನೀರು ಸಂಗ್ರಹವಾಗಿ ದಾಖಲೆ ನಿರ್ಮಿಸಿತ್ತು. ನಂತರ 1956ರಲ್ಲಿ 125 ಅಡಿ, 1957ರಲ್ಲಿ 125.05 ಅಡಿ, 1958ರಲ್ಲಿ 124.25 ಅಡಿ ನೀರು ಸಂಗ್ರಹ ಆಗಿತ್ತು. ಇದಾದ ಬಳಿಕ 2000ನೇ ಇಸವಿಯಲ್ಲಿ 122.50 ಅಡಿ, 2021ರಲ್ಲಿ 125.50 ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಿ ದಾಖಲೆ ಬರೆದಿತ್ತು. ಇದೀಗ 1958ರ ದಾಖಲೆಯನ್ನು ಹಿಂದಿಕ್ಕಿದ್ದು, ನೀರಿನ ಮಟ್ಟ 125.50 ಅಡಿ ದಾಟಿ ಹೊಸ ದಾಖಲೆಯನ್ನು ಸೃಷ್ಟಿಸಿದೆ.

ಜಲಾಶಯದ ಬಳಿ ಬಿಗಿ ಪೊಲೀಸ್ ಭದ್ರತೆ
ನಿನ್ನೆ ರಾತ್ರಿ 9:30ರ ಸಮಯದಲ್ಲಿ ಜಲಾಶಯದ ಕೋಡಿ ಬಿದ್ದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿತ್ತು. ಇದನ್ನು ನಂಬಿದ ಜನರು ಜಲಾಶಯವನ್ನು ನೋಡಲು ಕಾರು, ಬೈಕ್, ಆಟೋ ಇನ್ನಿತರ ವಾಹನಗಳಲ್ಲಿ ಕಿಕ್ಕಿರಿದು ಬಂದಿದ್ದರು. ಆಗ ಸ್ಥಳಕ್ಕೆ ಹಿರಿಯೂರು ಪೊಲೀಸರು ಭೇಟಿ ನೀಡಿ ಕೋಡಿ ಸ್ಥಳವನ್ನು ಪರಿಶೀಲಿಸಿದ್ದು, ಜಲಾಶಯದ ಕೋಡಿ ಬಿದ್ದಿಲ್ಲ ಎಂದು ಸ್ಪಷ್ಟನೆ ನೀಡಿದರು.

''ಕೋಡಿ ಬೀಳಲು ಇನ್ನೂ ಸಮಯ ಇದೆ. ಕೋಡಿ ಬಿದ್ದಾಗ ನಾವು ತಿಳಿಸುತ್ತೇವೆ, ಯಾರು ಜಲಾಶಯದ ಬಳಿ ಬರಬಾರದು'' ಎಂದು ಸೂಚಿಸಿದರು. ಕಿಕ್ಕಿರಿದು ಬಂದಿದ್ದ ಜನರನ್ನು ವಾಪಸ್ ಕಳುಹಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಪೊಲೀಸ್ ಇಲಾಖೆ ತಕ್ಷಣ ಬ್ಯಾರಿಕೇಡ್ ಹಾಕಿ, ಡಿಆರ್ ಪೊಲೀಸರನ್ನು ನಿಯೋಜನೆ ಮಾಡಿದರು. ಹೀಗೆ ಕೋಡಿ ಜಾಗಕ್ಕೆ ಯಾರು ಹೋಗದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ.
ತುರ್ತು ಪರಿಸ್ಥತಿ ನಿರ್ವಹಿಸಲು 7 ಆಂಬುಲೆನ್ಸ್‌ಗಳು, ವಾಹನಗಳು ಸಜ್ಜಾಗಿವೆ. 24/7 ವೈದ್ಯರ ಲಭ್ಯತೆ, ಔಷಧಿಗಳನ್ನು ಸಂಗ್ರಹಿಸಲಾಗಿದ್ದು, ಪಿಡಬ್ಲ್ಯೂಡಿ ಇಲಾಖೆಗೆ ಸುರಕ್ಷತೆಯನ್ನು ಕಾಪಾಡಲು ಸೂಚಿಸಿಲಾಗಿದೆ. ಎನ್‌ಡಿಆರ್‌ಎಫ್ ತಂಡಕ್ಕೆ ತುರ್ತು ಪರಿಸ್ಥಿತಿ ನಿರ್ವಹಿಸಲು ಮನವಿ ಮಾಡಲಾಗಿದೆ. ಪ್ರವಾಹದ ಸಂದರ್ಭದಲ್ಲಿ 5 ಹಾಸ್ಟೆಲ್‌ಗಳು, ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಹಾಸ್ಟೆಲ್‌ಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ. ಜನರ ರಕ್ಷಣೆಗೆ 24/7 ಸಹಾಯವಾಣಿ ತೆರೆಯಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ವಿದ್ಯುರ್ ಅಭಾವವನ್ನು ಆಗದಂತೆ ಬೆಸ್ಕಾಂ ಇಲಾಖೆಗೆ ಸೂಚಿಸಲಾಗಿದೆ.












Click it and Unblock the Notifications