ಹಿರಿಯೂರು: "ಮೆರವಣಿಗೆ ಮೇಲೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆಯುವವರನ್ನು ಮಚ್ಚಿನಿಂದ ಕೊಚ್ಚಬೇಕು"
ಹಿರಿಯೂರು, ಸೆಪ್ಟೆಂಬರ್, 23: ಇದೀಗ ದೇಶಾದ್ಯಂತ ಗಣೇಶ ವಿಸರ್ಜನಾ ಮೆರವಣಿಗೆಗಳು ನಡೆಯುತ್ತಿವೆ. ಈಗಾಗಲೇ ಹಲವೆಡೆ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಗಳು ನಡೆದಿದ್ದು, ಪೊಲೀಸರು ಬಿಗಿಬಂದೋಬಸ್ತ್ ಮಾಡುತ್ತಿದ್ದಾರೆ. ಇದರ ನಡುವೆಯೇ ಕೆಲವರು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದೋಗ ಅಂತಹದ್ದೇ ಒಂದು ಘಟನೆ ಹಿರಿಯೂರಿನಲ್ಲಿ ನಡೆದಿದೆ.
ನಮ್ಮ ದೇಶದಲ್ಲಿ ನಾವು ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆಯುವಂತಹ ಹುಚ್ಚು ನಾಯಿಗಳನ್ನು ಮಚ್ಚಿನಿಂದ ಕೊಚ್ಚಿ ಕೊಚ್ಚಿ ಹೊಡೆಯಬೇಕಿದೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ವಿಶೇಷ ಸಂಪರ್ಕ ಪ್ರಮುಖ್ ಮಂಜುನಾಥ್ ಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಹಮ್ಮಿಕೊಂಡಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಯ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದಿನ ಕಾಂಗ್ರೆಸ್ ನಾಯಕರು ರಾಷ್ಟ್ರೀಯತೆಯ ಪರವಾಗಿದ್ದರು, ಆದರೆ ಈಗಿನ ಕಾಂಗ್ರೆಸ್ ನಾಯಕರು ಜಿಹಾದಿಗಳ ಪರವಾಗಿದ್ದಾರೆ ಎಂದು ಕಿಡಿಕಾರಿದರು.
ರಾಷ್ಟ್ರೀಯ ಕಾಂಗ್ರೆಸ್‌ನ ಅಂದಿನ ನಾಯಕರಾಗಿದ್ದ ಬಾಲಗಂಗಾಧರನಾಥ ತಿಲಕ್ ಅವರು ರಾಷ್ಟ್ರ ಪ್ರೇಮಿಗಳಾಗಿದ್ದರು. ದೇಶಕ್ಕೊಸ್ಕರ ಸಂಘಟನೆ ಕಟ್ಟುವ, ಜನರನ್ನು ಜಾಗೃತಗೊಳಿಸುವಂತಹ ದೊಡ್ಡ ಕೆಲಸವನ್ನು ಪ್ರಾರಂಭಿಸಿದ್ದರು. ಬ್ರಿಟಿಷರು ದೇಶವನ್ನು ಆಳುವ ಸಂದರ್ಭದಲ್ಲಿ ದೇಶದ ಜನರನ್ನು ಒಂದು ಮಾಡುವ ನಿಟ್ಟಿನಲ್ಲಿ ತಿಲಕ್ ಅವರಿಂದ ಪ್ರಾರಂಭವಾದ ಗಣೇಶೋತ್ಸವ ಸಾರ್ವಜನಿಕ ಸ್ವರೂಪದ ಕಾರ್ಯಕ್ರಮವಾಯಿತು. ಇದು ಯಾವುದೋ ಸಂಘ ಸಂಸ್ಥೆ ಪ್ರಾರಂಭಿಸಿದ ಕಾರ್ಯಕ್ರಮವಲ್ಲ ಎಂದರು.
ನಮ್ಮ ದೇಶದಲ್ಲಿ ದೇವರನ್ನು ಗರ್ಭ ಗುಡಿಯಲ್ಲಿಟ್ಟು ಪೂಜೆ ಮಾಡುತ್ತೇವೆ. ಇದು ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ನಾವು ಮೂರ್ತಿ ಪೂಜೆ ಆರಾಧಕರಾಗಿದ್ದು, ಯಾರು ಮೂರ್ತಿ ಪೂಜೆ ಆರಾಧಿಸುವುದಿಲ್ಲವೋ ಅಂತಹ ದುಷ್ಟರು ಮತ್ತು ಜಿಹಾದಿಗಳು ಜಗತ್ತಿನ ಬೇರೆ ದೇಶಕ್ಕೆ ಹೋಗಲಿ ಎಂದು ಆಕ್ರೋಶ ಹೊರಹಾಕಿದರು.
ಎಲ್ಲರಿಗೂ ಒಳ್ಳೆಯದಾಗಲಿ ಎಂದು ಗಣಪತಿ ಮಹೋತ್ಸವ ಆಚರಣೆ ಮಾಡಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸುತ್ತಾರೆ. ಅಂತಹವರನ್ನು ನೋಡಿಕೊಂಡು ಸುಮ್ಮನೆ ಕೂರಬೇಕಾ? ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು. ನಾವು ಶಾಂತಿಯುತವಾಗಿ ವಿನಾಯಕನನ್ನು ಮೆರವಣಿಗೆ ಮಾಡಿ ನೀರಿಗೆ ಬಿಡುತ್ತೇವೆ. ನಾವು ಯಾರನ್ನೂ ದ್ವೇಷ ಮಾಡುವುದಿಲ್ಲ ಎಂದರು.
ಯಾರ ವಿರುದ್ಧವೂ ಘೋಷಣೆ ಕೂಗುವುದಿಲ್ಲ. ಆದರೆ ನಮ್ಮ ಮೇಲೆ ಏಕೆ ಕಲ್ಲು ತೂರಾಟ ಮಾಡುವುದು. ಇದನ್ನು ಹಿಂದೂ ಸಮಾಜ ಸಹಿಸಿಕೊಂಡಿರಬೇಕಾ? ಗಣೇಶ ಮೆರವಣಿಗೆಯಲ್ಲಿ ಯಾರು ಧರ್ಮ, ಸಂಸ್ಕೃತಿ ಹಾಗೂ ಪರಂಪರೆಯನ್ನು ವಿರೋಧ ಮಾಡ್ತಾರೋ ಅಂತಹವರನ್ನು ಸರ್ಕಾರ ಮಟ್ಟ ಹಾಕಬೇಕು ಎಂದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಅತ್ಯಾಚಾರ, ಹಿಂದೂ ವಿರೋಧಿ ವಾತಾವರಣ ಉಂಟಾದರೆ ಏಟಿಗೆ ಪ್ರತಿ ಏಟು ಕೊಡಬೇಕು. ನಾವು ಸಂಘಟನೆ ಆಗಲಿಲ್ಲವೆಂದರೆ ಹುಬ್ಬಳ್ಳಿ, ದಾವಣಗೆರೆ, ನಾಗಮಂಗಲದಂತಹ ಘಟನೆಗಳು ನಿರಂತರವಾಗುತ್ತವೆ. ಇಂತಹ ಘಟನೆಗಳು ನಡೆಯಬಾರದು ಎಂದರೆ ಹಿಂದೂ ಸಮಾಜ ಒಗ್ಗಟ್ಟಾಗಿ ಸಂಘಟಿತರಾಗಿರಬೇಕು. ಗಣೇಶೋತ್ಸವ ಕಾರ್ಯಕ್ರಮ ಪ್ರಚೋದನಾತ್ಮಕ ಕಾರ್ಯಕ್ರಮವಲ್ಲ, ಭಾವನಾತ್ಮಕ ಕಾರ್ಯಕ್ರಮವಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಆರ್.ಟಿ.ಪ್ರಶಾಂತ್, ಗೋವಿಂದಚಾರ್, ವೆಂಕಟೇಶ್, ಸತೀಶ್, ಗೋವರ್ಧನ್, ಧನುಷ್, ಕೊಂಡಾಚಾರ್, ಮಂಜುನಾಥೇಶ್ವರ, ಲಕ್ಷ್ಮಿ ಕುಮಾರ್, ಪ್ರಸನ್ನ, ಶ್ರೀನಿವಾಸ್,ಮನೋಜ್, ರಮೇಶ್ ನಾಯಕ, ರಂಗನಾಥ್, ಚೇತನ್, ದರ್ಶನ್ ಹಾಗೂ ಬಿಜೆಪಿ ಮುಖಂಡರುಗಳು ಹಾಜರಿದ್ದರು.
ಬೃಹತ್ ಶೋಭಾಯಾತ್ರೆ : ನಗರದ ಶಂಕರಮಠದ ಬಳಿ ಪ್ರತಿಷ್ಠಾಪನೆ ಮಾಡಿದ್ದ ಹಿಂದೂ ಮಹಾಗಣಪತಿಯ ಶೋಭಾ ಯಾತ್ರೆಯು ಭಾನುವಾರ ಅದ್ದೂರಿಯಾಗಿ ಜರುಗಿತು. ಶಂಕರಮಠದಿಂದ ಹೊರಟ ಮೆರವಣಿಗೆಯು ಹುಳಿಯಾರು ರಸ್ತೆ, ಚರ್ಚ್ ರಸ್ತೆ, ಆಸ್ಪತ್ರೆ ವೃತ್ತ, ಬಸ್ ನಿಲ್ದಾಣ, ರಂಜಿತ್ ಹೋಟೆಲ್ ಮೂಲಕ ಸಾಗಿ ಬಂದು ನೆಹರೂ ವೃತ್ತ, ಗಾಂಧಿ ವೃತ್ತದ ಮೂಲಕ ಸಾಗಿ ಉದಯ ಹೋಟೆಲ್ ಬಳಿಯಿರುವ ತೋಟದ ಬಾವಿ ತಲುಪಿದ ನಂತರ ಗಣೇಶನ ವಿಸರ್ಜನೆ ಮಾಡಲಾಯಿತು.
ಬೃಹತ್ ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಭಾಗವಹಿಸಿ ಮೆರವಣಿಗೆಗೆ ಶೋಭೆ ತಂದರು. ಡಿಜೆ ಶಬ್ದಕ್ಕೆ ನೂರಾರು ಯುವಕರು ಬಿಸಿಲನ್ನು ಲೆಕ್ಕಿಸದೆ ಕುಣಿದಿದ್ದು ವಿಶೇಷವಾಗಿತ್ತು. ವಿವಿಧ ಬಗೆಯ ವೇಷ ಧರಿಸಿದ್ದ ವೇಷಧಾರಿಗಳು ಎಲ್ಲರ ಗಮನ ಸೆಳೆದರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರವರು ಪಾಲ್ಗೊಂಡು ಗಣಪತಿ ಮೂರ್ತಿಗೆ ಪೂಜೆ ಸಲ್ಲಿಸಿದರು.












Click it and Unblock the Notifications