ಗಾಲಿ ಜನಾರ್ಧನ್ ರೆಡ್ಡಿ ಪಕ್ಷ ಸೇರಿದ ಹಿರಿಯೂರಿನ ಸ್ಥಳೀಯ ಅಭ್ಯರ್ಥಿ ಎಚ್. ಮಹೇಶ್
ಚಿತ್ರದುರ್ಗ, ಜನವರಿ, 08: ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಕ್ಷೇತ್ರ ಪ್ರಚಾರದಲ್ಲಿದ್ದ ಗನ್ನಾಯಕನಹಳ್ಳಿ ಎಚ್. ಮಹೇಶ್ ಇಂದು ಮಾಜಿ ಸಚಿವ ಜನಾರ್ಧನ್ ರೆಡ್ಡಿ ಅವರ ಹೊಸ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅಭ್ಯರ್ಥಿ ಮಹೇಶ್ ಅವರನ್ನು ಪಕ್ಷದ ಶಾಲು ಹಾಕಿ ಜನಾರ್ಧನ್ ರೆಡ್ಡಿ ಸ್ವಾಗತಿಸಿದ್ದಾರೆ.
ಭಾನುವಾರ ಗಂಗಾವತಿಯಲ್ಲಿರುವ ರೆಡ್ಡಿ ಪಕ್ಷದ ಕಛೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿರಿಯೂರಿನ ಹಲವಾರು ಕಾರ್ಯಕರ್ತರೊಂದಿಗೆ ಮಹೇಶ್ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ ಎಂದು ಕ್ಷೇತ್ರ ಪ್ರಚಾರದಲ್ಲಿದ್ದ ಮಹೇಶ್ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಬಿಜೆಪಿಯಲ್ಲಿ ಯಾವುದೇ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಜನಾರ್ಧನ ರೆಡ್ಡಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಹಾಗೆಯೇ ಇಂದು ಅಧಿಕೃತವಾಗಿ ಮಹೇಶ್ ರೆಡ್ಡಿ ಪಕ್ಷ ಸೇರಿದ್ದು, ಹಿರಿಯೂರು ಮತದಾರರಲ್ಲಿ ಕೂತುಹಲ ಮೂಡಿಸಿದೆ.
ಕೆಆರ್‌ಪಿಪಿ ಅಭ್ಯರ್ಥಿ ಪಕ್ಷ ಸೇರ್ಪಡೆ ಕುರಿತು ಮಾತನಾಡಿರುವ ಜನಾರ್ಧನ್ ರೆಡ್ಡಿಯವರು, ಈಗಿನಿಂದಲೇ ಪಕ್ಷ ಸಂಘಟನೆ ಬಲಗೊಳಿಸಿ ಚುನಾವಣೆ ಕಣಕ್ಕೆ ಧುಮುಕಿ, ಹಿರಿಯೂರು ಕ್ಷೇತ್ರದಲ್ಲಿ ಒಂದು ಬೃಹತ್ ಸಮಾವೇಶ ಏರ್ಪಡಿಸಲಾಗುವುದು. ನಾನು ಆ ಸಮಾವೇಶದಲ್ಲಿ ಪಾಲ್ಗೊಂಡು ಅಂದು ನಿಮ್ಮನ್ನು ಮತ್ತೊಮ್ಮೆ ಮತದಾರರ ಮುಂದೆ ಅಭ್ಯರ್ಥಿಯಾಗಿ ಘೋಷಣೆ ಮಾಡುತ್ತೇನೆ ಎಂದಿದ್ದಾರೆ. ನಿಮ್ಮ ಗೆಲುವಿಗೆ ನಾನು ಸಹಕಾರ ನೀಡುತ್ತೇನೆ. ನಿಮ್ಮ ಚುನಾವಣಾ ಪ್ರಚಾರದಲ್ಲಿ ನಾನು ಭಾಗವಹಿಸುತ್ತೇನೆ ಎಂದು ಜನಾರ್ಧನ್ ರೆಡ್ಡಿ ತಿಳಿಸಿದ್ದಾರೆ.

ಕೆಆರ್‌ಪಿಪಿ ಪಕ್ಷ ಸೇರ್ಪಡೆ ಆದ ಮಹೇಶ್
ಕೆಆರ್‌ಪಿಪಿ ಪಕ್ಷ ಸೇರ್ಪಡೆ ಕುರಿತು ಮಾತನಾಡಿರುವ ಅಭ್ಯರ್ಥಿ ಮಹೇಶ್, ಇದೇ ತಿಂಗಳ 11 ರಂದು ನಮ್ಮ ಪಕ್ಷದ ನಾಯಕರಾದ ಜನಾರ್ಧನ್ ರೆಡ್ಡಿಯವರ ಹುಟ್ಟುಹಬ್ಬ ಇರುವುದರಿಂದ ನಾವು ಇಂದು ಭೇಟಿಯಾಗಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದೇವೆ. ನಮ್ಮ ನಾಯಕ ರೆಡ್ಡಿಯವ ಪಕ್ಷದ ಸಿದ್ಧಾಂತ, ನಾಯಕರ ತಾಳ್ಮೆ, ವರ್ಚಸ್ಸು, ಅನುಭವ, ಮೆಚ್ಚುಗೆ ವ್ಯಕ್ತಪಡಿಸಿ ಪಕ್ಷವನ್ನು ಸೇರಿಕೊಂಡೆವು. ನಾಯಕರು ಸಹ ನಮ್ಮನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. ಹಿರಿಯೂರಿನಲ್ಲಿ ಪಕ್ಷದ ಕಛೇರಿ ಪ್ರಾರಂಭಿಸುವಂತೆ ಸೂಚಿಸಿದ್ದಾರೆ. ಶೀಘ್ರದಲ್ಲೇ ಕ್ಷೇತ್ರದಲ್ಲಿ ಬಹಿರಂಗ ಸಭೆ ಏರ್ಪಡಿಸಲು ತಿಳಿಸಿದ್ದಾರೆ. ಆ ಬಹಿರಂಗ ಸಭೆಯನ್ನು ಕ್ಷೇತ್ರದ ಮತದಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಂದು ಬಹಿರಂಗ ಸಭೆಯಲ್ಲಿ ಇನ್ನೂ ಅನೇಕ ಪಕ್ಷದ ಮುಖಂಡರು, ಕಾರ್ಯಕರ್ತರು ನಮ್ಮ ಪಕ್ಷ ಸೇರಲಿದ್ದಾರೆ. ಈ ಬಾರಿ ಸ್ಥಳೀಯ ಅಭ್ಯರ್ಥಿಗೆ ಮತದಾರರು ಆಶೀರ್ವಾದ ಮಾಡಲಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನೆಡೆ ಆಗಲಿದ್ಯಾ?
ಕೆಆರ್‌ಪಿಪಿ ಪಕ್ಷದ ಅಭ್ಯರ್ಥಿ ಸ್ಪರ್ಧೆಯಿಂದ ಬಿಜೆಪಿಗೆ ಬಾರಿ ಹಿನ್ನೆಡೆ ಆಗಲಿದೆ. ತಾಲೂಕಿನಲ್ಲಿ ಸುಮಾರು 9 ಸಾವಿರಕ್ಕೂ ಹೆಚ್ಚು ಲಿಂಗಾಯತ ಮತಗಳಿವೆ. ಇದೀಗ ಲಿಂಗಾಯತ ಸಮುದಾಯಕ್ಕೆ ಸೇರಿರುವ ಮಹೇಶ್‌ಗೆ ತನ್ನ ಸಮಾಜದವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಿಂದ ಬಿಜೆಪಿಗೆ ಬಾರಿ ಹಿನ್ನಡೆ ಉಂಟಾಗಲಿದ್ದು, ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಕಷ್ಟವಾಗಲಿದೆ. ಅಲ್ಲದೆ ಕಾಂಗ್ರೆಸ್, ಜೆಡಿಎಸ್ ಮತದಾರರನ್ನು ಸೆಳೆಯಲು ಮಹೇಶ್ ಮುಂದಾಗಿದ್ದು, ಐಮಂಗಲ ಹೋಬಳಿಯಲ್ಲಿ ಮಹೇಶ್ ಅವರಿಗೆ ಹೆಚ್ಚಿನ ಮತಗಳು ದೊರೆಯಲಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications