ಚಿತ್ರದುರ್ಗ: ವಕ್ಫ್ ಬೋರ್ಡ್‌ಗೆ ಸೇರಿದ 5 ಹೆಕ್ಟೇರ್ ಹಿಂದೂ ರುದ್ರಭೂಮಿ- ಎರಡು ಧರ್ಮದವರ ಮಧ್ಯೆ ಧಂಗಲ್
ಚಿತ್ರದುರ್ಗ, ನವೆಂಬರ್, 07: ಈಗಾಗಲೇ ವಕ್ಫ್ ವಿವಾದದ ವಿಚಾರ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಈ ಮೂಲಕ ರಾಜ್ಯದಲ್ಲಿ ಹಿಂದೂ ರೈತರ ಜಮೀನುಗಳು, ದೇವಸ್ಥಾನಗಳನ್ನು ವಕ್ಫ್ ಬೋರ್ಡ್‌ಗೆ ಇದ್ದಕ್ಕಿದ್ದಂತೆ ಸೇರ್ಪಡೆ ಮಾಡಿರುವುದು ಜನತೆಯನ್ನು ಆತಂಕಕ್ಕೆ ದೂಡಿದೆ. ಅಲ್ಲದೆ, ಸರ್ಕಾರ ರೈತರ ಕೆಂಗಣ್ಣಿಗೆ ಗುರಿಯಾಗಿದೆ.
ಅಂದಹಾಗೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ನಂದನ ಹೊಸೂರು ಗ್ರಾಮದ ಹಿಂದೂ ರುದ್ರಭೂಮಿಯನ್ನು ಇದೀಗ ವಕ್ಫ್ ಬೋರ್ಡ್‌ಗೆ ಸೇರಿಸಿದ್ದು, ಜಿಲ್ಲೆಯ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಹೌದು ನಂದನಹೊಸೂರು ಗ್ರಾಮದಲ್ಲಿ ಹಿಂದೂ ರುದ್ರಭೂಮಿಯನ್ನು ಇದೀಗ ವಕ್ಫ್ ಬೋರ್ಡ್‌ಗೆ ಸೇರಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 1965ರಲ್ಲಿ ಗ್ರಾಮದ ಜಮೀನನ್ನು ಸ್ಮಶಾನ ಜಾಗ ಎಂದು ಸೇರಿಸಲಾಗಿತ್ತು. ಇದಾದ ನಂತರ 2017-2018ರಲ್ಲಿ ಮುಸ್ಲಿಂ ವಕ್ಫ್ ಬೋರ್ಡ್‌ಗೆ ಸೇರಿಸಲಾಗಿದೆ ಎನ್ನಲಾಗಿದೆ.
ಇದಕ್ಕೂ ಮುನ್ನ ಅಲ್ಲಿನ ಗ್ರಾಮಸ್ಥರು ಹುಲ್ಲಿನ ಬಣವೆ ಹಾಕಿಕೊಂಡು ಕಣವನ್ನಾಗಿ ಮಾಡಿಕೊಂಡಿದ್ದರು. ಇದೀಗ ಜಾಗ ವಕ್ಫ್ ಬೋರ್ಡ್‌ಗೆ ಸೇರಿದೆ ಎಂದಾಗ ಹಿಂದೂಗಳು ಮತ್ತು ಮುಸ್ಲಿಂರ ನಡುವೆ ಜಾಗದ ವಿಚಾರದಲ್ಲಿ ವಾದ-ವಿವಾದಗಳು ಶುರುವಾಗಿವೆ. ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಜಾಗದ ದಾಖಲೆಗಳನ್ನು ಪರಿಶೀಲಿಸಿ, ಏನಾಗಿದೆ ಎಂಬುದನ್ನು ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.
ಚಾಮರಾಜನಗರಕ್ಕೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ: ರಾಜ್ಯಾದ್ಯಂತ ಸದ್ದು ಮಾಡುತ್ತಿರಯವ ವಕ್ಫ್ ಆಸ್ತಿ ವಿವಾದ ಗಡಿ ಜಿಲ್ಲೆ ಚಾಮರಾಜನಗರಕ್ಕೂ ಕಾಲಿಟ್ಟಿದ್ದು, ಇಲ್ಲಿನ ವಿ.ಸಿ.ಹೊಸೂರಿನ ಮೂವರು ರೈತರು ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಗ್ರಾಮದ ಮೂವರು ರೈತರ ಜಮೀನನ್ನು ವಕ್ಫ್ ಸಂಸ್ಥೆಯ ಹೆಸರಿಗೆ ಖಾತೆ ಬದಲಿಸುವಂತೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ತಹಶೀಲ್ದಾರರಿಗೆ 2022ರ ಜುಲೈನಲ್ಲೇ ಬರೆದಿರುವ ಪತ್ರ ಇದೀಗ ಬೆಳಕಿಗೆ ಬಂದಿದೆ. ಬಂಡಿಗೆರೆ ಸರ್ವೆ ನಂಬರ್ 179ರ 2 ಎಕರೆ 9 ಗುಂಟೆ ಜಮೀನು ಎಚ್‌ಜಿ ಶಾಂತಪ್ಪ, ಎಚ್‌ವಿ ಗಿರಿಮಲ್ಲು, ಎಚ್.ವಿ.ನಾಗರಾಜು ಎಂಬುವರ ಹೆಸರಿನಲ್ಲಿದ್ದು, ಇದನ್ನು ಹರದನಹಳ್ಳಿಯ ಜಾಮಿಯಾ ಮಸೀದಿ ವಕ್ಫ್ ಆಸ್ತಿ ಎಂದು ಖಾತೆ ಬದಲಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ.
ಈ ಹಿನ್ನಲೆಯಲ್ಲಿ ಖಾತೆ ಬದಲಿಗೆ ಕ್ರಮ ಕೈಗೊಳ್ಳಲು ಮೂರು ತಿಂಗಳ ಹಿಂದೆಯಷ್ಟೇ ಆರ್.ಆರ್.ಟಿ ವಿಭಾಗದಿಂದ ರಾಜಸ್ವ ನಿರೀಕ್ಷಕರಿಗೆ ಈ ಪತ್ರ ರವಾನೆ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತರು, 45 ವರ್ಷಗಳ ಹಿಂದೆ ನಮ್ಮ ತಂದೆ ಮುಸ್ಲಿಂ ವ್ಯಕ್ತಿಯಿಂದ ಜಮೀನು ಖರೀದಿಸಿದ್ದಾರೆ. ಆದರೆ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಪತ್ರದ ಪ್ರತಿ ನಮಗೆ ಇದೀಗ ಲಭ್ಯವಾಗಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ನಮಗೂ ಜಮೀನು ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.












Click it and Unblock the Notifications