ಕಾಡುಗೊಲ್ಲರಿಗೆ ಎಸ್ಟಿ ಭಾಗ್ಯ: ಈಡೇರುತ್ತಾ ಹೆಚ್.ಡಿ.ದೇವೇಗೌಡ್ರು ಕೊಟ್ಟ ಭರವಸೆ?
ಹಿರಿಯೂರು, ಫೆಬ್ರವರಿ, 13: ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರದ ಸಹಮತ ಇದೆ. ಕೇಂದ್ರ ಸರ್ಕಾರದ ಮೇಲೆ ನಂಬಿಕೆ ಇಡಿ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಭರವಸೆ ನೀಡಿದರು.
ಬೆಂಗಳೂರಿನ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಹಿರಿಯೂರು, ಚಿತ್ರದುರ್ಗ, ತುಮಕೂರು, ಚಿಕ್ಕನಾಯಕನಹಳ್ಳಿ, ಶಿರಾ, ವಿವಿಧ ಭಾಗಗಳ ಮುಖಂಡರ ಜೊತೆ ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಸಣ್ಣ ಜನಾಂಗದ ಸ್ಥಿತಿಗತಿಗಳನ್ನು ಅರಿತುಕೊಂಡು ಸಮುದಾಯಕ್ಕೆ ನ್ಯಾಯ ಕೊಡಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಇವರಿಗೆ ಪತ್ರ ಬರೆದು, ಭೇಟಿ ಮಾಡಿ ಮಾತುಕತೆ ನಡೆಸಿ, ಕೈಮುಗಿದು ಮನವಿ ಮಾಡಲಾಯಿತು ಎಂದರು.
ಮನವಿಗೆ ಸ್ಪಂದಿಸಿದ ಪ್ರಧಾನಿ ಹಾಗೂ ಗೃಹ ಸಚಿವರು ಕಾಡುಗೊಲ್ಲರಿಗೆ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ. ಸಮುದಾಯ ಧೃತಿಗೆಡದಬಾರದು ಎಂದು ತಿಳಿಸಿದರು. ಇನ್ನು ನಿಮಗೆ ಮೀಸಲಾತಿ ಕಲ್ಪಿಸಲು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು, ಎಂಎಲ್ಸಿ ತಿಪ್ಪೇಸ್ವಾಮಿ ಅವರ ಶ್ರಮ ಸಾಕಷ್ಟಿದ್ದು, ನನಗೆ ಸಮುದಾಯದ ವಿಚಾರಗಳನ್ನು ಎಳೆ ಎಳೆಯಾಗಿ ಮನವರಿಕೆ ಮಾಡಿಕೊಟ್ಟಿದ್ದರು. ನಿಮಗೆ ಪ್ರತಿಫಲ ಸಿಗುತ್ತದೆ ಎಂದು ಧೈರ್ಯ ತುಂಬಿದರು.
ರಾಜ್ಯದಲ್ಲಿರುವ ಅತ್ಯಂತ ತುಂಬಾ ಹಿಂದುಳಿದಿರುವ ಹಾಗೂ ಸಂಕಷ್ಟಕ್ಕೆ ಸಿಲುಕಿರುವ ಬುಡಕಟ್ಟು ಕಾಡುಗೊಲ್ಲ ಜನಾಂಗದವರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ರಾಜ್ಯಸಭೆಯಲ್ಲಿ ಸಮುದಾಯದ ಪರವಾಗಿ ಧ್ವನಿ ಎತ್ತಲಾಯಿತು. ಕೈ ಮುಗಿದು ಕಳಾಕಳಿಯಿಂದ ಮನವಿ ಮಾಡಿದೆ. ಈ ವಿಷಯ ಚರ್ಚೆ ಆಗಬೇಕಾಯಿತು.
ಆದರೆ ಸದನದಲ್ಲಿ ಕೇಂದ್ರ ಸರ್ಕಾರದ ಸಾಧನೆಯ ಶ್ರೀರಾಮ ಮಂದಿರ ನಿರ್ಮಾಣ, ಸರ್ಕಾರದ ಸಾಧನೆಯ ಬಗ್ಗೆ ಶ್ವೇತಪತ್ರ ಹೊರಡಿಸಿದ್ದರು. ಇದಕ್ಕೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಪ್ಪುಪತ್ರ ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಎಸ್ಟಿ ವಿಚಾರ ಚರ್ಚೆಗೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆ ಮುನ್ನ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರವಾಸ ಮಾಡಿ, ಕಾಡುಗೊಲ್ಲರ ಮನೆಯಲ್ಲಿ ಊಟ ಮಾಡಿಕೊಂಡು ಬರುತ್ತೇನೆ. ಚುನಾವಣೆ ಮುಗಿದ ಬಳಿಕ ನಿಮಗೆ ಎಸ್ಟಿ ಭಾಗ್ಯ ದೊರೆಯಲಿದೆ. ಮೇನಲ್ಲಿ ಚುನಾವಣೆ ಮುಗಿದ ನಂತರ ಮತ್ತೆ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನನಗೆ ಸಂಪೂರ್ಣ ವಿಶ್ವಾಸವಿದೆ ಎಂದರು.
ನಾನು ಕೊಟ್ಟ ಮಾತು ತಪ್ಪುವುದಿಲ್ಲ. ನಾನು ಇನ್ನೂ ಎರಡೂವರೆ ವರ್ಷ ಬದುಕೀರುತ್ತೇನೆ. ನನ್ನ ಮೇಲೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಸಂಪೂರ್ಣ ನಂಬಿಕೆ ಇಡಿ ಎಂದು ಪಕ್ಕದಲ್ಲಿ ಕುಳಿತಿದ್ದವರ ಕೈಹಿಡಿದು ಭರವಸೆ ಕೊಟ್ಟರು.
ಬಿಜೆಪಿ ಜೊತೆ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡಿದ್ದು, ಎರಡು ಪಕ್ಷಗಳು ಚುನಾವಣೆಯನ್ನು ಒಟ್ಟಿಗೆ ಎದುರಿಸಲಿವೆ. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ನಮ್ಮ ಜೊತೆಯಲ್ಲಿರಿ, ನಿಮಗೆ ನ್ಯಾಯ ಸಿಗಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಹೇಳಿದರು.
ಈ ಸಂದರ್ಭದಲ್ಲಿ ಎಂಎಲ್ಸಿ ತಿಪ್ಪೇಸ್ವಾಮಿ, ಮಾಜಿ ಜಿಪಂ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಡಿ.ಯಶೋಧರ, ಮಾಜಿ ಜಿಪಂ ಸದಸ್ಯೆ ಮೀನಾಕ್ಷಿ ನಂದೀಶ್, ಎನ್.ಆರ್.ಲಕ್ಷ್ಮೀಕಾಂತ್, ನರಸಿಂಹಮೂರ್ತಿ ಸಿಂಹ, ಕೇಂದ್ರ ಸಚಿವರ ಆಪ್ತ ಸಹಾಯಕ ಉಮೇಶ್, ಗಾಯಕ ಮೋಹನ್ ಕುಮಾರ್, ಎಂ.ಜಯಣ್ಣ, ವಕೀಲ ಶಿವಶಂಕರ್, ಗಂಗಾಧರ್, ಮಲ್ಲಿಕಾರ್ಜುನ್, ಬೋರಪ್ಪ, ತುಮಕೂರು, ಚಿತ್ರದುರ್ಗ ಸೇರಿದಂತೆ ವಿವಿಧ ಭಾಗಗಳ ಮುಖಂಡರು ಭಾಗವಹಿಸಿದ್ದರು.












Click it and Unblock the Notifications