ಭದ್ರಾ ಕಾಮಗಾರಿ ವಿಳಂಬಕ್ಕೆ ಸರ್ಕಾರದ ವಿರುದ್ಧ ಮಾಜಿ ಸಂಸದ ಉಗ್ರಪ್ಪ ಕಿಡಿ ಕಿಡಿ
ಚಿತ್ರದುರ್ಗ, ಅಕ್ಟೋಬರ್ 27: ಮಧ್ಯ ಕರ್ನಾಟಕದ ಬಹು ನಿರೀಕ್ಷಿತ ಯೋಜನೆ ಭದ್ರಾ ಮೇಲ್ದಂಡೆ ಕಾಮಗಾರಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ, ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸದಿರುವುದಕ್ಕೆ ಮಾಜಿ ಸಂಸದ- ಕಾಂಗ್ರೆಸ್ ಮುಖಂಡ ವಿ. ಎಸ್. ಉಗ್ರಪ್ಪ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಹಿರಿಯೂರಿನಲ್ಲಿ ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಕಾಮಗಾರಿಯ ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ಈ ಭಾಗದ ಬರಪೀಡಿತ ಪ್ರದೇಶದ ಜನರಿಗೆ ನೀರು ಹರಿಸುವ ಕೆಲಸಕ್ಕೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಈ ಭಾಗದ ಜನರೇ ಮುಂದಿನ ದಿನಗಳಲ್ಲಿ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪ ಅವರು ಹಸಿರು ಟವೆಲ್ ಹಾಕಿಕೊಂಡ ಮಾತ್ರಕ್ಕೆ ರೈತ ನಾಯಕನಾಗಲು ಸಾಧ್ಯವಿಲ್ಲ. ನಾನು ರೈತ ನಾಯಕನೆಂದು ಬಿಂಬಿಸಿಕೊಳ್ಳುವುದೇ ಯಡಿಯೂರಪ್ಪನ ಕೆಲಸವಾಗಿದೆ ಎಂದರು.

ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿಸಿ, ಸಿದ್ದಲಿಂಗ ಚೂರಿ ಎಂಬ ರೈತನ ಸಾವಿಗೆ ಕಾರಣರಾಗಿದ್ದರು. ಇತ್ತೀಚೆಗೆ ಗದಗದಲ್ಲಿ ಜನರು ನೆರೆ ಪರಿಹಾರ ಕೇಳಿದಾಗ ನೆರೆ ಸಂತ್ರಸ್ತರ ಮೇಲೆ ಲಾಠಿ ಚಾರ್ಜ್ ಮಾಡಿಸಿದರು. ಬೆಳಗಾವಿಯಲ್ಲಿ ರೈತರು ಪರಿಹಾರ ಕೇಳಿದಾಗ ಅರೆಸ್ಟ್ ಮಾಡಿಸಿದರು ಎಂದರು.
ಅಧಿಕಾರಕ್ಕಾಗಿ ಮಾತ್ರ ಮಾತಾಡ್ತಾರೆ
ಇವೆಲ್ಲ ಗಮನಿಸಿದಾಗ ಪ್ರಧಾನಿ ಮೋದಿ, ಅಮಿತ್ ಶಾ, ಯಡಿಯೂರಪ್ಪನವರಿಗೆ ರೈತರ ಸಮಸ್ಯೆಗಳ ಬಗ್ಗೆ, ಪ್ರಕೃತಿ ವಿಕೋಪ, ಬರ ಅಥವಾ ಪ್ರವಾಹದ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ, ಇವರು ಅಧಿಕಾರಕ್ಕಾಗಿ ಮಾತಾಡುತ್ತಾರೆ ಅಷ್ಟೇ ಎಂದು ಹೇಳಿದರು.

ನಾನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನಾಗಿದ್ದಾಗ 2009ರ ಡಿಸೆಂಬರ್ ನಲ್ಲಿ ಮಾತನಾಡಿದ ನನ್ನ ಆಡಿಯೋ ರೆಕಾರ್ಡ್ ಇದೆ. ರೈತರ ಸಾಲಮನ್ನಾ ಮಾಡಿ ಯಡಿಯೂರಪ್ಪನವರೇ ಅಂತ ಕೇಳಿದಾಗ, "ನೋಡಿ ಉಗ್ರಪ್ಪನವರೇ ನೀವು ವಿರೋಧ ಪಕ್ಷದ ನಾಯಕರು. ನಾನು ಮುಖ್ಯಮಂತ್ರಿ, ಅಧಿಕಾರಕ್ಕೆ ಬರುವ ಮೊದಲು ಅನೇಕ ಹೇಳಿಕೆಗಳನ್ನು ಕೊಡುತ್ತೇವೆ, ಅಧಿಕಾರಕ್ಕೆ ಬಂದ ಮೇಲೆ ಅವನ್ನು ಈಡೇರಿಸುವುದು ಕಷ್ಟಸಾಧ್ಯ.
"ರೈತರ ಸಾಲ ಮನ್ನಾ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಲ್ಲ. ನಮ್ಮಲ್ಲಿ ನೋಟ್ ಪ್ರಿಂಟ್ ಮಾಡುವ ಮಷೀನ್ ಇಲ್ಲ. ಹಾಗಾಗಿ ರೈತರ ಸಾಲ ಮನ್ನಾ ಮಾಡುವುದಕ್ಕೆ ಆಗುವುದಿಲ್ಲ" ಎಂದು ಹೇಳಿದ್ದಾರೆ. ಇದು ಬಿಜೆಪಿಯವರ ಆಡಳಿತ ಎಂದರು.
ರೈತರ ಸಾಲ ಮನ್ನಾ ಮಾಡಬೇಕು
ಒಂದು ಕಡೆ ಅತಿವೃಷ್ಟಿ, ಮತ್ತೊಂದು ಕಡೆ ಅನಾವೃಷ್ಟಿ ಆಗಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ರುಪಾಯಿಯಷ್ಟು ರೈತರ ಬೆಳೆ ನಷ್ಟವಾಗಿದೆ. ಕೆಲವು ಕಡೆ ರೈತರು ಬರದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೂ ಕೆಲವು ಕಡೆ ಪ್ರವಾಹ ಬಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಿಸ್ಟರ್ ಯಡಿಯೂರಪ್ಪ ನಿಮಗೇನಾದರೂ ರೈತರ ಬಗ್ಗೆ ಕಾಳಜಿ, ಆಸಕ್ತಿ ಇದ್ದರೆ ರೈತರು ಯಾವುದೇ ಬ್ಯಾಂಕಿನಲ್ಲಿ ಸಾಲ ಮಾಡಿದ್ದರೂ ಕೂಡಲೇ ಸಾಲ ಮನ್ನಾ ಮಾಡಬೇಕು ಎಂದರು.
ಈಗಾಗಲೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೆ ಬೆಳೆ ಇಡಲು ಅವರಿಗೆ ಬೀಜ- ಗೊಬ್ಬರದ ವ್ಯವಸ್ಥೆಯನ್ನು ಮಾಡಿ ಕೊಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.











Click it and Unblock the Notifications