ಹಿರಿಯೂರು ಪೊಲೀಸರ ಮಿಂಚಿನ ಕಾರ್ಯಾಚರಣೆ: 8 ಮಂದಿ ಅಂತರ್ ರಾಜ್ಯ ದನಗಳ್ಳರ ಬಂಧನ
ಚಿತ್ರದುರ್ಗ, ಜೂನ್ 16: ಇತ್ತೀಚೆಗಷ್ಟೇ ಹಿರಿಯೂರು ನಗರದಲ್ಲಿ ನಡೆದಿದ್ದ ದನಗಳ್ಳತದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನ ಅಂತರ್ ರಾಜ್ಯ ದನಗಳ್ಳರನ್ನು ಹಿರಿಯೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೂನ್ 7 ರಂದು ಹರಿಯಾಣ ಮೂಲದ ಗೋವು ಸಾಗಣೆ ಕಳ್ಳರ ತಂಡವೊಂದು ಹಿರಿಯೂರು ನಗರದ ಚರ್ಚ್ ಸ್ಕೂಲ್ ಮುಂಭಾಗದಲ್ಲಿ ಬೆಳಗಿನ ಜಾವದಲ್ಲಿ ಬೀದಿ ದನಗಳನ್ನು ಹಿಡಿದು ಟೆಂಪೋಗೆ ತುಂಬಿಕೊಂಡು ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದ್ದ ಘಟನೆ ನಡೆದಿತ್ತು.

ಈ ಘಟನೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಘಟನೆಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದಲ್ಲದೆ ಹೊಸದುರ್ಗ ಪೊಲೀಸ್ ಠಾಣೆ ಮತ್ತು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲೂ ಕೂಡ ದನ ಕಳ್ಳತನದ ಬಗ್ಗೆ ಪ್ರಕರಣಗಳು ದಾಖಲಾಗಿದ್ದವು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಅವರು ಆರೋಪಿಗಳನ್ನು ಬಂಧಿಸಲು ತಂಡ ರಚಿಸಿದ್ದರು. ಇನ್ನು ದನಗಳ್ಳರನ್ನು ಬೆನ್ನತ್ತಿದ ಪೊಲೀಸರು ಹರಿಯಾಣ ಮೂಲದ 8 ಜನರನ್ನು ಬಂಧಿಸಿ 1.55 ಲಕ್ಷ ನಗದು ಹಾಗೂ ಟಾಟಾ ಕಂಪೆನಿಯ ಮಿನಿ ಲಾರಿ ಮತ್ತು ಹೊಂಡ ಆಕ್ಟಿವ್ ಸ್ಕೂಟರ್ ವಾಹನವನ್ನು ಜಪ್ತಿ ಮಾಡಿ, ಕಳ್ಳರನ್ನು ಕಂಬಿ ಹಿಂದೆ ಕಳುಹಿಸಿದ್ದಾರೆ.
ಈ ಪ್ರಕರಣ ಸಂಬಂಧ ಆರೋಪಿಗಳಾದ ಹರಿಯಾಣ ಮೂಲದ 1). ಮಹಮ್ಮದ್ ಆಸೀಫ್ ಬಿನ್ ಬಾಬುದ್ದೀನ್, 2). ತಾಲೀಮ್ ಬಿನ್ ಬಾಬುದ್ದೀನ್, 3). ಸಹಬೂಬ್ ಬಿನ್ ಚುಜ್ಜು, 4). ಸಲೀಂ ಬಿನ್ ಪೆಹಲೂಬ್, 5).ಲಿಯಾಖತ್ ಬಿನ್ ಪೆಹಲೂಬ್, 6).ಮಹಮೂದೀನ್ ಬಿನ್ ಆಸೂ ಮೊಹಮ್ಮದ್, 7). ದಕ್ಷಿಣ ದೆಹಲಿಯ ಜಾವೀದ್ ಬಿನ್ ನೂರ್ ಮಹಮ್ಮದ್ ಹಾಗೂ 8). ನ್ಯೂ ಹರಿಯಾಣ ಮೂಲದ ತೌಫೀಕ್ ಬಿನ್ ಆಯೂಬ್ ಸೇರಿದಂತೆ ಒಟ್ಟು 8 ಆರೋಪಿಗಳನ್ನು ಬಂಧಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಹಿರಿಯೂರು ಪೊಲೀಸ್ ಉಪಾಧ್ಯಕ್ಷಕ ಎಸ್ ಚೈತ್ರ, ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕಾಳಿಕೃಷ್ಣ, ಹೊಸದುರ್ಗ ಪೊಲೀಸ್ ಠಾಣೆಯ ಪಿಎಸ್ಐ ಭೀಮನಗೌಡ ಪಾಟೀಲ್, ಹಿರಿಯೂರು ನಗರ ಠಾಣೆ ಪಿಎಸ್ಐ ಅನಸೂಯ, ಚಂದ್ರಶೇಖರ್ ಆರ್ ವಿಭೂತಿ ಹಾಗೂ ಸಿಬ್ಬಂದಿಗಳಾದ ರುದ್ರಮುನಿಸ್ವಾಮಿ, ಪುರುಷೋತ್ತಮ, ಗಂಗಾಧರ, ತಿಪ್ಪೇಸ್ವಾಮಿ ಸೇರಿದ ತಂಡವು ತನಿಖೆ ನಡೆಸಿದ್ದಾರೆ.
ಗೋ ಕಳ್ಳತನ ಪ್ರಕರಣ ನಿರ್ಲಕ್ಷಿಸದ ಪೊಲೀಸರ ಈ ಶರವೇಗದ ಕಾರ್ಯಾಚರಣೆಗೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಜಿಲ್ಲೆಯ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.












Click it and Unblock the Notifications