ಚಿತ್ರದುರ್ಗ: ಹೊಸಯಳನಾಡು ಗ್ರಾ.ಪ. ಪೀಠೋಪಕರಣಗಳನ್ನು ಜಪ್ತಿ ಮಾಡಿದ ಕೋರ್ಟ್
ಚಿತ್ರದುರ್ಗ, ಜುಲೈ 26: ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ಖರೀದಿಸಿದ್ದ ವಸ್ತುಗಳಿಗೆ ಹಣ ನೀಡದ ಹಿನ್ನೆಲೆಯಲ್ಲಿ ಹೊಸಯಳನಾಡು ಗ್ರಾಮ ಪಂಚಾಯಿತಿಯಲ್ಲಿರುವ ವಸ್ತುಗಳನ್ನು ಕೋರ್ಟ್ ಅಧಿಕಾರಿಗಳು ಜಪ್ತಿ ಮಾಡಿ, ಪೀಠೋಪಕರಣ ವಸ್ತುಗಳನ್ನು ಟ್ರಾಕ್ಟರ್‌ಗೆ ತುಂಬಿದ ಘಟನೆ ಹಿರಿಯೂರು ತಾಲೂಕಿನಲ್ಲಿ ನಡೆದಿದೆ.
ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸಯಳನಾಡು ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು 'ಕುಡಿಯುವ ನೀರು ಸರಬರಾಜು ಯೋಜನೆಗಾಗಿ ಸಾಮಗ್ರಿ ಖರೀದಿಸಿ ಹಣ ಪಾವತಿಸಿದ ಕಾರಣ ಹಿರಿಯೂರು ತಾಲೂಕಿನ ಹೊಸ ಹೊಸಯಳನಾಡು ಗ್ರಾಮ ಪಂಚಾಯತಿಯ ಪೀಠೋಪಕರಣಗಳ ಜಪ್ತಿಗೆ ನ್ಯಾಯಾಲಯದ ಹೊರಡಿಸಿದ ಆದೇಶವನ್ನು ಜಾರಿ ಮಾಡಿ, ನಂತರ ಸ್ಥಗಿತಗೊಳಿಸಿದ್ದಾರೆ.

ಹೊಸಯಳನಾಡು ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು 2018ರಲ್ಲಿ ಕುಡಿಯುವ ನೀರು ಯೋಜನೆಗೆ ಬೇಕಾಗಿದ್ದ ಸಾಮಗ್ರಿಗಳನ್ನು ಹಿರಿಯೂರು ನಗರದಲ್ಲಿರುವ ಶ್ರೀದೇವಿ ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಸುಮಾರು 3.26 ಲಕ್ಷದ ಹಣದ ವಸ್ತುಗಳನ್ನು ಖರೀದಿ ಮಾಡಿದ್ದರು. ಈ ಹಣದಲ್ಲಿ 1.12 ಲಕ್ಷ ರೂ ಹಣ ಮಾತ್ರ ನೀಡಿದ್ದರು ಎನ್ನಲಾಗಿದೆ.
ಬಾಕಿ ಹಣ ನೀಡದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕನಿಗೆ ಹಣ ನೀಡದೆ ಆಗ ಬಿಲ್ ಮಾಡುವೆ, ಈಗ ಬಿಲ್ ಮಾಡುವೆ ಎಂದು ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು ಸತಾಯಿಸಿಕೊಂಡು ಬಂದಿದ್ದಾರೆ. ಇದರಿಂದ ರೋಸಿ ಹೋದ ಅಂಗಡಿ ಮಾಲಿಕ ಹಿರಿಯೂರು ನಗರದ ಜೆಎಂಎಫ್.ಸಿ ನ್ಯಾಯಾಲಯ ಮೊರೆ ಹೋಗಿದ್ದಾರೆ.
ಕೋರ್ಟ್ ಜಪ್ತಿಗೆ ತಾತ್ಕಾಲಿಕ ಸ್ಥಗಿತ
ಊರಿನ ಮಾರ್ಯಾದೆಯ ಪ್ರಶ್ನೆ ಎಂದು ಅರಿತುಕೊಂಡ ಗ್ರಾಮ ಪಂಚಾಯಿತಿ ಸದಸ್ಯರು ಶ್ರೀದೇವಿ ಎಲೆಕ್ಟ್ರಾನಿಕ್ ಅಂಗಡಿ ಮಾಲೀಕನನ್ನು ಮನವೊಲಿಸಲು ಮುಂದಾಗಿದ್ದಾರೆ. ಬಾಕಿ ಉಳಿದಿರುವ ಹಣವನ್ನು ಕೆಲವೇ ದಿನಗಳಲ್ಲಿ ಹಣವನ್ನು ಕೊಡಲಾಗುವುದು ಎಂದು ಅಂಗಡಿ ಮಾಲೀಕನಿಗೆ ಮನವೊಲಿಸಿ ಅರ್ಧಂಬರ್ಧ ಜಪ್ತಿ ಮಾಡಿದ್ದ ಪೀಠೋಪಕರಣ ವಸ್ತುಗಳನ್ನು ವಾಪಸ್ ಬಿಟ್ಟು ಬಂದಿದ್ದಾರೆ.
ಪದೇ ಪದೇ ಪಿಡಿಓ ವರ್ಗಾವಣೆ
ಹಿರಿಯೂರು ತಾಲೂಕಿನಲ್ಲಿ 33 ಗ್ರಾಮ ಪಂಚಾಯಿತಿಗಳಿಗೆ. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಓ ಅಧಿಕಾರಿಗಳು ಇಲ್ಲದಂತಾಗಿದೆ. ಓರ್ವ ಪಿಡಿಒ ಅಧಿಕಾರಿಗೆ ಎರಡು, ಎರಡು ಪಂಚಾಯಿತಿಗಳ ನೋಡಿಕೊಳ್ಳುವಂತೆ ನೇಮಕ ಮಾಡಲಾಗಿದೆ. ಗೌನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ತಿಪ್ಪೇಸ್ವಾಮಿ ಅವರು ಹೊಸಯಳನಾಡು ಗ್ರಾಮ ಪಂಚಾಯಿತಿಯಲ್ಲೂ ಕೆಲಸ ನಿರ್ವಹಿಸಬೇಕಾಗಿದೆ. ಇದಲ್ಲದೆ ಒಂದು ಪಂಚಾಯಿತಿಯಿಂದ ಮತ್ತೊಂದು ಪಂಚಾಯಿತಿಗೆ ಪದೇ ಪದೇ ಪಿಡಿಓ ವರ್ಗಾವಣೆ ಮಾಡುವುದರಿಂದ ಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ ಹಾಗೂ ಗ್ರಾಮಸ್ಥರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.












Click it and Unblock the Notifications