ಚಿತ್ರದುರ್ಗದಲ್ಲಿ ಮೂವರಿಗೆ ಕಾಂಗ್ರೆಸ್ ಟಿಕೆಟ್, ಆಂಜನೇಯಗೆ ಡೌಟ್!
ಚಿತ್ರದುರ್ಗ, ಮಾರ್ಚ್ 25 : ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ 124 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ಇದರಲ್ಲಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಿದ್ದರೆ, ಜಿಲ್ಲೆಯ ಪ್ರಮುಖ ಮಾಜಿ ಸಚಿವರೊಬ್ಬರಿಗೆ ಟಿಕೆಟ್ ಕೈತಪ್ಪಿ ಹೋಗಿದೆ.
ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಡಿ ಸುಧಾಕರ್, ಚಳ್ಳಕೆರೆ ಪರಿಶಿಷ್ಟ ಪಂಗಡದ ಕ್ಷೇತ್ರಕ್ಕೆ ಹಾಲಿ ಶಾಸಕ ಟಿ ರಘುಮೂರ್ತಿ ಹಾಗೂ ಹೊಸದುರ್ಗ ಕ್ಷೇತ್ರದ ಮಾಜಿ ಶಾಸಕ ಬಿಜಿ ಗೋವಿಂದಪ್ಪ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಆದರೆ ಅಚ್ಚರಿ ಎಂಬಂತೆ ಕಾಂಗ್ರೆಸ್ ಟಿಕೆಟ್ ಪಟ್ಟಿಯಲ್ಲಿ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವ ಹೆಚ್ ಆಂಜನೇಯ ಅವರ ಹೆಸರು ಕೈ ಬಿಟ್ಟು ಹೋಗಿದೆ.

ಸದ್ಯ ಆಂಜನೇಯ ಅವರಿಗೆ ಟಿಕೆಟ್ ಇಲ್ಲ ಎನ್ನುವಂತೆ ಕಾಯ್ದಿರಿಸಲಾಗಿದೆ. ಮತ್ತೊಂದು ಕಡೆ ಚಿತ್ರದುರ್ಗ ಹಾಗೂ ಮೊಳಕಾಲ್ಮೂರು ಕ್ಷೇತ್ರಕ್ಕೆ ಟಿಕೆಟ್ ಸಹ ಘೋಷಣೆಯಾಗಿಲ್ಲ. ಇದರಿಂದ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳು ಕಾಯ್ದಿರಿಸಲಾಗಿದೆ. ಇನ್ನು ನಿರೀಕ್ಷೆಯಂತೆ ಹ್ಯಾಟ್ರಿಕ್ ಗೆಲುವಿನ ಹೊಸ್ತಿಲಲ್ಲಿರುವ ಹಾಲಿ ಶಾಸಕ ಟಿ ರಘುಮೂರ್ತಿ ಅವರಿಗೆ ಟಿಕೆಟ್ ಸಿಕ್ಕಿದ್ದು, ಗೆಲುವಿನ ತವಕದಲ್ಲಿ ಕ್ಷೇತ್ರ ಸುತ್ತಾಟ ನಡೆಸುತ್ತಿದ್ದಾರೆ.
ಉಳಿದಂತೆ ಹಿರಿಯೂರು ಕ್ಷೇತ್ರದಲ್ಲಿ ಮಾಜಿ ಸಚಿವ ಡಿ ಸುಧಾಕರ್ ಹಾಗೂ ಹೊಸದುರ್ಗ ಬಿಜಿ ಗೋವಿಂದಪ್ಪ ಅವರಿಗೆ ಟಿಕೆಟ್ ಸಿಕ್ಕಿದ್ದು ಖುಷಿಯಲ್ಲಿ, ಉತ್ಸಾಹದಿಂದ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಆಯ್ಕೆಯಾದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಪೈಪೋಟಿ ಶುರುವಾಗಿತ್ತು. ಆದರೆ ಹೊಸಬರಿಗೆ ಟಿಕೆಟ್ ಯಾರಿಗೂ ಸಿಕ್ಕಿಲ್ಲ.
ಕಾಂಗ್ರೆಸ್ ಬಿ. ಫಾರಂ ನನ್ನ ಜೇಬಿನಲ್ಲಿದೆ ಎಂದಿದ್ದ ಡಿ.ಸುಧಾಕರ್
ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಗೆ ಪೈಪೋಟಿ ಶುರುವಾಗಿತ್ತು, ಒಂದು ಕಡೆ ಬಿಜೆಪಿ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಇದರಿಂದ ವಿಚಲಿತರಾಗಿದ್ದ ಸುಧಾಕರ್ ಅವರು ಆತಂಕಕ್ಕೆ ಒಳಗಾಗಿದ್ದರು. ಆದರೆ ಇತ್ತೀಚೆಗೆ ನಡೆದ ಹಿರಿಯೂರು ತಾಲ್ಲೂಕಿನ ವದ್ದಿಕೆರೆ ಗ್ರಾಮದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮಾಜಿ ಸಚಿವ ಡಿ.ಸುಧಾಕರ್ ಅವರು ಬಿ. ಫಾರಂ ನನ್ನ ಜೇಬಿನಲ್ಲಿದೆ ಕಾರ್ಯಕರ್ತರೇ ಹೆದರಬೇಡಿ ಟಿಕೆಟ್ ನಂದೇ ಎಂದು ಹೇಳಿದ್ದರು.

"ಕಾಂಗ್ರೆಸ್ ಪಕ್ಷ ನಮ್ಮದು, ಕಾಂಗ್ರೆಸ್ ಪಕ್ಷ ನನ್ನದು. ಕಾರ್ಯಕರ್ತರೇ ಹೆದರಬೇಡಿ ವದ್ದಿಕೆರೆ ಸಿದ್ದಪ್ಪ, ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಡಿ. ಸುಧಾಕರ್‌ಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ಅಷ್ಟೇ ಸತ್ಯ. ಟಿಕೆಟ್ ಇರುವುದು ಮತದಾರರ ಬಳಿ. ಕಾಂಗ್ರೆಸ್ ಟಿಕೆಟ್ ಬಿ. ಫಾರಂ ಜನರ ಮಧ್ಯೆ ಇದೆ. ಹಾಗಾಗಿ ಹೆದರುವ ಪ್ರಶ್ನೆಯೇ ಇಲ್ಲ. ಎಲ್ಲಿ ಕೆಲಸ ಇದೆ, ಎಲ್ಲಿ ಸೇವೆ ಇದೆ ಅಲ್ಲಿ ಭಗವಂತ ಇದಾನೆ ಎಂದು ಹೇಳಿದ್ದರು.
ಟಿಕೆಟ್ ಇಲ್ಲದಿದ್ದರೆ ಬೆಂಗಳೂರಿನಲ್ಲಿ ಕುಳಿತುಕೊಳ್ಳಬಹುದಿತ್ತು. ಆದರೆ ಟಿಕೆಟ್ ಜನರ ಮಧ್ಯೆ ಇರುವುದರಿಂದ ನಾನು ನಿಮ್ಮ ಜೊತೆಗಿದ್ದೇನೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಯಾರು ಚಿಂತಿಸುವ ಅಗತ್ಯವಿಲ್ಲ ನಮ್ಮದು ಏನಿದ್ದರೂ ಗೆಲುವಿನ ಕಡೆ ಗಮನ ಕೊಡುವುದು ಅಷ್ಟೇ ಎಂದು ಸುಧಾಕರ್ ತಿಳಿಸಿದ್ದರು.
ಮೂರು ಬಾರಿ ಶಾಸಕರಾಗಿದ್ದ ಮಾಜಿ ಶಾಸಕ ಬಿಜಿ ಗೋವಿಂದಪ್ಪಗೆ ಟಿಕೆಟ್
ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಹೋಬಳಿಯ ಬೆಲಗೂರು ಗ್ರಾಮದ ಕಾಂಗ್ರೆಸ್‌ನ ಹಿರಿಯ ರಾಜಕಾರಿಣಿ ಎಂದು ಕರೆಸಿಕೊಳ್ಳುವ 68 ವರ್ಷದ ಮಾಜಿ ಶಾಸಕ ಬಿಜಿ ಗೋವಿಂದಪ್ಪ ಅವರಿಗೆ ಮುಂಬರುವ 2023ರ ವಿಧಾನಸಭಾ ಚುನಾವಣೆಯ ಅಭ್ಯರ್ಥಿಯಾಗಿ ಟಿಕೆಟ್ ಘೋಷಣೆ ಮಾಡಲಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರ ವಲಯಗಳಲ್ಲಿ ಸಂತಸ ಮನೆ ಮಾಡಿದೆ. ಆದರೆ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದ ಜಿ.ಆರ್ ಉಲ್ಲಾಸ್, ಎಂ.ಹೆಚ್.ಕೃಷ್ಣಮೂರ್ತಿ ಹಾಗೂ ಕೆ.ಅನಂತ್ ಅವರಿಗೆ ಟಿಕೆಟ್ ಘೋಷಣೆ ವಿಷಯ ಕೋಕ್ ನೀಡಿದಂತಾಗಿದೆ.
ಬಿ.ಜಿ. ಗೋವಿಂದಪ್ಪ, 1999, 2004 ಹಾಗೂ 2013ರಲ್ಲಿ ಮೂರು ಬಾರಿ ಆಯ್ಕೆಯಾಗಿದ್ದರು. 2008 ಹಾಗೂ 2018ರಲ್ಲಿ ಬಿಜೆಪಿಯ ಗೂಳಿಹಟ್ಟಿ ಶೇಖರ್ ವಿರುದ್ಧ ಎರಡು ಬಾರಿ ಸೋಲುಂಡಿದ್ದರು.












Click it and Unblock the Notifications