5,300 ಕೋಟಿ ರೂ. ಅನುದಾನ ಪಡೆದ ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಪೂರ್ಣ
ಮಧ್ಯ ಕರ್ನಾಟಕದ ಬರದ ನಾಡನ್ನು ಹಸಿರಾಗಿಸಲು ಭದ್ರಾ ಮೇಲ್ದಂಡೆ ಯೋಜನೆ ಶಂಕುಸ್ಥಾಪನೆ ನೆರವೇರಿಸಿರುವ ಬಿಜೆಪಿ ಸರ್ಕಾರವೇ ಆದಷ್ಟು ಶೀಘ್ರವೇ ಯೋಜನೆಯನ್ನು ಪೂರ್ಣಗೊಳಿಸಲಿದೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿದ್ದೇನು?
ಚಿತ್ರದುರ್ಗ, ಮಾರ್ಚ್ 19: ಮಧ್ಯ ಕರ್ನಾಟಕದ ಬರದ ನಾಡನ್ನು ಹಸಿರಾಗಿಸಲು ಭದ್ರಾ ಮೇಲ್ದಂಡೆ ಯೋಜನೆ ಶಂಕುಸ್ಥಾಪನೆ ನೆರವೇರಿಸಿರುವ ಬಿಜೆಪಿ ಸರ್ಕಾರವೇ ಆದಷ್ಟು ಶೀಘ್ರವೇ ಯೋಜನೆಯನ್ನು ಪೂರ್ಣಗೊಳಿಸಲಿದೆ. ಅಷ್ಟೇ ಅಲ್ಲದೇ ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಉದ್ಘಾಟನೆ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯ ಹೊಳಲ್ಕೆರೆಯಲ್ಲಿ ಭಾನುವಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಫಲಾನುಭವಿಗಳ ಸೌಲಭ್ಯ ಮತ್ತು ಸಲಕರಣೆಗಳ ವಿತರಣೆ ಮಾಡಲಾಯಿತು. ಜೊತೆಗೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮತ್ತು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಬೊಮ್ಮಾಯಿ ಮಾತನಾಡಿದರು.

ಬಿ.ಎಸ್. ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾರೆ. ನಾನು ಜಲಸಂಪನ್ಮೂಲ ಸಚಿವನಾಗಿದ್ದೆ. ಆ ವೇಳೆ ನಮ್ಮ ಸರ್ಕಾರ ಕೈಗೊಂಡ ದಿಟ್ಟ ನಿರ್ಧಾರದಿಂದ ಮಧ್ಯ ಕರ್ನಾಟಕದ ಭಾಗದ ಜನರ ಬೇಡಿಕೆ 'ಭದ್ರಾ ಮೇಲ್ದಂಡೆ ಯೋಜನೆ' ರೂಪಿಸಲಾಯಿತು. ಕಾಮಗಾರಿಯ್ನೂ ಆರಂಭಿಸಲಾಯಿತು. ಕೇಂದ್ರ ಸರ್ಕಾರ ಈ ಯೋಜನೆಗೆ ರೂ. 5,300 ಕೋಟಿಗಳ ಅನುದಾನ ಮೀಸಲಿರಿಸಿದೆ ಎಂದರು.
ಮಧ್ಯ ಕರ್ನಾಟಕದ ಜನರ ಭೂಮಿಗೆ ನೀರು ಕೊಟ್ಟು, ಬರದ ಭೂಮಿಯನ್ನು ಹಸಿರಾಗಿಸುವ ಕಾರ್ಯ ಬಿಜೆಪಿ ಮಾಡುತ್ತಿದೆ. ಯೋಜನೆಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲಾಗುವುದು. ಇನ್ನೇನು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುತ್ತೇವೆ.
ಹೊಳಲ್ಕರೆ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಯುತ್ತಿದೆ. ಇಲ್ಲಿ ಕಳೆದ 4-5 ವರ್ಷದಲ್ಲಿ 4116 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಆಗಿದೆ. ಶಾಸಕ ಎಂ. ಚಂದ್ರಪ್ಪ ಜನೋಪಯೋಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಕ್ಷೇತ್ರದ ಚಿತ್ರಣ ಬದಲಾಗಿದೆ. ರಸ್ತೆಗಳು, ಸರ್ಕಾರಿ ಕಟ್ಟಡಗಳು ಅಭಿವೃದ್ಧಿಗೊಂಡಿವೆ. ಉತ್ತಮ ಜಿಲ್ಲಾ ಆಸ್ಪತ್ರೆಯಂತೆ ತಾಲ್ಲೂಕು ಆಸ್ಪತ್ರೆ ಕಂಗೊಳಿಸುತ್ತಿದೆ ಎಂದು ಅವರು ಶ್ಲಾಘಿಸಿದರು.
ರಾಜ್ಯ ರೈತರಿಗೆ ಬಿಜೆಪಿ ಸರ್ಕಾರವಯ 10 ಎಚ್‌ಪಿವರೆಗೂ ಉಚಿತ ವಿದ್ಯುತ್, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ರೂ.6,000 ಮತ್ತು ರಾಜ್ಯ ಸರ್ಕಾರ 4ಸಾವಿರ ಸೇರಿ ಒಟ್ಟು 10,000/- ಸಹಾಯಧನ ನೀಡುತ್ತಿದ್ದೇವೆ. ಹಣ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ಮಹಿಳೆಯರ ಸ್ವ ಸಹಾಯ ಸಂಘಗಳಿಗೆ ಸಹಾಯಧನ, ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಸರ್ಕಾರದ ಕಾರ್ಯ ವಿವರಿಸಿದರು.

ಹೊಳಲ್ಕೆರೆ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿಯೇ ರಾಜ್ಯದ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ 6000 ಕಿ.ಮೀ. ಉದ್ದ ಹೆದ್ದಾರಿ ನಿರ್ಮಿಸಲಾಗಿದೆ. 7,100 ಕೋಟಿ ವೆಚ್ಚದಲ್ಲಿ ರೈಲ್ವೇ ಸಂಪರ್ಕ ಅಭಿವೃದ್ಧಿ ಪಡಿಸಲಾಗುತ್ತದೆ. ರೈತರಿಗೆ ನೀರಾವರಿ ಕಲ್ಪಿಸಿಕೊಳ್ಳಲು ಸಬ್ಸಿಡಿ ನೀಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಉಚಿತವಾಗಿ 75 ಯುನಿಟ್ ವಿದ್ಯುತ್ ವಿತರಿಸಲಾಗಿತ್ತಿದೆ. ಭೂ ರಹಿತರಿಗೆ ಭೂ ಖರೀದಿಗೆ 20 ಲಕ್ಷ ರೂಪಾಯಿ ಒದಗಿಸಲಾಗುತ್ತಿದೆ ಎಂದು ಅಭಿವೃದ್ಧಿ ಬಗ್ಗೆ ಅವರು ತಿಳಿಸಿದರು.
ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಕೆ.ಎಸ್.ನವೀನ್, ಪುರಸಭೆ ಅಧ್ಯಕ್ಷ ಆರ್.ಎ. ಅಶೋಕ್, ಜಿಲ್ಲಾಧಿಕಾರಿ ದಿವ್ಯ ಪ್ರಭು.ಜಿ.ಆರ್.ಜೆ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಮತ್ತಿತರು ಉಪಸ್ಥಿತರಿದ್ದರು.












Click it and Unblock the Notifications