Cauvery Dispute: ಪ್ರಧಾನಿ ಮೋದಿಯವರೇ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು: ವಿ.ಎಸ್.ಉಗ್ರಪ್ಪ
ಚಿತ್ರದುರ್ಗ, ಸೆಪ್ಟೆಂಬರ್, 22: ಕಾವೇರಿ ನದಿ ನೀರು ಹಂಚಿಕೆ ವಿವಾದ ಜೋರಾಗಿದ್ದು, ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸುವಂತೆ ಮಾಜಿ ಸಂಸದ ವಿಎಸ್ ಉಗ್ರಪ್ಪ ಅವರು ಆಗ್ರಹಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಒಂದು ಒಕ್ಕೂಟ ವ್ಯವಸ್ಥೆಯಲ್ಲಿದೆ. ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ದತ್ತವಾಗಿರುವ ಅಧಿಕಾರದ ವ್ಯಾಪ್ತಿಯಲ್ಲಿ ನಮ್ಮ ರಾಜ್ಯದ ಜನತೆ ಹಾಗೂ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಬದ್ಧವಾಗಿದೆ. ಭಾಷೆ, ನೆಲ, ಜಲ ಬಂದಾಗ ನಾವು ರಾಜಕೀಯವಾಗಿ ಪರಿಗಣಿಸಬಾರದು. ಸಮಸ್ತ ಜನತೆಯ ಹಿತವನ್ನು ಕಾಪಾಡಬೇಕು ಎಂದರು. ಇನ್ನು ಬಿಜೆಪಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ನೀರು ಬಿಟ್ಟು ಈಗ ನಮ್ಮ ಹತ್ತಿರ ಬಂದಿದ್ದಾರೆ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಇವರಿಗೆ ರಾಜಕೀಯ ಬೆರೆಸುವ ಪ್ರಯತ್ನ ಮಾಡಿರುವುದು ಅವರ ನಂಜಿನ ಮಾತುಗಳು ಗೊತ್ತಾಗುತ್ತದೆ ಎಂದು ಹೇಳಿದರು.
ಈ ಹಿಂದೆ ಇಂದಿರಾಗಾಂಧಿ ಅವರು ಸಹ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರ ಜನರನ್ನು ಒಪ್ಪಿಸಿ ಚೆನ್ನೈಗೆ ನೀರು ಕೊಟ್ರೋ ಹಾಗೆ ಕರ್ನಾಟಕದ ನೀರನ್ನು ಉಳಿಸುವ ಪ್ರಯತ್ನ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಬೇಕು ಎಂದು ಆಗ್ರಹಿಸಿದರು. ನಮ್ಮ ರಾಜ್ಯದಿಂದ 25 ಜನ ಸಂಸದರನ್ನು ಹೊಂದಿರುವ ಪ್ರಧಾನಿ ನಮ್ಮ ರಾಜ್ಯದ ಬಗ್ಗೆ ಬದ್ಧತೆ ಇದ್ದರೆ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದರು.
ಇನ್ನು ಮಂಡ್ಯದಲ್ಲಿ ರೈತರ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಗ್ರಪ್ಪ, ಅನ್ಯಾಯ ಆದಾಗ ಹೋರಾಟ ಮಾಡಬೇಕಾಗುತ್ತದೆ. ನಾವೆಲ್ಲರೂ ಒಟ್ಟಿಗೆ ಸೇರಿ ಹೋರಾಟ ಮಾಡಬೇಕು. ಈ ಹೋರಾಟ ದಕ್ಕೆ ಬರದಂತೆ ನಮ್ಮ ಹಕ್ಕನ್ನು ಪಡೆಯಲು ನ್ಯಾಯಯುತವಾಗಿ, ಶಾಂತಿಯುತವಾಗಿ ಹೋರಾಟ ಇರಲಿ ಎಂದರು.
ರಾಜ್ಯದ ರೈತರ ಹಿತ ಕಾಪಾಡುವುದು ನಮ್ಮ ಜವಾಬ್ದಾರಿ
ಚಾಮರಾಜನಗರ, ಸೆಪ್ಟೆಂಬರ್, 22: ಸುಗ್ರೀವಾಜ್ಞೆ ತಂದು ನೀರು ಬಂದ್ ಮಾಡುವ ಕಾಲ ಮಿಂಚಿಹೋಗಿದೆ. ಆದರೆ ರಾಜ್ಯದ ರೈತರ ಹಿತ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಮರಾಜನಗರದಲ್ಲಿ ಹೇಳಿದರು.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಮಾಧ್ಯಮವರೊಟ್ಟಿಗೆ ಮಾತನಾಡಿದ ಅವರು, ಸುಗ್ರಿವಾಜ್ಞೆ ತರುವ ಕಾಲವೆಲ್ಲಾ ಮಿಂಚಿಹೋಗಿದೆ. ಕಾನೂನು ಪಾಸ್ ಮಾಡಿದರೂ ಒಂದೇ-ಇಲ್ಲದಿದ್ದರೂ ಒಂದೇ. ಈಗ ನಮ್ಮ ಜನರ ಹಕ್ಕಿಗಾಗಿ ಯಾವ ರೀತಿ ಹೋರಾಟ ಮಾಡಬೇಕೆಂದು ಎಲ್ಲರೂ ಕುಳಿತು ಇಂದು ಚರ್ಚೆ ಮಾಡುತ್ತೇವೆ ಎಂದರು.
ಇಂದು ಸಂಜೆ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದ್ದು, ಕಾವೇರಿ ಸಂಕಷ್ಟದ ಸಂಬಂಧ ಚರ್ಚೆ ಆಗಲಿದೆ. ರಾಜ್ಯದ ರೈತರ ಹಿತವನ್ನು ಕಾಪಾಡುವ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟರು.
ಕಾವೇರಿ ಹಳೇ ಮೈಸೂರು ಭಾಗದ ಜೀವನಾಡಿಯಾಗಿದ್ದು, ಕೃಷಿ, ನೀರಾವರಿ, ಕುಡಿಯುವ ನೀರಿನ ಮೇಲೆ ಅವಲಂಬಿತರಾಗಿದ್ದೇವೆ. ಕಾವೇರಿ ನೀರು ಇಲ್ಲದಿದ್ದರೆ ಬದುಕಿನ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಜೀವ ಉಳಿಯಲು ನೀರು ಬೇಕೆ ಬೇಕು. ರಾಜ್ಯದ ಜನರ ಹಿತ ಕಾಯುವ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು. ಇದೇ ವೇಳೆ, ಇಂಡಿಯಾ ಒಕ್ಕೂಟಕ್ಕಾಗಿ ನೀರನ್ನು ಹರಿಸಲಾಗುತ್ತಿದೆ ಎಂಬ ಆರೋಪವನ್ನು ನಿರಾಕರಿಸಿದರು.












Click it and Unblock the Notifications