ದರ್ಶನ್ ಕೇಸ್: ಮೃತ ರೇಣುಕಾಸ್ವಾಮಿ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭೇಟಿ
ಚಿತ್ರದುರ್ಗ, ಜೂನ್ 18: ಪವಿತ್ರ ಗೌಡ ಹಾಗೂ ನಟ ದರ್ಶನ್ ಮತ್ತು ಗ್ಯಾಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದಲ್ಲಿ ವಿಚಾರ ನಡೆಯುತ್ತಿದೆ. ಮತ್ತೊಂದು ಕಡೆ ಕೊಲೆಯಾಗಿರುವ ಚಿತ್ರದುರ್ಗದ ರೇಣುಕಾ ಸ್ವಾಮಿ ಕುಟುಂಬಕ್ಕೆ ಮಠಾಧೀಶರು ಸೇರಿದಂತೆ ರಾಜಕೀಯ ಗಣ್ಯರು ಚಿತ್ರರಂಗದ ಗಣ್ಯರು ಭೇಟಿ ನೀಡುತ್ತಿದ್ದಾರೆ.
ಘಟನೆ ನಡೆದು ಹತ್ತು ದಿನ ಕಳೆಯುತ್ತುದ್ದು ಇಂದು ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿ ತಂದೆ, ತಾಯಿ ಹಾಗೂ ಮೃತನ ಪತ್ನಿಗೆ ಸಾಂತ್ವನ ಹೇಳಿದರು.

ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿರುವ ಮೃತನ ನಿವಾಸಕ್ಕೆ ಬಿ.ವೈ ವಿಜಯೇಂದ್ರ ಭೇಟಿ ನೀಡಿದ ಸಂದರ್ಭದಲ್ಲಿ ಮೃತನ ಪೋಷಕರು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.
ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ 'ದೇಶದಲ್ಲಿ ಇವತ್ತು ಈ ವಿಚಾರ ಬಹಳ ಜೋರಾಗಿ ಚರ್ಚೆಯಾಗುತ್ತಿದೆ. ರಾಜ್ಯ ಸರ್ಕಾರ ವಿಧಾನ ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು. ಇದನ್ನು ರಾಜಕೀಯವಾಗಿ ತೆಗೆದುಕೊಂಡು ಹೋಗಲು ನಾನು ಇಚ್ಛೆಪಡುವುದಿಲ್ಲ. ಆದರೆ ತನಿಖೆ ಯಾರ ಒತ್ತಡಕ್ಕೆ ಮಣಿಯದೆ, ತನಿಖೆ ನಡೆಸಬೇಕು' ಎಂದು ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯದ ಮುಖ್ಯಮಂತ್ರಿಗಳು ತಕ್ಷಣವೇ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಗೃಹ ಸಚಿವರು ಭೇಟಿ ನೀಡುತ್ತಾರೆ ಎಂಬ ಮಾಹಿತಿ ಕೇಳಿದ್ದೇನೆ. ನೊಂದಿರುವ ಈ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಬೇಕು ಜೊತೆಗೆ ಸರ್ಕಾರಿ ಉದ್ಯೋಗ ಕೊಡುವ ಮೂಲಕ ನ್ಯಾಯವನ್ನು ಕೊಡಿಸುವ ಕೆಲಸವನ್ನು ಗೃಹ ಸಚಿವರು ಮಾಡಬೇಕು ಎಂದು ತಿಳಿಸಿದರು. ಭಾರತೀಯ ಜನತಾ ಪಾರ್ಟಿ ಪಕ್ಷದ ವತಿಯಿಂದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರವನ್ನು ನೀಡಲಾಗಿದೆ ಎಂದು ತಿಳಿಸಿದರು.












Click it and Unblock the Notifications