6ನೇ ಗ್ಯಾರಂಟಿ ಸಿದ್ದರಾಮಯ್ಯ 5 ವರ್ಷ ಅಧಿಕಾರ ನಡೆಸ್ತಾರಾ?: ಕಾಂಗ್ರೆಸ್‌ಗೆ ಶಾಸಕ ಬಿ.ವೈ.ವಿಜಯೇಂದ್ರ ಪ್ರಶ್ನೆ
ಚಿತ್ರದುರ್ಗ, ಮೇ, 29: ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳ ಜಾರಿ ವಿಚಾರದಲ್ಲಿ ರಾಜ್ಯದ ಜನರಲ್ಲಿ ಗೊಂದಲ ಮೂಡಿಸಿದೆ. ಆದರೆ ಕಾಂಗ್ರೆಸ್ ಅನ್ನು ಆರನೇ ಗ್ಯಾರಂಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ವರ್ಷ ಅಧಿಕಾರ ನಡೆಸುತ್ತಾರಾ? ಎಂದು ಶಾಸಕ ಬಿ.ವೈ. ವಿಜಯೇಂದ್ರ ಅವರು ಸಿರಿಗೆರೆಯಲ್ಲಿ ಪ್ರಶ್ನಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಸಿರಿಗೆರೆಯ ತರಳಬಾಳು ಮಠಕ್ಕೆ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಭೇಟಿ ನೀಡಿ, ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ದರ್ಶನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕನಾದ ಬಳಿಕ ಸಿರಿಗೆರೆ ಮಠಕ್ಕೆ ಮೊದಲ ಭೇಟಿ ನೀಡಿ ತರಳಬಾಳು ಶ್ರೀಗಳ ದರ್ಶನ, ಆಶೀರ್ವಾದ ಪಡೆದಿದ್ದೇನೆ ಅಪ್ಪಾಜಿ ಬಿ.ಎಸ್.ವೈ ಅವರಂತೆ ರಾಜಕಾರಣ, ಅಭಿವೃದ್ಧಿಗೆ ಶ್ರೀಗಳ ಆಶೀರ್ವಾದ ಬೇಕಿದೆ ಎಂದರು.

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬೆಳೆಯುವಂತೆ ಶ್ರೀಗಳು ಕಿವಿಮಾತು ಹೇಳಿದ್ದಾರೆ ಎಂದರು. ಹಾಗೆಯೆ ಬಿಜೆಪಿಯಿಂದ ವಿಪಕ್ಷ ನಾಯಕರ ಆಯ್ಕೆ ವಿಳಂಬ ವಿಚಾರ ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರದ ನಾಯಕರು ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯದಲ್ಲಿ ಕಾರ್ಯನಿರತರಾಗಿದ್ದರು. ಅತೀ ಶೀಘ್ರದಲ್ಲಿ ವಿಪಕ್ಷ ನಾಯಕರ ಆಯ್ಕೆ ನಡೆಯಲಿದ್ದು, ಶಾಸಕರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿ ವಿಪಕ್ಷ ನಾಯಕರ ಆಯ್ಕೆ ಮಾಡಲಾಗುತ್ತದೆ ಎಂದರು.
ಕಾಂಗ್ರೆಸ್ ವಿರುದ್ಧ ಆಕ್ರೋಶ
ರಾಜ್ಯದಲ್ಲಿ ಕಾಂಗ್ರೆಸ್‌ಗೆ ಯಾರು ಗ್ಯಾರಂಟಿ ಕಾರ್ಡ್ ಕೇಳಿರಲಿಲ್ಲ, ಕಾಂಗ್ರೆಸ್‌ಗೆ ಹೇಗಾದರೂ ಸರಿ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶವಿತ್ತು. ಗ್ಯಾರಂಟಿ ಕಾರ್ಡ್ ಮೂಲಕ ಜನರಲ್ಲಿ ಸಾಕಷ್ಟು ನಿರೀಕ್ಷೆ ಬಿತ್ತಿದ್ದಾರೆ. ನಿರೀಕ್ಷೆಗೆ ತಕ್ಕಂತೆ ಗ್ಯಾರಂಟಿ ಅನುಷ್ಠಾನ ಮಾಡುವುದು ಕಾಂಗ್ರೆಸ್‌ನ ಕರ್ತವ್ಯ ಆಗಿರುತ್ತದೆ. ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಬೇಕು. 6ನೇ ಗ್ಯಾರಂಟಿ ಈ ಸಿಎಂ ಐದು ವರ್ಷ ಅಧಿಕಾರ ನಡೆಸತ್ತಾರಾ? ಎಂದು ಪ್ರಶ್ನಿಸುವ ಮೂಲಕ ವ್ಯಂಗ್ಯವಾಡಿದರು.
ಇತ್ತ ರಾಜ್ಯದ ಜನತೆಯಲ್ಲಿ ಸಾಕಷ್ಟು ಗೊಂದಲಗಳು ಹಾಗೂ ಜನರಲ್ಲಿ ಪ್ರಶ್ನೆಗಳಿವೆ. ಎಲ್ಲದಕ್ಕೂ ಉತ್ತರದ ನಿರೀಕ್ಷೆಯಲ್ಲಿ ಕಾಯುತ್ತಿದ್ದೇವೆ. ಉತ್ತರ ಸಿಗದಿದ್ದಲ್ಲಿ ನಾವು ಸಹ ಹೋರಾಟ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಪ್ರತಿಯೊಬ್ಬರ ಅಕೌಂಟಿಗೆ 15 ಲಕ್ಷ ರೂಪಾಯಿ ಹಾಕುವ ಭರವಸೆಯನ್ನು ನೀಡಿತ್ತು ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈ ರೀತಿ ಪ್ರಶ್ನೆ ಕೇಳುತ್ತಿದ್ದಾರೆ ಎಂದರೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹುಸಿ ಎಂದರ್ಥ. ಸಿಎಂ, ಡಿಸಿಎಂ ನಡುವಿನ ವ್ಯತ್ಯಾಸ ಮೇಲ್ನೋಟಕ್ಕೆ ಕಾಣುತ್ತಿದೆ. ಕೆಲ ಮಂತ್ರಿಗಳು ಸಿದ್ಧರಾಮಯ್ಯ 5ವರ್ಷ ಕಾಲ ಸಿಎಂ ಅಂತಾರೆ. ಇನ್ನೂ ಕೆಲವರು ಇಲ್ಲ ಎಂದು ಹೇಳುತ್ತಿದ್ದಾರೆ. ಕೆಲವರು ಇಲ್ಲ ಎಂದು ಹೇಳುತ್ತಿದ್ದಾರೆ ಅಂತಾ ವ್ಯಂಗ್ಯವಾಡಿದರು.
ಮತ್ತೊಂದು ಕಡೆ ಮಂತ್ರಿಯೊಬ್ಬರು ಆರ್‌ಎಸ್‌ಎಸ್, ಬಜರಂಗದಳ ಬ್ಯಾನ್ ಮಾಡುತ್ತೇವೆ ಅಂತಾರೆ. ಕಾನೂನು ಉಲ್ಲಂಘನೆ ಮಾಡಿ ನೋಡಿ ಎಂದು ಸವಾಲು ಹಾಕುತ್ತಾರೆ. ಸಿಎಂ ಸಿದ್ಧರಾಮಯ್ಯ ಈ ಬಗ್ಗೆ ಗಮನಹರಿಸಿ, ಮಂತ್ರಿಗಳ ಈ ರೀತಿಯ ಮಾತುಗಳಿಗೆ ಕಡಿವಾಣ ಹಾಕಬೇಕು. ಹಾಗೂ ಅಭಿವೃದ್ಧಿ ಕೆಲಸ, ಗ್ಯಾರಂಟಿ ಕಾರ್ಡ್ ಅನುಷ್ಠಾನದತ್ತ ಗಮನಹರಿಸಬೇಕು ಎಂದು ತಿಳಿಸಿದರು.












Click it and Unblock the Notifications