ಬಿಜೆಪಿ ಬ್ಯಾನರ್ ಕಟ್ಟುವಾಗ ಹೊಡೆದು ಓಡಿಸುತ್ತಿದ್ದರು; ಎ. ನಾರಾಯಣಸ್ವಾಮಿ
ಚಿತ್ರದುರ್ಗ, ಆಗಸ್ಟ್ 18; "ನಾರಾಯಣಸ್ವಾಮಿ ಅಂದರೆ ಘರ್ಜನೆ. ನ್ಯಾಯದ, ಧರ್ಮದ ಪರವಾದ ಘರ್ಜನೆ. ಜನಸೇವೆ ಮಾಡಲು ನಾನು ಬಂದಿರುವೇ" ಎಂದು ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.
ಬುಧವಾರ ಚಿತ್ರದುರ್ಗ ನಗರದಲ್ಲಿ ನಡೆದ ಜನಾಶೀರ್ವಾದಯಾತ್ರೆಯಲ್ಲಿ ಸಚಿವರು ಮಾತನಾಡಿದರು. "ಕೋವಿಡ್ ಸಂದರ್ಭದಲ್ಲಿ ನನಗೆ ಒಂದು ನೋವು ಕಾಡುತ್ತಿದೆ. ಕಾರಣ ಜೀವಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ, ನರಕ ನೋಡಿದ್ದೇನೆ" ಎಂದರು.
"ಕೋವಿಡ್ ಸಂದರ್ಭದಲ್ಲಿ ಯಾತ್ರೆ ಬೇಕಾ ಎಂದೇ?, ಇದಕ್ಕೆ ನಾಯಕರು ಕೋವಿಡ್ ನಿಯಮ ಪಾಲಿಸಿ ಎಂದು ಸೂಚನೆ ನೀಡಿದ್ದು, ಅದರಂತೆ ಯಾತ್ರೆ ಕೈಗೊಂಡಿದ್ದೇವೆ" ಎಂದು ಸಚಿವ ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.

"20 ವರ್ಷದ ಹಿಂದೆ ಬಿಜೆಪಿಯನ್ನು ಬ್ರಾಹ್ಮಣರ ಪಕ್ಷ, ದಲಿತರ ವಿರೋಧಿ ಪಕ್ಷ, ಎಂದು ಹಿಯಾಳಿಸಲಾಗುತ್ತಿತ್ತು. ಬ್ಯಾನರ್ ಕಟ್ಟುವಾಗ ಹೊಡೆದು ಓಡಿಸುತ್ತಿದ್ದರು, ಅದನ್ನೆಲ್ಲಾ ಎದುರಿಸಿ ದೌರ್ಜನ್ಯಕ್ಕೆ ಹೆದರದೇ ನಾಯಕನಾದೇ. ನಿಮ್ಮೆಲ್ಲರ ಒಂದು ಮತದಿಂದ ನಾನು ಸಚಿವನಾಗಿರುವೇ. ನಿಮ್ಮ ಪ್ರೀತಿಗೆ ಅಭಿನಂದನೆಗಳು" ಎಂದರು.
"ಕಾಂಗ್ರೆಸ್ 66 ವರ್ಷ ಆಡಳಿತ ನಡೆಸಿದೆ. ಇದರಲ್ಲಿ ದೇಶ ಎಷ್ಟು ಅಭಿವೃದ್ದಿ ಹೊಂದಿದೆ?. ಅದೇ 7 ವರ್ಷ ಮೋದಿ ಆಡಳಿತದಲ್ಲಿ ಎಷ್ಟು ಅಭಿವೃದ್ಧಿ ಕಂಡಿದೆ ಗಮನಿಸಿ. ಸದನದಲ್ಲಿ ಸ್ಪೀಕರ್ ಬಂದಾಕ್ಷಣ ಎಲ್ಲರೂ ಗೌರವ ನೀಡುತ್ತಾರೆ. ಅಂತಹ ಸ್ಪೀಕರ್ ಮುಖಕ್ಕೆ ವಿರೋಧ ಪಕ್ಷದವರು ಪೇಪರ್ ಎಸೆಯುತ್ತಾರೆ. 1೦ ಲಕ್ಷ ಮತ ಪಡೆದ ಸಂಸದ ಸದನದಲ್ಲಿ ಟೇಬಲ್ ಮೇಲೆ ನಿಂತು ಡ್ಯಾನ್ಸ್ ಮಾಡುತ್ತಾರೆ. ಎಂತಹ ಸಂಸ್ಕೃತಿಯನ್ನು ಕಾಂಗ್ರೆಸ್ ತರಲು ಹೊರಟಿದೆ? ಎಂಬುದು ತಿಳಿಯುತ್ತದೆ" ಎಂದು ಸಚಿವರು ವಾಗ್ದಾಳಿ ನಡೆಸಿದರು.
"ಅಂಬೇಡ್ಕರ್ ಅವರನ್ನು ಕಾಂಗ್ರೆಸ್ನವರು 2 ಸಲ ಸೋಲಿಸಿದರು. ಬಿಜೆಪಿ ಸರ್ಕಾರ ದಲಿತರ ಮೀಸಲಾತಿ ತೆಗೆಯಲಿದೆ ಎಂದು ಕಾಂಗ್ರೆಸ್ ಬಿಂಬಿಸುತ್ತಿದೆ. ಆದರೆ ಜನರಿಗೂ ಬುದ್ಧಿ ಇದೆ ಎಂಬುದನ್ನು ಕಾಂಗ್ರೆಸ್ ತಿಳಿದುಕೊಳ್ಳಲಿ. ಬಿಜೆಪಿ ಯಾವುದೇ ಕಾರಣಕ್ಕೂ ಸಂವಿಧಾನವನ್ನು ಮುಟ್ಟುವುದಿಲ್ಲ" ಎಂದರು.
"ಮಂಗಳವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇವೆ. ಚಿತ್ರದುರ್ಗ ಜಿಲ್ಲೆಯ ವೈದ್ಯಕೀಯ ಕಾಲೇಜಿಗೆ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ರೈಲ್ವೆ ಯೋಜನೆಗೆ ಹಣ ಮಂಜೂರು ಮಾಡಿಸಿದ್ದೇವೆ" ಎಂದು ಸಚಿವರು ವಿವರಣೆ ನೀಡಿದರು.
"ನಾನು ತ್ಯಾಗ, ಸಂಸ್ಕಾರವನ್ನು ಆರ್‌ಎಸ್ಎಸ್‌ನಿಂದ ಕಲಿತಿದ್ದು. ನನಗೂ ಬ್ರಾಂಡ್ ಇದೆ, ಶಾಸಕ, ಸಚಿವನಾಗಿ ಕೆಲಸ ಮಾಡುವಾಗ ಯಾರಿಂದಲೂ ಲಂಚ ಪಡೆದಿಲ್ಲ. ಅದೇ ನನ್ನ ಬ್ರಾಂಡ್" ಎಂದು ಸಚಿವ ನಾರಾಯಣಸ್ವಾಮಿ ಹೇಳಿದರು.
ಸಚಿವ ನಾರಾಯಣಸ್ವಾಮಿ ಮಂಗಳವಾರ ರಾತ್ರಿ ಹಿರಿಯೂರಿಗೆ ಆಗಮಿಸಿದರು. ವಿವಿ ಸಾಗರ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದರು. ಬೆಳಗ್ಗೆ ಹಿರಿಯೂರು ನಗರಕ್ಕೆ ಬಂದರು. ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.
ನಗರದ ದಕ್ಷಿಣ ಕಾಶಿ ಶ್ರೀ ತೇರುಮಲ್ಲೆಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ನಂತರ ಮೆರವಣಿಗೆ ಮೂಲಕ ನಗರದ ಟಿ. ಬಿ. ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಚಿತ್ರದುರ್ಗ ನಗರಕ್ಕೆ ಆಗಮಿಸಿದ್ದರು.
ಮೊಳಗಿದ ಡಿಜಿ ಸೌಂಡ್ : ಜನಾಶೀರ್ವಾದ ಯಾತ್ರೆಯಲ್ಲಿ ಡಿಜೆ ಸೌಂಡ್ ಮೊಳಗಿತು. ವಿವಿಧ ಕಲಾ ತಂಡಗಳು, ವಾದ್ಯಗೋಷ್ಠಿಗೆ ಕಾರ್ಯಕರ್ತರು ಕುಳಿದು ಕುಪ್ಪಳಿಸಿದರು. ಕೇಂದ್ರ ಸಚಿವರಿಗೆ ಕಾರ್ಯಕರ್ತರು ಜೈಕಾರ ಹಾಕಿದರು.
ಸಚಿವರ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಲಿಲ್ಲ. ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು. ಕಾರ್ಯಕ್ರಮಕ್ಕೆ ಸಚಿವ ಶ್ರೀರಾಮುಲು, ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್, ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ ಶೇಖರ್ ಗೈರಾಗಿದ್ದರು.












Click it and Unblock the Notifications