ಕಲುಷಿತ ನೀರು ಸೇವನೆ: ಕವಾಡಿಗರ ಹಟ್ಟಿಯಲ್ಲಿ ಹೆಚ್ಚುತ್ತಲೇ ಇದೆ ಸಾವಿನ ಸಂಖ್ಯೆ
ಚಿತ್ರದುರ್ಗ, ಆಗಸ್ಟ್ 04: ಚಿತ್ರದುರ್ಗ ನಗರದಲ್ಲಿನ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವನೆ ಪ್ರಕರಣದಲ್ಲಿ ಮತ್ತೊಂದು ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
60 ವರ್ಷದ ಪಾರ್ವತಮ್ಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇದಕ್ಕೂ ಮುನ್ನ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 50 ವರ್ಷದ ರುದ್ರಪ್ಪ ಸಾವನ್ನಪ್ಪಿದ್ದರು. ಇದೀಗ ಇಂದು ಒಂದೇ ದಿನ ಮೂವರು ಮೃತಪಟ್ಟಿದ್ದು ಸಾವಿನ ಸಂಖ್ಯೆ ಮುಂದುವರಿದಿದೆ. ಕಾವಾಡಿಗರ ಹಟ್ಟಿ ಜನರು ಸೇವಿಸಿದ ನೀರಿನ ಪ್ರಯೋಗಾಲಯ ವರದಿ ಬಂದಿದ್ದು, ಕಾಲರಾ ಮಾದರಿ ಅಂಶ ಪತ್ತೆಯಾಗಿತ್ತು ಎಂದು ವರದಿಯಾಗಿದೆ.

ಕಲುಷಿತ ನೀರು ಸೇವನೆಯಿಂದ ಸಾವುಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ಕವಾಡಿಗರ ಹಟ್ಟಿಯ ಜನರು ಪ್ರತಿಭಟನೆ ನಡೆಸಿದ್ದರು. ಟೈರ್ಗೆ ಬೆಂಕಿ ಹಚ್ಚಿ ರಸ್ತೆ ತಡೆದು ಆಕ್ರೋಶ ಹೊರಹಾಕಿದ್ದು ಅಧಿಕಾರಗಳ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದ್ದರು. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನೀರಿನ ಟ್ಯಾಂಕಿಯಲ್ಲಿ ವಿಷ ಬೆರಸಿದ ಆರೋಪ ಸಹ ಕೇಳಿ ಬಂದಿದ್ದು, ಸೂಕ್ತ ತನಿಖೆ ನಡೆಸುವಂತೆ ಕವಾಡಿಗರ ಹಟ್ಟಿಯ ಜನರು ಆಗ್ರಹಿಸಿದ್ದಾರೆ.
ಕವಾಡಿಗರ ಹಟ್ಟಿ ಪ್ರಕರಣ : ಇಬ್ಬರು ಇಂಜಿನಿಯರ್‍ಗಳ ಅಮಾನತಿಗೆ ಶಿಫಾರಸು
ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಸಾರ್ವಜನಿಕರ ಮರಣ ಹಾಗೂ ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಇಂಜಿನಿಯರ್‍ಗಳನ್ನು ಕರ್ತವ್ಯ ನಿರ್ಲಕ್ಷ್ಯತೆ ಆರೋಪದ ಮೇಲೆ ಅಮಾನತುಗೊಳಿಸಲು ಶಿಫಾರಸು ಮಾಡಲಾಗಿದ್ದು, ಒಬ್ಬರು ನೀರು ಸರಬರಾಜು ಸಹಾಯಕರನ್ನು ಅಮಾನತುಗೊಳಿಸಲಾಗಿದೆ ಹಾಗೂ ಇಬ್ಬರು ಹೊರಮೂಲ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ವಾಲ್ವ್ ಮ್ಯಾನ್‌ಗಳನ್ನು ಸೇವೆಯಿಂದ ತೆಗೆದುಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದ್ದಾರೆ.
ಕಳೆದ ಜು. 31 ರಂದು ಮಧ್ಯಾಹ್ನದ ನಂತರದಲ್ಲಿ ಕವಾಡಿಗರ ಹಟ್ಟಿಯ ಓವರ್ ಹೆಡ್ ಟ್ಯಾಂಕ್‌ನಿಂದ ನೀರು ಸರಬರಾಜು ಆಗುವ ಪ್ರದೇಶದ ಕೆಲವು ನಿವಾಸಿಗಳು ಅಸ್ವಸ್ಥರಾಗಿದ್ದು, ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಂಜುಳ ಎಂಬುವವರು ಅಸ್ವಸ್ಥರಾಗಿ, ಆಗಸ್ಟ್ 01 ರಂದು ಬೆಳಿಗ್ಗೆ ಮೃತಪಟ್ಟಿರುತ್ತಾರೆ, ಇವರ ಹೆಣ್ಣು ಮಗು ಕೂಡ ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಜು. 31 ರಿಂದ ಆ. 01 ರವರೆಗೆ ಈ ಪ್ರದೇಶದ ಹಲವು ಸಾರ್ವಜನಿಕರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಮೃತ ಮಹಿಳೆಯ ಪತಿ ಈ ಕುರಿತು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿ ಪೊಲೀಸ್ ವಿಚಾರಣೆ ಹಂತದಲ್ಲಿದೆ.
ಜಿಲ್ಲಾ ಆರೋಗ್ಯಾಧಿಕಾರಿಗಳ ವರದಿಯಂತೆ ಜು. 31 ರಿಂದ ಆ. 02 ರವರೆಗೆ ಒಟ್ಟು 107 ಪ್ರಕರಣಗಳು ದಾಖಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ 65 ಮತ್ತು ಬಸವೇಶ್ವರ ವೈದ್ಯಕೀಯ ಆಸ್ಪತ್ರೆಯಲ್ಲಿ 42 ಅಸ್ವಸ್ಥರು ಚಿಕಿತ್ಸೆ ಪಡೆದಿದ್ದು, 07 ಜನರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. ಮೂವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.












Click it and Unblock the Notifications