ಚಿಕ್ಕಮಗಳೂರು: ಬೆಂಗಳೂರಿನಿಂದ ಟ್ರಕ್ಕಿಂಗ್ ಹೋಗಿದ್ದ ಯುವಕ ನಾಪತ್ತೆ: ಬೈಕ್, ಐಡಿ ಕಾರ್ಡ್ ಪತ್ತೆ
ಚಿಕ್ಕಮಗಳೂರು, ಡಿಸೆಂಬರ್ 09: ಬೆಂಗಳೂರು ಮೂಲದ ಯುವಕ ಪ್ರವಾಸಕ್ಕೆಂದು ಬಂದು ಕಣ್ಮರೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಸಮೀಪ ಇರುವ ರಾಣಿಝರಿ ವ್ಯೂ ಬಳಿ ನಡೆದಿದೆ.
ಬೆಂಗಳೂರು ಮೂಲದ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಭರತ್ (30) ಪ್ರವಾಸಕ್ಕೆಂದು ಬಂದು ದುರ್ಗದಹಳ್ಳಿ ಸಮೀಪ ಇರುವ ರಾಣಿ ಝರಿ ವ್ಯೂ ಬಳಿ ಬೈಕ್ ನಿಲ್ಲಿಸಿ ಕಣ್ಮರೆಯಾಗಿದ್ದಾರೆ. K A.02, jw2033 ಬೈಕ್‌ನ ಹಿಂಬದಿಯಲ್ಲಿ ತನ್ನ ಐಡಿ ಕಾರ್ಡ್ ಸಿಕ್ಕಿಸಿ, ಬ್ಯಾಗನ್ನು ಇಟ್ಟು ಯುವಕ ನಾಪತ್ತೆಯಾಗಿದ್ದಾನೆ. ಮಗ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಪೋಷಕರು ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದ್ದಾರೆ.

ಯುವಕ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ, ಪೊಲೀಸರು ಹಾಗೂ ಸ್ಥಳೀಯರಿಂದ ಶೋಧ ಕಾರ್ಯ ಆರಂಭಗೊಂಡಿದೆ. ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿಕ್ಕಮಗಳೂರಿನಲ್ಲಿ ಅಕ್ರಮ ಭೂ ಮಂಜೂರಾತಿ: ತನಿಖೆಯಿಂದ ಇತಿಹಾಸ ಹೊರಕ್ಕೆ
ಚಿಕ್ಕಮಗಳೂರು: ಜಿಲ್ಲೆಯ ಅಕ್ರಮ ಭೂ ಮಂಜೂರಾತಿ ಪ್ರಕರಣ ರಾಜ್ಯಾದ್ಯಂತ ಸದ್ದು-ಸುದ್ದಿ ಮಾಡಿತ್ತು. ಅಕ್ರಮ ನಡೆದ ಹಿನ್ನೆಲೆಯಲ್ಲಿ ಭೂ ಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಮೂಡಿಗೆರೆ ಮತ್ತು ಕಡೂರು ತಾಲೂಕಿನಲ್ಲಿ ನಡೆದಿದ್ದ ಅಕ್ರಮ ಭೂ ಮಂಜೂರಾತಿ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಅದಕ್ಕಾಗಿ ಸರ್ಕಾರ ವಿಶೇಷ ತಂಡ ರಚನೆ ಮಾಡಿ, ತನಿಖೆಗೆ ಸೂಚಿಸಿತ್ತು.
ತನಿಖಾಧಿಕಾರಿಗಳು ಇದರ ಆಳಕ್ಕೆ ಇಳಿದು ಇದರ ಜಾಲವನ್ನು ಪತ್ತೆಹಚ್ಚಲು ಮುಂದಾಗಿದ್ದರು. ಅಕ್ರಮದ ಜಾಡು ಹಿಡಿದು ಹೊರಟ ಅಧಿಕಾರಿಗಳಿಗೆ ಸಿಕ್ಕಿದ್ದು ಅಧಿಕಾರಿಗಳು ಹಾಗೂ ಸ್ಥಳೀಯರ, ಸರ್ಕಾರದ ಕಣ್ಣಿಗೆ ಮಣ್ಣೆರಚಿ ಸರ್ಕಾರಿ ಜಾಗವನ್ನು ಅಕ್ರಮವಾಗಿ ಕಬ್ಜಾ ಮಾಡಿದ್ದವರ ಇತಿಹಾಸ. ಯಾವಾಗ ಪ್ರಕರಣ ಹೊರಬಂತೋ ಸರ್ಕಾರ 15 ಮಂದಿ ತಹಶೀಲ್ದಾರ್ ಗಳ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ, ತನಿಖೆಗೆ ಆದೇಶಿಸಿತ್ತು.

ಅಧಿಕಾರಿಗಳು ತನಿಖೆ ನಡೆಸಿದ 245 ಕಡತಗಳಿಗೆ ಸಂಬಂಧಿಸಿದಂತೆ 750 ಎಕರೆ ಜಮೀನು ಮಂಜೂರಾತಿ ರದ್ದು ಮಾಡಿದ್ದಾರೆ. ಇನ್ನಷ್ಟು ಕಡತಗಳ ಪರಿಶೀಲನೆ ಬಾಕಿ ಇದ್ದು ಮತ್ತಷ್ಟು ಭೂ ಮಂಜೂರಾತಿ ರದ್ದಾಗುವ ಆತಂಕ ಮನೆ ಮಾಡಿದೆ. 15 ತಹಶೀಲ್ದಾರ್ ಗಳ ತಂಡ ಸುದೀರ್ಘ ತನಿಖೆ ನಡೆಸಿ ರಾಜ್ಯ ಸರ್ಕಾರದ ಮುಂದೆ ಹಿರಿಯ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರೀಯ ಬಳಿ 10500 ಪುಟಗಳ ವರದಿ ಸಲ್ಲಿಸಿದ್ದಾರೆ. ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಈ ಭೂ ಕಬಳಿಕೆ ವಿಶೇಷ ನ್ಯಾಯಾಲಯ ಕೂಡ ಪ್ರಕರಣದ ವಿಚಾರಣೆಯನ್ನು ಸ್ವಯಂ ಪ್ರೇರಿತವಾಗಿ ಕೈಗೊಂಡಿರುವುದು ವಿಶೇಷ. ಈ ವೇಳೆ ನಮೂನೆ 50, 53,57ರ ಅಡಿಯಲ್ಲಿ ಅರ್ಜಿ ಸಲ್ಲಿಸದೆ ಇದ್ದರೂ ಸರ್ಕಾರಿ ಜಾಗ ಹೇಗೆ ಮಂಜೂರಾಯಿತು ಎನ್ನುವುದು ಸ್ಥಳೀಯರು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಟ್ಟಿ ಸಿಕ್ಕಿದೆ ಎಂದು ನನಗೂ ಬೇಕು, ನಮ್ಮ ತಲೆಮಾರಿಗೂ ಬೇಕು ಅಂತ ನಕಲಿ ದಾಖಲೆ ಸೃಷ್ಟಿಸಿ ಬೇಕಾಬಿಟ್ಟಿ ದೋಚಿದವರ ಒಂದೊಂದೇ ಬಣ್ಣ ಬಯಲಾಗುತ್ತಿದೆ. ತನಿಖೆ ಇನ್ನಷ್ಟು ವೇಗ ಪಡೆದರೆ ಮತ್ತಷ್ಟು ಅಕ್ರಮಗಳ ಬಣ್ಣ ಬಯಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. 2019 ರಿಂದ 2021 ರವರೆಗೆ ನಡೆದಿರುವ ಕಡತಗಳ ವಿಚಾರಣೆ ನಡೆಸಿದ ಅಧಿಕಾರಿಗಳೇ ಸ್ವತಃ ಈ ಪರಿಯ ಒತ್ತುವರಿ ನೋಡಿ ಬೆಚ್ಚಿಬಿದ್ದಿದ್ದಾರೆ. ಇನ್ನೂ 227 ಕಡತಗಳ ವಿಚಾರಣೆ ಬಾಕಿ ಇದ್ದು, ಇನ್ನೆಷ್ಟು ಅಕ್ರಮ ಬಯಲಾಗುತ್ತೋ ಎಂಬ ಸಂಗತಿಯನ್ನು ರೈತ ಸಂಘಟನೆಗಳು ವ್ಯಕ್ತಪಡಿಸಿದೆ.












Click it and Unblock the Notifications