ಕೈ ತಪ್ಪಿದ ಕಾಂಗ್ರೆಸ್ ಟಿಕೆಟ್: ಬೆಂಬಲಿಗರ ಸಭೆ ಕರೆದ ವೈ.ಎಸ್.ವಿ ದತ್ತಾ ಭಾನುವಾರ ಮಹತ್ವದ ನಿರ್ಧಾರ
ಚಿಕ್ಕಮಗಳೂರು ಏಪ್ರಿಲ್ 07: ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಸಾವಿರಾರು ಅಭಿಮಾನಿಗಳು ದತ್ತ ಮನೆಯಲ್ಲಿ ಜಮಾಯಿಸಿ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿ, ದತ್ತಾ ಅವರಿಗೆ ಪಕ್ಷೇತರವಾಗಿ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ.
ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಕಳೆದ ಮೂರ್ನಾಲ್ಕು ದಶಕಗಳ ಜೆಡಿಎಸ್ ಸಂಬಂಧವನ್ನು ಕಳೆದುಕೊಂಡು ಕಳೆದ ಎರಡು ತಿಂಗಳ ಹಿಂದಷ್ಟೆ ಕಾಂಗ್ರೆಸ್ ಸೇರಿದ್ದರು. ಮಾಜಿ ಶಾಸಕರು ಕಾಂಗ್ರೆಸ್ ಸೇರುತ್ತಿದ್ದಂತೆ ಅಭಿಮಾನಿಗಳಲ್ಲಿ ಕಾಂಗ್ರೆಸ್ ಟಿಕೆಟ್ ದತ್ತ ಅವರಿಗೆ ಸಿಗಲಿದೆ. ಜಾತ್ಯಾತೀತ ನಾಯಕ ದತ್ತ ಗೆದ್ದೆ ಗೆಲ್ಲುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಕಾಂಗ್ರೆಸ್ ವೈ.ಎಸ್.ವಿ.ದತ್ತಾ ಬೆಂಬಲಿಗರಿಗೆ ಶಾಕ್ ನೀಡಿದೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಓಡಾಡಿಕೊಂಡು ಪಕ್ಷ ಸಂಘಟನೆ ಮಾಡಿದ್ದ ಕೆ.ಎಸ್.ಆನಂದ್‍ಗೆ ಕಾಂಗ್ರೆಸ್ ಪಕ್ಷ ಮಣೆ ಹಾಕಿದೆ. ಕಡೂರಿನ ಕಾಂಗ್ರೆಸ್ ಟಿಕೆಟ್ ದತ್ತಾ ಅವರಿಗೆ ಎಂದೇ ಹೇಳಲಾಗಿತ್ತು. ಅದರೆ, ಕೊನೆ ಘಳಿಗೆಯಲ್ಲಿ ದತ್ತಾ ಅವರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ದತ್ತಾ ಅಭಿಮಾನಿಗಳು ಬೇಸರಗೊಂಡು ಕಾಂಗ್ರೆಸ್ ವಿರುದ್ಧ ರೆಬಲ್ ಆಗಿದ್ದಾರೆ.
ಟಿಕೆಟ್ ಕೈತಪ್ಪಿ ಪಕ್ಷದಿಂದ ಸ್ಪರ್ಧೆಗೆ ಅವಕಾಶ ದೊರೆಯದಿದ್ದರೂ ಕೂಡ ಈ ಚುನಾವಣೆಯಲ್ಲಿ ನೀವು ಸ್ಪರ್ಧಿಸಲೇಬೇಕು ಎಂದು ಕಾರ್ಯಕರ್ತರು ಹಾಗೂ ದತ್ತಾ ಅಭಿಮಾನಿಗಳು ದತ್ತ ಅವರನ್ನ ಒತ್ತಾಯಿಸಿದ್ದಾರೆ. ದತ್ತಾ ಅವರು ಬೆಂಗಳೂರಿನಿಂದ ಬರುವುದನ್ನೇ ಕಾಯುತ್ತಿದ್ದ ಅಭಿಮಾನಿಗಳು ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿವರು ಅವರ ಮನೆ ಮುಂದೆ ಜಮಾಯಿಸಿದ್ದರು.

ಯಾವ ಪಕ್ಷ ಅವಕಾಶ ನೀಡದಿದ್ದರೂ ಚಿಂತೆಯಿಲ್ಲ. ನೀವು ಸ್ಪರ್ಧೆ ಮಾಡಲೇಬೇಕೆಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷ ನಿಮಗೆ ಟಿಕೆಟ್ ನೀಡದೆ ವಂಚನೆ ಮಾಡಿರುವುದರಿಂದ ಆ ಪಕ್ಷದ ಸಹವಾಸವೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ವತಂತ್ರವಾಗಿಯಾದರು ನೀವು ಸ್ಪರ್ಧಿಸಲೇಬೇಕು. ನಿಮ್ಮನ್ನ ಗೆಲ್ಲಿಸುವುದು ನಮ್ಮ ಜವಾಬ್ದಾರಿ. ನಾವೇ ಹಣ ಹಾಕಿಕೊಂಡು ಚುನಾವಣೆ ನಡೆಸುತ್ತೇವೆ ಎಂದು ದತ್ತ ಅಭಿಮಾನಿಗಳು ಮನವಿ ಮಾಡಿದ್ದಾರೆ.
ಅಭಿಮಾನಿಗಳ ಪ್ರೀತಿಗೆ ಪ್ರತಿಕ್ರಿಯಿಸಿರುವ ವೈ.ಎಸ್.ವಿ.ದತ್ತಾ , ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದು, ಇಂದು ಕಡೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಘೋಷಣೆಯಾಗಿದೆ. ನನಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡಲಿಲ್ಲವೆಂದು ಅಸಮಾಧಾನವಿಲ್ಲ. ಆದರೆ ಸೌಜನ್ಯಕ್ಕಾದರೂ ಯಾರೂ ನನಗೆ ಒಮ್ಮೆಯಾದರೂ ನನ್ನನ್ನು ಯಾವ ನಾಯಕರೂ ಸಂಪರ್ಕಿಸಲಿಲ್ಲ ಎಂಬ ನೋವಿದೆ ಎಂದು ಬೇಸರಗೊಂಡಿದ್ದಾರೆ.

ಇದು ನನ್ನ ಸ್ವಾಭಿಮಾನದ ಪ್ರಶ್ನೆ. ಇಲ್ಲಿ ಅಭಿಮಾನಿಗಳು ನಾನು ಸ್ಪರ್ಧಿಸಲೇಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಎಲ್ಲ ಸಾಧಕ-ಬಾಧಕಗಳನ್ನು ಯೋಚಿಸಿ ಇನ್ನೆರಡು ದಿನಗಳಲ್ಲಿ ಮತ್ತೊಮ್ಮೆ ಅಭಿಮಾನಿಗಳ ಮತ್ತು ಹಿತೈಷಿಗಳ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಸಭೆ ಕರೆದ ವೈಎಸ್‌ವಿ ದತ್ತಾ
ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರಗೊಂಡಿರುವ ವೈ.ಎಸ್.ವಿ.ದತ್ತಾ ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಟಿಕೆಟ್ ನೀಡದೇ ಇರುವುದು. ನನ್ನ-ನಿಮ್ಮ ಆತ್ಮಗೌರವ, ಸ್ವಾಭಿಮಾನಕ್ಕೆ ಅಪಮಾನವಾಗಿದೆ ಎಂದ ವೈ.ಎಸ್.ವಿ.ದತ್ತಾ ಭಾನುವಾರ(ಏಪ್ರಿಲ್ 9) ಬೆಳಗ್ಗೆ 11 ಗಂಟೆಗೆ ತಮ್ಮ ಅಭಿಮಾನಿಗಳ ಸಭೆ ಕರೆದಿದ್ದಾರೆ. ಅಭಿಮಾನಿಗಳಿಗೆ ಎರಡು ದಿನ ಅವಕಾಶ ಕೇಳಿರುವ ವೈ.ಎಸ್. ವಿ ದತ್ತಾ ಭಾನುವಾರದ ಸಭೆ ಬಳಿಕ ದತ್ತ ಅವರ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಈ ಮಧ್ಯೆ ದತ್ತಾ ಅವರಿಗೆ ಟಿಕೆಟ್ ಸಿಗಲಿಲ್ಲ ಆಯ್ತು ತಿಳಿಯುತ್ತಿದ್ದಂತೆ ಕಡೂರಿನ ಜೆಡಿಎಸ್ ಅಭ್ಯರ್ಥಿ ಧನಂಜಯ್ ಮಾತನಾಡಿದ್ದು, ಕಾಂಗ್ರೆಸ್ ದತ್ತಾ ಅವರಿಗೆ ನಂಬಿಕೆದ್ರೋಹ ಮಾಡಿದೆ. ಅದು ಬಿಜೆಪಿಯ ಬಿ ಟೀಂ. ದತ್ತಾ ಪಕ್ಷಕ್ಕೆ ಬಂದರೆ ಆತ್ಮೀಯವಾದ ಸ್ವಾಗತ. ಅವರಿಗೆ ಪಕ್ಷದ ವರಿಷ್ಠರು ಉನ್ನತ ಸ್ಥಾನ ನೀಡುತ್ತಾರೆಂಬ ನಂಬಕೆ ನನಗಿದೆ. ಅವರು ಪಕ್ಷಕ್ಕೆ ಬಂದರೆ ಸ್ವಾಗತ ಎಂದಿದ್ದಾರೆ.












Click it and Unblock the Notifications