Breaking: ಮೂಡಿಗೆರೆ: ಕಾಡಾನೆಗೆ ಕಾರ್ಮಿಕ ಬಲಿ, ಅರಣ್ಯ ಇಲಾಖೆ ವಿರುದ್ದ ಆಕ್ರೋಶ
ಚಿಕ್ಕಮಗಳೂರು, ಸೆಪ್ಟೆಂಬರ್ 9 : ಕಾಡಾನೆ ದಾಳಿಗೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಕಾರ್ಮಿಕ ಅರ್ಜುನ್ ಎಂಬಾತ ಸಾವಿಗೀಡಾಗಿದ್ದು, ತಿಂಗಳ ಅಂತರದಲ್ಲಿ ಆನೆ ದಾಳಿಗೆ ಇಬ್ಬರು ಬಲಿಯಾದ ಬೆನ್ನಲ್ಲೇ ಗ್ರಾಮಸ್ಥರು ಅರಣ್ಯ ಇಲಾಖೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮದಲ್ಲಿ ತೋಟದ ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕ ಅರ್ಜುನ್ ಎಂಬುವರ ಮೇಲೆ ಆನೆ ದಾಳಿ ಮಾಡಿದ ಪರಿಣಾಮ, ಅರ್ಜುನ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗ್ರಾಮದ ಮುಖ್ಯ ರಸ್ತೆಯಲ್ಲಿಯೇ ಕಾಡಾನೆ ದಾಳಿ ನಡೆಸಿದ್ದು, ಸುಮಾರ 100 ಅಡಿಯಷ್ಟು ದೂರದವರೆಗೆ ಅಟ್ಟಾಡಿಸಿ ತುಳಿದು ಕೊಂದಿತ್ತು.
ತಿಂಗಳ ಅಂತರದಲ್ಲಿ ಆನೆ ದಾಳಿಯಿಂದಾದ ಎರಡನೇ ಸಾವು ಇದಾಗಿದ್ದು, ಅಕ್ಕಪಕ್ಕದ ಗ್ರಾಮಗಳಲ್ಲಿ ಭೀತಿ ಹುಟ್ಟಿಸುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿಯಬೇಕೆಂದು ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ಮಾಡಿದರು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಪ್ರಯತ್ನಿಸಿದರಾದರೂ, ಪರಿಸ್ಥಿತಿ ಹತೋಠಿಗೆ ಬಾರದ ಕಾರಣ ಲಾಠಿ ಚಾರ್ಜ್ ಮಾಡಿದರು.

ತಿಂಗಳಲ್ಲಿ 2ನೇ ದುರ್ಘಟನೆ
ಇದು ಈ ಭಾಗದಲ್ಲಿ ಕಾಡಾನೆ ದಾಳಿಗೆ ಸಾವಿಗೀಡಾಗಿರುವ 2ನೇ ಘಟನೆಯಾಗಿದೆ. ಆಗಸ್ಟ್ 15ರಂದು ಮೂಡಿಗೆರೆ ತಾಲೂಕಿನ ಹಾರ್ಗೋಡು ಗ್ರಾಮದ ಆನಂದ್ ದೇವಾಡಿಗ ಎಂಬುವರ ಮೇಲೆ ಆನೆ ದಾಳಿ ಮಾಡಿದ್ದು ಅವರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅವರ ಮೃತದೇಹವನ್ನು ಆನೆ ಕಾಡಿನಲ್ಲಿ ಸುಮಾರು ಒಂದು ಕಿ.ಮೀ. ಎಳೆದುಕೊಂಡು ಹೋಗಿದ್ದ ಪರಿಣಾಮ ದೇಹದ ಅಂಗಾಂಗಗಳು ಕಾಡಿನಲ್ಲಿ ಚದುರಿ ಹೋಗಿದ್ದವು.
ಬೀಡು ಬಿಟ್ಟಿರುವ ಕಾಡಾನೆಗಳು
ಮೂಡಿಗೆರೆ ತಾಲೂಕಿನ ಊರಬಗೆ, ಗೌಡಹಳ್ಳಿ ಭಾಗದಲ್ಲಿ ಹಲವು ಕಾಡಾನೆಗಳು ಬೀಡುಬಿಟ್ಟಿದ್ದು, ಸ್ಥಳೀಯರು ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ಅರಣ್ಯ ಇಲಾಖೆಯೇ ಮಾಡಿದ ಕೊಲೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈ ಭಾಗದಲ್ಲಿ ಆನೆಗಳ ಹಾವಳಿ ತುಂಬಾ ವರ್ಷಗಳಿಂದ ಇದೆ, ಐದಾರು ಮಂದಿಯನ್ನು ಕೊಂದಿವೆ. ಮೂರು ನಾಲ್ಕು ವಾಹನಗಳನ್ನು ಜಖಂ ಮಾಡಿವೆ. ಹಾಗಾಗಿ ಈ ಭಾಗದಲ್ಲಿ ತೊಂದರೆ ಕೊಡಿರುವ ಆನೆಯನ್ನು ಹಿಡಿಯಬೇಕು. ಆದಷ್ಟು ಬೇಗ ಅರಣ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳು ಆನೆಗಳನ್ನು ಸೆರೆ ಹಿಡಿಯಲು ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.












Click it and Unblock the Notifications