ಚಿಕ್ಕಮಗಳೂರು: ಮೂವರನ್ನು ಬಲಿ ಪಡೆದ ಕಾಡಾನೆ ಸೆರೆಗೆ ಸರ್ಕಾರದ ಆದೇಶ
ಚಿಕ್ಕಮಗಳೂರು, ನವೆಂಬರ್ 25: ಮೂಡಿಗೆರೆಯಲ್ಲಿ ಇತ್ತೀಚೆಗೆ ಮೂವರನ್ನು ಬಲಿ ಪಡೆದ ಕಾಡಾನೆ ಸೆರೆ ಹಿಡಿಯುಲು ಮತ್ತೊಮ್ಮೆ ಸರ್ಕಾರ ಆದೇಶ ಮಾಡಿದೆ. ಮಲೆನಾಡಲ್ಲಿ ಮೂರು ಕಾಡಾನೆಗಳನ್ನು ಹಿಡಿಯಲು ಆದೇಶ ಹೊರಡಿಸಲಾಗಿದ್ದು ಇಂದಿನಿಂದಲೇ ಒಂಟಿ ಸಲಗ ಸೇರಿದಂತೆ ಮತ್ತೆರಡು ಕಾಡಾನೆಗಳ ಸೆರೆಗೆ ಕಾರ್ಯಾಚರಣೆ ಆರಂಭವಾಗಿದೆ
ಮಲೆನಾಡು ಭಾಗದಲ್ಲಿ ಮೂವರನ್ನು ಬಲಿ ಪಡೆದ ಒಂಟಿ ಸಲಗ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದ್ದು, ನಿರಂತರ ಕಾಡಾನೆ ದಾಳಿಯಿಂದ ತತ್ತರಿಸಿರುವ ಮೂಡಿಗೆರೆ ಜನರ ಆಕ್ರೋಶ, ಪ್ರತಿಭಟನೆ ಹಿನ್ನೆಲೆಯಲ್ಲಿ ಆನೆ ಸೆರೆಹಿಡಿಯಲು ಆದೇಶ ಮಾಡಲಾಗಿದೆ, ಪುಂಡಾನೆಗಳನ್ನು ಸೆರೆಹಿಡಿದು ರೆಡಿಯೋ ಕಾಲರ್ ಅಳವಡಿಸಲು ಸಹಾ ಸೂಚಿಸಲಾಗಿದ್ದು, ಸೆರೆ ಹಿಡಿದ ಆನೆಗಳನ್ನು ಭದ್ರಾ ಸಂರಕ್ಷಿತಾ ಪ್ರದೇಶಕ್ಕೆ ಸ್ಥಳಾಂತರಿಸಲು ಆದೇಶಿಸಲಾಗಿದೆ.

ಸಾಕಾನೆಗಳ ಮೂಲಕ ಒಂಟಿ ಸಲಗ ಸೆರೆಹಿಡಿಯುವ ಕಾರ್ಯಾಚರಣೆ ಇದೀಗ ಆರಂಭಗೊಂಡಿದೆ. ಈ ನಡುವೆ ಚಾರ್ಮಾಡಿ ಘಾಟಿ ಸುತ್ತಮುತ್ತ ಕಾಡಾನೆಗಳು ಮತ್ತೆ ಪ್ರತ್ಯಕ್ಷವಾಗಿವೆ. ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವವರಿಗೆ ಎಚ್ಚರಿಕೆಯ ಫಲಕ ಹಾಕಲಾಗಿದ್ದು. ಅದರಲ್ಲೂ ರಾತ್ರಿ ವೇಳೆ ಸಂಚಾರ ಮಾಡುವವರು ಅತ್ಯಂತ ಎಚ್ಚರವಾಗಿರಲೇಬೇಕಾಗಿದೆ.
ಚಾರ್ಮಾಡಿಯಲ್ಲಿ ಕಾಡಾನೆ ರೌಂಡ್ಸ್, ವಾಹನ ಸವಾರರಲ್ಲಿ ಹೆಚ್ಚಿದ ಆತಂಕ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಮಲಯ ಮಾರುತ ಬಳಿ ಕಾಡಾನೆಗಳು ಕಾಣಿಸಿಕೊಂಡಿದ್ದು, ವಾಹನ ಸವಾರರಿಗೆ ಆತಂಕ ಎದುರಾಗಿದೆ. ಚಿಕ್ಕಮಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್‌ನಲ್ಲಿ ಕಾಫಿ ತೋಟಕ್ಕೆ ನುಗ್ಗಿ ಸಾಕಷ್ಟು ಬೆಳೆ ಹಾನಿ ಮಾಡಿವೆ.

ಈ ಭಾಗದಲ್ಲಿ ಸಂಚರಿಸುತ್ತಿದ್ದ ಆನೆಗಳ ಹಿಂಡನ್ನು ಹರಸಾಹಸ ಪಟ್ಟು ಪಟಾಕಿ ಸಿಡಿಸಿ ಅರಣ್ಯ ಸಿಬ್ಬಂದಿಗಳು ಕಾಡಿಗಟ್ಟಿದ್ದಾರೆ. ಆದರೆ ಘಾಟ್ ರಸ್ತೆಯಲ್ಲಿ ರಾತ್ರಿ ವೇಳೆ ಆನೆಗಳು ರಸ್ತೆಗೆ ಬಂದರೆ ತಪ್ಪಿಸಿಕೊಳ್ಳುವುದು ಕಷ್ಟಸಾಧ್ಯ ಎಂದು ವಾಹನ ಸವಾರರು ಭೀತಿ ವ್ಯಕ್ತಪಡಿಸಿದ್ದಾರೆ. ಚಾರ್ಮಾಡಿ ಘಾಟಿಯ ಎರಡೂ ಬದಿಯಲ್ಲೂ ಸಾವಿರಾರು ಅಡಿ ಪ್ರಪಾತವಿದ್ದು ವಾಹನವನ್ನು ವಾಪಸ್ ತೆಗೆಯುವುದು ಕಷ್ಟ. ಇತ್ತೀಚಿಗೆ ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆ ಹಾವಳಿ ಯಥೇಚ್ಛವಾಗುತ್ತಿದ್ದು, 2 ತಿಂಗಳಲ್ಲಿ ಮೂವರನ್ನು ಬಲಿ ಪಡೆದಿವೆ. ಹಾಗಾಗಿ ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವವರು ಎಚ್ಚರದಿಂದ ವಾಹನ ಚಾಲನೆ ಮಾಡಬೇಕಾಗಿದೆ.
ಕೊನೆಗೂ ಸೆರೆಯಾದ ಚಿರತೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಎಂ.ಸಿ.ಹಳ್ಳಿ ಗ್ರಾಮ ಹಳೇ ತಾಳೇ ಪ್ಯಾಕ್ಟರಿಯಲ್ಲಿ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ಜನರು ಭಯಗೊಂಡು ತಮ್ಮ ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದರು. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ ಹಿನ್ನೆಲೆ ಅರಣ್ಯಾಧಿಕಾರಿ ಚಿರತೆ ಸೆರೆ ಹಿಡಿದಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.












Click it and Unblock the Notifications