ಫುಲ್ ಹೆಲ್ಮೆಟ್ ಹಾಕ್ತೀರ ಅಥವಾ ಇಷ್ಟು ರೂ. ದಂಡ ಕಟ್ತೀರಾ.. ಹೇಳಿ?: ಚಿಕ್ಕಮಗಳೂರಿನಲ್ಲಿ ಬೈಕ್ ಸವಾರರಿಗೆ ಪೊಲೀಸರ ಪ್ರಶ್ನೆ
ಚಿಕ್ಕಮಗಳೂರು, ಜೂನ್, 29: ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಹೆಚ್ಚಾಗಿ ದ್ವಿಚಕ್ರ ವಾಹನವಾದ ಬೈಕ್‌ನಲ್ಲಿ ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡುವಾಗ ಅಪಘಾತದಲ್ಲಿ ತಲೆಗೆ ಹೊಡೆತ ಬಿದ್ದು ಅದೆಷ್ಟೋ ಜನರು ಸಾವನ್ನಪ್ಪಿದ ಘಟನೆಗಳು ಕೂಡ ನಡೆದಿದೆ. ಇದೀಗ ಇಂತಹ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಚಿಕ್ಕಮಗಳೂರು ಜಿಲ್ಲೆ ಪೊಲೀಸರು ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
500 ಫೈನ್ ಹಾಕಬೇಕಾ ಹೇಳಿ?
ತಲೆಗೆ ಹೆಲ್ಮೆಟ್ ಹಾಕೊಳ್ತೀರ ಇಲ್ಲ 500 ಫೈನ್ ಹಾಕಬೇಕಾ ಹೇಳಿ. ನಿಮ್ಮ ಜೀವವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಿಮ್ಮಗಳ ಕೈಯಲ್ಲಿದೆ ಎಂದು ಹೇಳುವ ಮೂಲಕ ಬೈಕ್ ಸವಾರರಿಗೆ ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಬುದ್ಧಿವಾದ ಹೇಳಿದರು.

ಹಾಗೆಯೇ ಇವತ್ತು ಫೈನ್ ಹಾಕುವುದಿಲ್ಲ, ಹಾಗೇ ಬಿಡುತ್ತೇವೆ, ಎಚ್ಚೆತ್ತುಕೊಂಡರೆ ನಿಮ್ಮಗೆ ಒಳ್ಳೆಯದು ಎಂದು ಕಿವಿಮಾತು ಹೇಳಿದರು. ಅದರಲ್ಲೂ ತಲೆ, ಕಿವಿ, ಮುಖ ಕವರ್ ಆಗುವಂತಹ ಹೆಲ್ಮೆಟ್ ಹಾಕಬೇಕು ಎಂದು ಹಾಫ್ ಹೆಲ್ಮೇಟ್ ಹಾಕಿಕೊಂಡು ಬಂದಂತಹ ಬೈಕ್ ಸವಾರರಿಗೆ ಕಾಫಿನಾಡಿನ ಪೊಲೀಸರು ಬುದ್ಧಿ ಮಾತು ಹೇಳಿದರು.
ಇದೇ ವೇಳೆ ಚಿಕ್ಕಮಗಳೂರು ನಗರದಲ್ಲಿ ಹಾಫ್ ಹೆಲ್ಮೇಟ್ ಸೀಜ್ ಮಾಡಿ, ಹೊಸ ಹೆಲ್ಮೇಟ್ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಒಟ್ಟಿನಲ್ಲಿ 2 ದಿನದಲ್ಲಿ ಸಾವಿರಾರು ಹಾಫ್ ಹೆಲ್ಮೇಟ್‌ಗಳನ್ನಯ ಸೀಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹಾಸನದಲ್ಲಿ ಪುಂಡರ ಅಟ್ಟಹಾಸ
ಮತ್ತೊಂದೆಡೆ ಹಾಸನದಲ್ಲಿ ಬೈಕ್ ವೀಲ್ಹಿಂಗ್ ಮಾಡುವ ಮೂಲಕ ಪುಂಡರಿಬ್ಬರು ಅಟ್ಟಹಾಸ ಮೆರೆದಿದ್ದಾರೆ. ಇನ್ನು ಇವರಿಬ್ಬರ ಪುಂಡಾಟದಿಂದ ಇಬ್ಬರು ಯುವತಿಯರು ಗಂಭೀರ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಶಾಕೀರ್ ಎಂಬ ಯುವಕ ಮತ್ತು ಆತನ ಸ್ನೇಹಿತ ಹಾಸನ ನಗರದ, ಸಾಲಗಾಮೆ ರಸ್ತೆಯ, ಕನ್ನಡ ಸಾಹಿತ್ಯ ಪರಿಷತ್ ಭವನದ ಎದುರು ನಿನ್ನೆ ರಾತ್ರಿ ಬೈಕ್ ವೀಲ್ಹಿಂಗ್ ಮಾಡಿದ್ದಲ್ಲದೆ, ಇದೆ ವೇಳೆ ಇಬ್ಬರು ಯುವತಿಯರಿಗೆ ಗುದ್ದಿದ್ದಾರೆ. ಇನ್ನು ಘಟನೆಯಲ್ಲಿ ಭೂಮಿಕಾ, ಸಿಂಚನ ಎಂಬ ಇಬ್ಬರು ಯುವತಿಯರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆ ಭೂಮಿಕಾ ಅವರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಪುಂಡಾಟ ಮೆರೆದ ಶಾಕೀರ್ ಹಾಗೂ ಅಪ್ರಾಪ್ತನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೆ ಇಂತಹ ಪುಂಡರ ಅಟ್ಟಹಾಸಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದಾರೆ.
ಇದೀಗ ವೀಲ್ಹಿಂಗ್ ಮಾಡಿ ಅಪಘಾತಕ್ಕೆ ಕಾರಣರಾದ ಶಾಕೀರ್ ಹಾಗೂ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications