ಪಂಡರವಳ್ಳಿ: ಹುಲಿ ದಾಳಿಯಿಂದ ಅಸ್ಸಾಂ ಮೂಲದ ಮಹಿಳೆಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಳಿ
ಚಿಕ್ಕಮಗಳೂರು, ಜೂನ್, 06: ಕಾರ್ಮಿಕ ಮಹಿಳೆ ಮೇಲೆ ಹುಲಿ ದಾಳಿ ಮಾಡಿದ ಘಟನೆ ಪಂಡರವಳ್ಳಿಯ ಕಾಫಿತೋಟದಲ್ಲಿ ನಡೆದಿದ್ದು, ಇನ್ನು ಹುಲಿ ದಾಳಿಗೊಳಗಾದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನ ಪಂಡರವಳ್ಳಿ ಕಾಫಿ ತೋಟದಲ್ಲಿ ಅಸ್ಸಾಂ ಮೂಲದ ಮೈಕ್ ಉನ್ನಿಸಾ ಎನ್ನುವ ಮಹಿಳೆ ಮೇಲೆ ಹುಲಿ ದಾಳಿ ಮಾಡಿದ್ದು, ಈ ವೇಳೆ ತೋಟದಲ್ಲಿದ್ದ ಕಾರ್ಮಿಕರು ಕೂಗಾಡುತ್ತಿದ್ದಂತೆ ಹುಲಿ ಪರಾರಿಯಾಗಿದೆ. ಆದರೆ ಹುಲಿ ದಾಳಿಯಿಂದ ಮಹಿಳೆಗೆ ಹಣೆ ಮತ್ತು ಮುಖದ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

8 ವರ್ಷದ ಹಿಂದೆ ಕೂಡ ಪಂಡರವಳ್ಳಿಯ ಕಾಫಿ ತೋಟದಲ್ಲಿ ಹುಲಿ ದಾಳಿಯಿಂದ ಮಹಿಳೆಯೊಬ್ಬರು ಬಲಿಯಾಗಿದ್ದರು. ಇದೀಗ ಮತ್ತೆ ಹುಲಿ ದಾಳಿಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ಇಲ್ಲಿನ ಕೂಲಿ ಕಾರ್ಮಿಕರು ಕಾಫಿತೋಟಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಕಡವೆ ಮೇಲೆ ದಾಳಿ ಮಾಡಿದ ಸೀಳುನಾಯಿಗಳು
ಹಾಗೆಯೆ ಮೇಯುತ್ತಾ ನಿಂತಿದ್ದ ಕಡವೆಯೊಂದರ ಮೇಲೆ ವಾಹನಗಳ ಓಡಾಡಟದ ನಡುವೆಯೂ ಸೀಳುನಾಯಿಗಳ ಗುಂಪು ಬೇಟೆಯಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ ಕೇರಳಕ್ಕೆ ತೆರಳುವ ರಸ್ತೆಯಲ್ಲಿ ನಡೆದಿದೆ.
ಕೇರಳ ರಸ್ತೆಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಕಾಡು ಬರಲಿದ್ದು, ಇಲ್ಲಿ ವಾಹನಗಳ ಓಡಾಟವು ಹೆಚ್ಚಿರಲಿದೆ. ಇಲ್ಲಿನ ರಸ್ತೆಬದಿ ಮೇಯುತ್ತಾ ನಿಂತಿದ್ದ ಕಡವೆಯೊಂದರ ಮೇಲೆ 7ಕ್ಕೂ ಹೆಚ್ಚು ಸೀಳುನಾಯಿಗಳು ದಾಳಿ ಮಾಡಿ ತಮ್ಮ ಆಹಾರವನ್ನು ಪಡೆದುಕೊಂಡಿವೆ.
ಆದರೆ, ಪ್ರಾಣ ಕಳೆದುಕೊಳ್ಳುವ ಸಂದರ್ಭದಲ್ಲಿ ಕಡವೆಯ ಅಸಹಾಯಕತೆ ಕಂಡ ಪ್ರಯಾಣಿಕರು ಮರುಗಿದ್ದಾರೆ. ಇನ್ನು, ಈ ರೋಮಾಂಚಕ ದೃಶ್ಯವನ್ನು ರಂಗರಾಜು ಎಂಬವವರು ಸೆರೆ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೆ ಈ ದೃಶ್ಯವು ಮೈ ಝಲ್ ಅನ್ನಿಸುವಂತಿದೆ.
ಒಂದೇ ಕುಟುಂಬದ ಇಬ್ಬರು ಬಲಿ
ಅಲ್ಲದೆ ಇತ್ತೀಚೆಗಷ್ಟೇ ಕೊಡಗಿನಲ್ಲಿ ಹುಲಿ ಪ್ರತ್ಯೇಕ ದಾಳಿಗೆ ಒಂದೇ ಕುಟುಂಬದ ಇಬ್ಬರು ಬಲಿಯಾಗಿದ್ದರು. ಕೇರಳದ ಹೊರವಲಯದಲ್ಲಿರುವ ಕೊಡಗಿನ ಪಲ್ಲೇರಿಯಲ್ಲಿ ಹುಲಿ ದಾಳಿಗೆ 75 ವರ್ಷದ ಕೃಷಿ ಕಾರ್ಮಿಕ ರಾಜು ಎಂಬುವವರು ಸಾವನ್ನಪ್ಪಿದ್ದರು. ಇದಕ್ಕೂ ಮೊದಲು ರಾಜು ಅವರ ಮೊಮ್ಮಗ ಚೇತನ್ (18) ಹುಲಿ ದಾಳಿಗೆ ಬಲಿಯಾಗಿದ್ದರು. ನಂತರ ಹುಲಿ ದಾಳಿಯನ್ನು ತಡೆಯಲು ಯತ್ನಿಸಿದ ರಾಜು ಅವರ ಮಗ ಮತ್ತು ಚೇತನ್ ಅವರ ತಂದೆ ಮಧು ಗಾಯಗೊಂಡಿದ್ದರು.
ರಾಜು ಮನೆಯಿಂದ ಹೊರಗೆ ಬಂದಾಗ ಹುಲಿ ದಾಳಿ ಮಾಡಿದೆ ಎಂದು ತಿಳಿದುಬಂದಿತ್ತು. ಈ ವೇಳೆ ತೀವ್ರವಾಗಿ ಗಾಯಗೊಂಡ ರಾಜು ಸ್ಥಳದಲ್ಲೇ ಮೃತಪಟ್ಟಿದ್ದರು. ಸ್ಥಳಕ್ಕೆ ನಾಗರಹೊಳೆ ಎಸಿಎಫ್ ಗೋಪಾಲ್ ಹಾಗೂ ಹುಲಿ ಕಾರ್ಯಾಚರಣೆ ತಂಡದ ಸಿಬ್ಬಂದಿ ಭೇಟಿ ನೀಡಿದ್ದರು. ನಂತರ ಕಾಫಿ ಎಸ್ಟೇಟ್‌ನಲ್ಲಿ ಕಾಣಿಸಿಕೊಂಡಿರುವ ಹುಲಿಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ಸಕಲ ಸಿದ್ಧತೆ ನಡೆಸಿದ್ದರು.
ಅಲ್ಲದೆ ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಭೇಟಿ ನೀಡಿದ್ದರು. ಹುಲಿ ದಾಳಿಯಿಂದ ನಿವಾಸಿಗಳಲ್ಲಿ ಭಯವೂ ಆವರಿಸಿತ್ತು. ಕಳೆದ ಐದು ವರ್ಷಗಳಿಂದ ಕೊಡಗಿನ ದಕ್ಷಿಣ ಭಾಗದಲ್ಲಿ ಮನುಷ್ಯ ಹಾಗೂ ಹುಲಿ ಸಂಘರ್ಷ ಹೆಚ್ಚಿದ್ದು, ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದರು. ಹುಲಿ ದಾಳಿಗೆ ಅರಣ್ಯ ಇಲಾಖೆ ಕಾರಣ ಎಂದು ಆರೋಪಿಸಿ ಸಮೀಪದ ಗ್ರಾಮಸ್ಥರು ಪ್ರತಿಭಟನೆಯನ್ನೂ ನಡೆಸಿದ್ದರು.












Click it and Unblock the Notifications