ಚಿಕ್ಕಮಗಳೂರು: ಹಿಜಾಬ್ ಆಯ್ತು, ಕೇಸರಿ ಆಯ್ತು; ಇದೀಗ ನೀಲಿ ಶಾಲು ಸರದಿ
ಚಿಕ್ಕಮಗಳೂರು, ಫೆಬ್ರವರಿ 7: ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಈಗ ರಾಜ್ಯದಾದ್ಯಂತ ವ್ಯಾಪಿಸಿದೆ. ಕರಾವಳಿ ಮತ್ತು ಮಲೆನಾಡಿನ ವಿದ್ಯಾರ್ಥಿಗಳ ಹಿಜಾಬ್- ಕೇಸರಿ ಶಾಲು ವಿವಾದ ರಾಜ್ಯದಲ್ಲಿ ಮಾತ್ರವಲ್ಲ ದೇಶಾದ್ಯಂತ ಸದ್ದು ಮಾಡುತ್ತಿದೆ.
ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನೇ ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ವಸ್ತ್ರ ಸಂಹಿತೆ ಆದೇಶದ ಹೊರತಾಗಿಯೂ ಕುಂದಾಪುರ, ಚಿಕ್ಕಮಗಳೂರು, ಶಿವಮೊಗ್ಗ, ವಿಜಯಪುರ ಜಿಲ್ಲೆಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿ ಬಂದಿದ್ದಾರೆ.
Recommended Video

ಕೇಸರಿ vs ನೀಲಿ ಶಾಲು
ಹಿಜಾಬ್ ಆಯ್ತು, ಕೇಸರಿ ಶಾಲು ಆಯ್ತು ಇದೀಗ ನೀಲಿ ಶಾಲು ಧರಿಸುವ ಸರದಿಯಾಗಿದೆ. ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ನೀಲಿ ಶಾಲು ಪ್ರತ್ಯಕ್ಷವಾಗಿದ್ದು, ಹಿಜಾಬ್ ತೆಗೆಸಬಾರದೆಂದು ನೀಲಿ ಶಾಲು ಧರಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಜೈ ಭೀಮ್ ಘೋಷಣೆ ಕೂಗುತ್ತಾ ದಲಿತ ಸಂಘಟನೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ, ಇದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿರುವ ವಿದ್ಯಾರ್ಥಿಗಳಿಂದ ಜೈ ಶ್ರೀರಾಮ್ ಘೋಷಣೆ ಮೊಳಗಿತು. ಇದರಿಂದ ಕಾಲೇಜಿನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಹಿಜಾಬ್- ಕೇಸರಿ ಶಾಲು ಧರಿಸಿದರೂ ಪ್ರಶ್ನೆ ಮಾಡದ ಕಾಲೇಜು ಆಡಳಿತ ಮಂಡಳಿ
ಚಿಕ್ಕಮಗಳೂರಿನಲ್ಲಿ ಹಿಜಾಬ್ ವಿರುದ್ಧ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳ ಪ್ರತಿಭಟನೆ ಜೋರಾಗಿದೆ. ಹಿಜಾಬ್ ಧರಿಸಿಕೊಂಡು ಬಂದರೂ ಕಾಲೇಜು ಆಡಳಿತ ಮಂಡಳಿ ಪ್ರಶ್ನೆ ಮಾಡದೇ ಮೌನ ವಹಿಸಿದೆ.
ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್‌ಗೆ ಪ್ರತಿಯಾಗಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಬಂದಿದ್ದಾರೆ.
ಸರ್ಕಾರದ ಸಮವಸ್ತ್ರ ಸಂಹಿತೆ ಆದೇಶವನ್ನು ನಮ್ಮ ಕಾಲೇಜಿನಲ್ಲಿ ಪಾಲಿಸುತ್ತಿಲ್ಲ, ಯೂನಿಫಾರ್ಮ್ ಹಾಕದೆ ಬಂದರೆ ವಾಪಸ್ ಕಳಿಸುತ್ತಿದ್ದಾರೆ. ಇಷ್ಟು ದಿನ ಇಲ್ಲದ ಕಾನೂನು, ಈಗ ನಮಗೆ ಹೇಳುತ್ತಿದ್ದಾರೆ. ಹಿಜಾಬ್ ತೆಗೆಯುವವರೆಗೂ ನಾವು ಕೇಸರಿ ಶಾಲು ತೆಗೆಯಲ್ಲ ಎಂದು ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಹಾಸನದಲ್ಲೂ ಹಿಜಾಬ್ vs ಕೇಸರಿ ಶಾಲು ಕಿಚ್ಚು
ಹಾಸನದ ಕಾಲೇಜುಗಳಿಗೂ ಹಿಜಾಬ್- ಕೇಸರಿ ಶಾಲು ವಿವಾದ ವ್ಯಾಪಿಸಿದೆ. ಹಾಸನದ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್- ಬುರ್ಕಾ ಧರಿಸಿ ಬಂದಿದ್ದಾರೆ. ಇನ್ನು ಇದಕ್ಕೆ ವಿರುದ್ಧವಾಗಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ.
ಹಿಜಾಬ್- ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಪ್ರಶ್ನಿಸಿಲ್ಲ. ಹಿಜಾಬ್- ಕೇಸರಿ ಶಾಲು ಹಾಕಿಕೊಂಡ ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ಕುಳಿತು ಪಾಠ ಕೇಳಿದ್ದರೆ, ವಿದ್ಯಾರ್ಥಿಗಳನ್ನು ಏನು ಕೇಳದೆ ಉಪನ್ಯಾಸಕರು ಭೋದನೆ ಮಾಡಿದರು.
ಪ್ರಾಂಶುಪಾಲರ ಮಾತಿಗೆ ಕಿವಿಗೊಡದ ವಿದ್ಯಾರ್ಥಿಗಳು
ಹಿಜಾಬ್ vs ಕೇಸರಿ ಶಾಲು ಬೆಳವಣಿಗೆ ಹಾಸನದಲ್ಲಿ ಕಿಚ್ಚು ಹೊತ್ತಿಸಿದ್ದು, ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಆಗಮಿಸಿದ್ದಾರೆ.
ವಿದ್ಯಾರ್ಥಿಗಳನ್ನು ಮನವೊಲಿಸಲು ಪ್ರಾಂಶುಪಾಲರು ಮುಂದಾದರೂ, ಪ್ರಾಂಶುಪಾಲರ ಮಾತಿಗೆ ವಿದ್ಯಾರ್ಥಿಗಳು ಕಿವಿಗೊಡಲಿಲ್ಲ. ಮೊದಲು ಹಿಜಾಬ್ ತೆಗೆಸಿ ನಂತರ ನಾವು ಶಾಲು ತೆಗೆಯುತ್ತೇವೆ ಎಂದು ಪಟ್ಟು ಹಿಡಿದರು.
ನಾವು ಮೊದಲಿನಿಂದಲೂ ಹಿಜಾಬ್- ಬುರ್ಕಾ ಧರಿಸಿ ಕಾಲೇಜಿಗೆ ಬಂದಿದ್ದೇವೆ. ಇದೀಗ ದಿಢೀರ್ ಅಂತಾ ಬುರ್ಕಾ ತೆಗೆಯಲು ಹೇಳುತ್ತಿದ್ದಾರೆ. ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯುವುದಿಲ್ಲ ಎಂದ ಮುಸ್ಲಿಂ ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ.
ಮುಸ್ಲಿಂ ಮಹಿಳೆಯರಿಂದ ಹಿಜಾಬ್ ಪ್ರತಿಭಟನೆ
ಹಾಸನದ ಹೇಮಾವತಿ ಪ್ರತಿಮೆ ಎದುರು ನೂರಾರು ಮುಸ್ಲಿಂ ಮಹಿಳೆಯರು, ಮಕ್ಕಳು, ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಹಿಜಾಬ್ ನಮ್ಮ ಹಕ್ಕು ಎಂದು ಘೋಷಣೆ ಕೂಗಿದರು.
ನಗರದ ಹೇಮಾವತಿ ಪ್ರತಿಮೆ ಎದುರು ನಂತರ ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಿಜಾಬ್-ಬುರ್ಕಾ ಧರಸಿ ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ಮಹಿಳಾ ಸಂಘಟನೆಗಳ ಒಕ್ಕೂಟ ಪ್ರತಿಭಟಿಸಿದರು.












Click it and Unblock the Notifications