'ಗೋ ಬ್ಯಾಕ್' ಎಂದವರಿಗೆ ಖಡಕ್ ಉತ್ತರ ಕೊಟ್ಟ ಶೋಭಾ ಕರಂದ್ಲಾಜೆ!
ಚಿಕ್ಕಮಗಳೂರು, ಫೆಬ್ರವರಿ 26; ಲೋಕಸಭೆ ಚುನಾವಣೆ ಎದುರಾಗುತ್ತಿರುವಾಗಲೇ 'ಗೋ ಬ್ಯಾಕ್ ಶೋಭಾ' ಎಂಬ ಅಭಿಯಾನ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಮತ್ತೆ ಆರಂಭವಾಗಿದೆ. ಸಂದಸೆ ಶೋಭಾ ಕರಂದ್ಲಾಜೆಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲವೇ?ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ತಮ್ಮ ವಿರುದ್ಧ ನಡೆಯುತ್ತಿರುವ 'ಗೋ ಬ್ಯಾಕ್ ಶೋಭಾ' ಅಭಿಯಾನಕ್ಕೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಖಡಕ್ ತಿರುಗೇಟು ನೀಡಿದ್ದಾರೆ.

ಸೋಮವಾರ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, "ಹಣದ ಮದ, ದರ್ಪ ಅಹಂಕಾರ, ಗಂಡಸು ಎಂಬ ಅಧಿಕಾರದ ದಾಹದಿಂದ ಹೀಗೆಲ್ಲಾ ಮಾಡಿಸುತ್ತಿದ್ದಾರೆ. ಯಾರು ಮಾಡಿಸಿದ್ದಾರೆ ಎಂದು ಗೊತ್ತು, ಇದಕ್ಕೆ ಹೈ ಕಮಾಂಡ್ ಉತ್ತರ ಕೊಡುತ್ತದೆ" ಎಂದು ಹೇಳಿದರು.
"ಹಣವಿದೆ ಎಂಬ ಅಹಂಕಾರ, ದರ್ಪ , ದುಡ್ಡಿನ ಮದ ಹೀಗೆಲ್ಲಾ ಮಾಡಿಸುತ್ತಿದ್ದು, ಗಂಡಸರಿಗೆ ನನ್ನ ಹತ್ತಿರವೇ ಎಲ್ಲಾ ಅಧಿಕಾರ ಇರಬೇಕು ಎಂಬುದು ಇರುತ್ತದೆ" ಎಂದು ಪರೋಕ್ಷವಾಗಿ ಟಿಕೆಟ್ ತಪ್ಪಿಸಲು ಪ್ರಯತ್ನಿಸುತ್ತಿರುವವರಿಗೆ ಖಡಕ್ ಉತ್ತರ ಕೊಟ್ಟರು.
"ಏನೇ ಷಡ್ಯಂತ್ರ ನಡೆಸಿದರೂ ಹಿರಿಯರು ನನ್ನ ಜೊತೆ ಇದ್ದಾರೆ, ಬಿಜೆಪಿ ಪಕ್ಷದ ಹೈ ಕಮಾಂಡ್‌ಗೆ ಗೋ ಬ್ಯಾಕ್ ನಡೆಸಿದವರ ಬಗ್ಗೆ ಸಂಪೂರ್ಣ ವರದಿ ತಲುಪಿದ್ದು, ಕೇಂದ್ರ ವರಿಷ್ಠರು ಎಲ್ಲದಕ್ಕೂ ಉತ್ತರ ಕೊಡುತ್ತಾರೆ" ಎಂದು ತಿಳಿಸಿದರು.
"ರಾಜಕೀಯ ಜೀವನದಲ್ಲಿ ಏಳು-ಬೀಳು ಇರುತ್ತದೆ ಇದರ ನಡುವೆ ಭ್ರಷ್ಟಾಚಾರ ಮಾಡದೇ ಕೆಲಸ ಮಾಡಿದ್ದೇನೆ. ಕೇಂದ್ರದ ಯೋಜನೆಗಳನ್ನು ಉಡುಪಿ-ಚಿಕ್ಕಮಗಳೂರು ಎರಡೂ ಜಿಲ್ಲೆಗೆ ತಂದಿದ್ದೇನೆ. ನಾನು ರಾಜ್ಯ ರಾಜಕಾರಣದಲ್ಲಿ ಇದ್ದಾಗಲೂ ಷಡ್ಯಂತ್ರ ಇತ್ತು" ಎಂದು ಶೋಭಾ ಕರಂದ್ಲಾಜೆ ಹೇಳಿದರು.
2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೂ 'ಗೋ ಬ್ಯಾಕ್ ಶೋಭಾ' ಅಭಿಯಾನ ನಡೆದಿತ್ತು. ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಬಾರದು ಎಂದು ಪತ್ರ ಚಳವಳಿ ಸಹ ನಡೆಸಲಾಗಿತ್ತು. ಆದರೆ ಪಕ್ಷ ಅವರಿಗೆ ಟಿಕೆಟ್ ನೀಡಿತ್ತು.
ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ 718,916 ಮತಗಳನ್ನು ಪಡೆದು, ಜೆಡಿಎಸ್‌ನ ಪ್ರಮೋದ್ ಮಧ್ವರಾಜ್ ಸೋಲಿಸಿ (369,317 ಮತ) ಸಂಸದರಾಗಿ ಆಯ್ಕೆಯಾಗಿದ್ದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರೂ ಆದರು.
ಈ ಬಾರಿ ಪ್ರಮೋದ್ ಮಧ್ವರಾಜ್ ಬಿಜೆಪಿಯಲ್ಲಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಚಿಕ್ಕಮಗಳೂರಿನಲ್ಲಿ ಸೋಲು ಕಂಡ ಬಿಜೆಪಿ ನಾಯಕ ಸಿ. ಟಿ. ರವಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಬೇಡಿಕೆಯೂ ಇದೆ. ಇದರ ನಡುವೆ 'ಗೋ ಬ್ಯಾಕ್ ಶೋಭಾ' ಅಭಿಯಾನ ಮತ್ತೆ ಸದ್ದು ಮಾಡುತ್ತಿದೆ.
ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಯಾದರೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಬಿಜೆಪಿಯ ಕೈಯಲ್ಲೇ ಇರಲಿದೆ. 2023ರ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿ ಒಂದೇ ಒಂದು ಸ್ಥಾನ ಗೆದ್ದಿಲ್ಲ. ಆದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.
ಮಂಡ್ಯದ ಟಿಕೆಟ್: ಮಂಡ್ಯ ಕ್ಷೇತ್ರದ ಟಿಕೆಟ್ ಬಗ್ಗೆಯೂ ಮಾತನಾಡಿದ ಶೋಭಾ ಕರಂದ್ಲಾಜೆ, "ಮಂಡ್ಯ ಲೋಕಸಭಾ ಟಿಕೆಟ್ ವಿಚಾರ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಜೆಡಿಎಸ್ ಜೊತೆ ಮೈತ್ರಿಯಾಗಿದೆ. ಮಂಡ್ಯ ಟಿಕೆಟ್ ಜೆಡಿಎಸ್ ಗೋ?, ಬಿಜೆಪಿಗೋ? ಗೊತ್ತಿಲ್ಲ. ನಮಗೆ ಬಂದರೆ ಯಾರು ಅಭ್ಯರ್ಥಿ ಆಗುತ್ತಾರೆ ಎನ್ನೋದು ಹೈಕಮಾಂಡ್ ತೀರ್ಮಾನ" ಎಂದರು.
"ನನಗೆ ವಿಶ್ವಾಸವಿದೆ ಹೈಕಮಾಂಡ್ ಒಳ್ಳೆಯ ನಿರ್ಧಾರವನ್ನೇ ಮಾಡುತ್ತದೆ. ಹೈಕಮಾಂಡ್ ಮಂಡ್ಯದ ದೃಷ್ಟಿಯಿಂದ ಒಳ್ಳೆಯ ನಿರ್ಧಾರ ಮಾಡಲಿದೆ. ಜೆಡಿಎಸ್ ನಮ್ಮೊಂದಿಗೆ ಒಕ್ಕೂಟದ ಭಾಗವಾಗಿದೆ" ಎಂದು ಹೇಳಿದರು.












Click it and Unblock the Notifications