ದತ್ತಪೀಠದಲ್ಲಿರುವ ಅನಗತ್ಯ ಘೋರಿಗಳ ಸ್ಥಳಾಂತರ: ಸಚಿವ ಸುನೀಲ್‌ಕುಮಾರ್
ಚಿಕ್ಕಮಗಳೂರು: "ದತ್ತಾತ್ರೇಯ ಪೀಠವೇ ಬೇರೆ, ನಾಗೇನಹಳ್ಳಿಯಲ್ಲಿರುವ ಬಾಬಾ ಬುಡನ್ ದರ್ಗಾ ಬೇರೆ ಎಂಬುದು ದಾಖಲೆಗಳಲ್ಲಿ ಮತ್ತೆ ಮತ್ತೆ ಸಾಬೀತಾಗಿದೆ. ಮುಸ್ಲಿಂ ಧರ್ಮದವರು ದತ್ತಪೀಠದಲ್ಲಿ ಅನಗತ್ಯವಾಗಿ ನಿರ್ಮಾಣ ಮಾಡಿರುವ ಘೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರ ಮಾಡಿ ಪೂಜಾ ಕೈಂಕರ್ಯಗಳನ್ನು ಮಾಡವ ಜೊತೆಗೆ ದರ್ಗಾವನ್ನು ಅಭಿವೃದ್ಧಿಪಡಿಸಲಿ. ದತ್ತಪೀಠದಲ್ಲಿ ಹಿಂದೂಗಳಿಗೆ ದತ್ತಪೀಠದಲ್ಲಿ ಮುಕ್ತವಾಗಿ ಅವಕಾಶ ಮಾಡಿಕೊಡಬೇಕು ಎಂದು ಸೂಚನೆ ಹಾಗೂ ವಿನಂತಿಯನ್ನು ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ಮಾಡುತ್ತಿದ್ದೇನೆ" ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದರು.
ಸೋಮವಾರ ತಾಲೂಕಿನ ಇನಾಂ ದತ್ತಾತ್ರೇಯ ಪೀಠಕ್ಕೆ ಭೇಟಿ ನೀಡಿ ದತ್ತಪಾದುಕೆ ದರ್ಶನದ ಬಳಿಕ ಮಾತನಾಡಿದ ಅವರು, ದತ್ತಪೀಠದ ಹೋರಾಟದ ಮೂಲಕ ಸಾರ್ವಜನಿಕ ಜೀವನದಲ್ಲಿ ನಾನು ರೂಪುಗೊಂಡಿದ್ದೇನೆ. ನನ್ನ ಬೆಳವಣಿಗೆಯಲ್ಲಿ ದೊಡ್ಡ ಪ್ರಮಾಣದಲ್ಲಿ ದತ್ತಪೀಠದ ಹೋರಾಟ ಬಹಳ ಪ್ರಮುಖವಾದ ಸಂಗತಿ. ಹೋರಾಟದ ಮೂಲಕ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡು ಅ ಮೂಲಕ ಇಂದು ಜನಪ್ರತಿನಿಧಿಯಾಗಿ, ಮಂತ್ರಿಯಾಗಿ ಬರುವ ಅವಕಾಶ ನನಗೆ ಸಿಕ್ಕಿದೆ ಬಹುಶ: ದತ್ತಾತ್ರೇಯರ ಕೃಪೆ ಹಾಗೂ ಈ ಹೋರಾಟದಲ್ಲಿ ಭಾಗಿಯಾದ ಎಲ್ಲ ಕಾರ್ಯಕರ್ತರ ಸಹಭಾಗಿತ್ವದಿಂದ ಇಂದು ಇಂತಹ ಜವಾಬ್ದಾರಿ ಸ್ಥಾನಕ್ಕೆ ಬಂದಿದ್ದೇನೆ ಎಂದರು.
ನನ್ನ ಜೀವನದ ಅತ್ಯಂತ ಯೋಗ ಇದಾಗಿದೆ. ನಾನು ಮಂತ್ರಿಯಾಗಿರುವಂತಹ ಸಂದರ್ಭದಲ್ಲಿ ನ್ಯಾಯಾಲಯ ದತ್ತಪೀಠ ವಿಚಾರದಲ್ಲಿ ಹಿಂದೂಗಳ ಭಾವನೆಗಳಿಗೆ ಪರವಾದ ತೀರ್ಪನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಭಕ್ತಿ ಭಾವುಕದಿಂದ ದತ್ತಾತ್ರೇಯರ ಪಾದುಕೆ ದರ್ಶನ ಪಡೆದು ಸಾರ್ವಜನಿಕ ಹಾಗೂ ಹಿಂದುತ್ವದ ಪರವಾದ ಕೆಲಸಗಳನ್ನು ಮಾಡಲು ಮತ್ತಷ್ಟು ಶಕ್ತಿ ನೀಡುವಂತೆ ಪ್ರಾರ್ಥನೆ ಮಾಡಿಕೊಂಡಿದ್ದೇನೆ ಎಂದು ಹೇಳಿದರು.

ಈ ಹಿಂದೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದತ್ತಪೀಠದ ಕುರಿತಂತೆ ಹಿಂದೂಗಳ ವಿರುದ್ಧವಾದ ನಿರ್ಣಯಗಳನ್ನು ಮಾಡಿತ್ತು. ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಸಹ ಹಿಂದುಗಳಿಗೆ ದತ್ತಪೀಠದಲ್ಲಿ ಪೂಜೆಗೆ ಅವಕಾಶ ಮಾಡಿಕೊಡಬಾರದು ಎಂಬ ದುರುದ್ದೇಶದಿಂದಒಂದು ಸಮಿತಿಯನ್ನು ರಚನೆ ಮಾಡಿ ಮುಜಾವರರನ್ನು ನೇಮಕ ಮಾಡಬೇಕು ಎಂಬ ನಿಲುವನ್ನು ಆ ಹೊತ್ತಿನ ಹಿಂದು ವಿರೋಧಿ ಸರ್ಕಾರ ತಗೆದುಕೊಂಡಿತ್ತು. ಇವತ್ತು ಆ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಾಲಯ ನಮ್ಮ ಪರವಾದ ತೀರ್ಪನ್ನು ನೀಡಿದ್ದು, ದಶಕಗಳ ಹೋರಾಟಕ್ಕೆ ನ್ಯಾಯಾಲಯವೂ ಮನ್ನಣೆ ನೀಡಿದಂತಾಗಿದ್ದು ಲಕ್ಷಾಂತರ ಭಕ್ತರಿಗೆ ಸಂತಸ ತಂದಿದೆ ಎಂದರು.
ನಮ್ಮ ಸರ್ಕಾರ ಹಿಂದುಗಳ ಭಾವನೆಗಳನ್ನು ಗೌರವಿಸುವ ಸರ್ಕಾರ ಆಗಾಗಿ ಮುಖ್ಯಮಂತ್ರಿಗಳ ಸೂಚನೆಯಂತೆ ಆದಷ್ಟು ಬೇಗ ಸಮಿತಿಯನ್ನು ರಚನೆ ಮಾಡಿ ನಮ್ಮ ಹೋರಾಟದ ಹಾದಿಯಲ್ಲಿನ ಹಿಂದೂ ಅರ್ಚಕರ ನೇಮಕ, ದತ್ತಾತ್ರೇಯರಿಗೆ ತ್ರಿಕಾಲ ಪೂಜೆಯಾಗಬೇಕು ಎಂಬ ಎಲ್ಲಾ ಸಂಗತಿಗಳಿಗೆ ಮನ್ನಣೆ ಕೊಡುವ ಕೆಲಸವನ್ನು ನ್ಯಾಯಾಲಯದ ನಿರ್ದೇಶನದಂತೆ ಸರ್ಕಾರ ಮಾಡುತ್ತದೆ ಎಂದರು.
ದತ್ತಪೀಠದಲ್ಲಿ ಪ್ರವಾಸೋದ್ಯಮ ಉತ್ತೇಜನ ಮಾಡಿ ಮೂಲಭೂತ ಸೌಲಭ್ಯ ಒದಗಿಸುವ ಕೆಲಸಗಳು ಈಗಾಗಲೇ ಪ್ರಾರಂಭಗೊಂಡಿದ್ದು ಮತ್ತಷ್ಟು ಅಭಿವೃದ್ಧಿಗೊಳಿಸಲಾಗುತ್ತದೆ ಎಂದು ಹೇಳಿದರು.












Click it and Unblock the Notifications