'ತುಕುಡೆ ಗ್ಯಾಂಗ್' ಸಂಬಂಧಿಕರಿಂದ ಭಾರತ್ ಬಂದ್ ಗೆ ಕರೆ: ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು, ಜ 7: ವಿವಿಧ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಶೋಭಾ, "ಕೆಲವರು ನಾಳೆ (ಜ 8) ಭಾರತ್ ಬಂದ್ ಗೆ ಕರೆ ನೀಡಿದ್ದಾರೆ. ಇವರೆಲ್ಲಾ, ತುಕುಡೆ ಗ್ಯಾಂಗಿನ ಸಂಬಂಧಿಕರು' ಎಂದು ಲೇವಡಿ ಮಾಡಿದ್ದಾರೆ.
"ಯಾವ ಕಾರಣಕ್ಕಾಗಿ ಬಂದ್ ಗೆ ಕರೆನೀಡಲಾಗಿದೆ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ದೇಶದ ಹಿತ ಕಾಪಾಡುವುದೇ ನಮ್ಮ ಗುರಿ" ಎಂದು ಹೇಳಿರುವ ಶೋಭಾ, "ಈ ಬಂದ್ ವಿಫಲಗೊಳ್ಳಲಿದೆ" ಎಂದು ಹೇಳಿದರು.

"ಪೌರತ್ವ ತಿದ್ದುಪಡಿ ವಿಚಾರದಲ್ಲಿ ನಾವು ಅಭಿಯಾನ ನಡೆಸಿ, ಜನರಿಗೆ ಸತ್ಯಾಂಶವನ್ನು ತಿಳಿಸುತ್ತಿದ್ದೇವೆ. ಭಾರತ್ ಬಂದ್ ಗೆ ಕರೆ ನೀಡಿದವರನ್ನು ತಕ್ಷಣ ಬಂಧಿಸಬೇಕೆಂದು" ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
"ಈಗಾಗಲೇ ಸಾಕಷ್ಟು ಗೊಂದಲಗಳಾಗಿವೆ, ಪೊಲೀಸರು ಯಾವುದೇ ಕಾರಣಕ್ಕೂ ಬಂದ್ ಗೆ ಸಹಕಾರ ನೀಡಬಾರದು. ಭಾರತ್ ಬಂದ್ ಗು ಭಾರತಕ್ಕೂ ಸಂಬಂಧವಿಲ್ಲ. ಭಾರತ ವಿರೋಧಿಗಳು ಕರೆ ನೀಡಿರುವ ಬಂದ್ ಇದು" ಎಂದು ಶೋಭಾ, ಪ್ರತಿಕ್ರಿಯಿಸಿದ್ದಾರೆ.
ಇದಕ್ಕೂ ಮೊದಲು, ಈರುಳ್ಳಿ, ಅಡುಗೆ ಅನಿಲದ ಬೆಲೆ ಏರಿಕೆ ಖಂಡಿಸಿ ಇಂದು ಚಿಕ್ಕಮಗಳೂರಿನ ಜಿಲ್ಲಾ ಪಂಚಾಯತ್ ಎದುರು ಮಹಿಳಾ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಕೈಗೊಂಡಿದ್ದರು. ಈ ಸಂದರ್ಭ ಸಂಸದೆ ಶೋಭಾ ಕರಂದ್ಲಾಜೆಗೆ ಸದಸ್ಯೆಯೊಬ್ಬರು ಈರುಳ್ಳಿ ಹಾರ ಹಾಕಲು ಮುಂದಾಗಿದ್ದರು. ಆಗ, ಶೋಭಾ ಅವರನ್ನು ತಳ್ಳಿ ಮುಂದಕ್ಕೆ ಹೋದ ಘಟನೆ ನಡೆದಿದೆ.












Click it and Unblock the Notifications