Rahul Gandhi: ಬಿಜೆಪಿ ಕಳ್ಳ ಸರ್ಕಾರ: ಚಿಕ್ಕಮಗಳೂರಿನಲ್ಲಿ ರಾಹುಲ್ ಗಾಂಧಿ ಆರೋಪ
ಚಿಕ್ಕಮಗಳೂರು, ಮೇ, 02: ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯ ನಾಯಕರ ಪರ ರಾಷ್ಟ್ರೀಯ ನಾಯಕರು ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದಾರೆ. ಅದರಲ್ಲೂ ಬಿಜೆಪಿ, ಕಾಂಗ್ರೆಸ್ ನಡುವೆ ವಾಕ್ಸಮರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಅದೇ ರೀತಿ ಬಿಜೆಪಿ ಕಳ್ಳ ಸರ್ಕಾರವಾಗಿದೆ ಎಂದು ರಾಹುಲ್ ಗಾಂಧಿ ಚಿಕ್ಕಮಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಪ್ರಧಾನಿ ಮೋದಿ ಅವರ ವಿರುದ್ಧವೂ ಹರಿಹಾಯ್ದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರೇ, ನೀವು ಹೋದಲ್ಲೆಲ್ಲಾ ಬರೀ ನಿಮ್ಮ ಬಗ್ಗೆಯೇ ಹೇಳುತ್ತೀರಾ? ನಿಮ್ಮ ಬಗ್ಗೆ ನೀವೇ ಹೇಳುವುದನ್ನು ಬಿಟ್ಟು ಜನರ ಬಗ್ಗೆ ಮಾತನಾಡಿ. ಹಾಗೆಯೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಜನರಿಗೆ ಏನು ಕೊಡುತ್ತೀರಾ ಅದನ್ನ ಹೇಳಿ ಎಂದು ರಾಹುಲ್ ಗಾಂಧಿ ಚಿಕ್ಕಮಗಳೂರಿನಲ್ಲಿ ವಾಗ್ದಾಳಿ ನಡೆಸಿದರು.

ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್ ವೃತ್ತವರೆಗೂ ಬೃಹತ್ ರೋಡ್ ಶೋ ನಡೆಸಿ ತೆರೆದ ವಾಹನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿಯವರಿಗೆ 40 ಅಂದರೆ ತುಂಬಾ ಪ್ರೀತಿ. ಆದ್ದರಿಂದ ಅವರಿಗೆ ಈ ಬಾರಿ 40 ಸ್ಥಾನಗಳನ್ನಷ್ಟೇ ಕೊಡಿ ಎಂದು ಮತದಾರರಿಗೆ ಮನವಿ ಮಾಡಿದರು.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಪ್ರಚಾರ ಮಾಡಿದ ರಾಹುಲ್ ಗಾಂಧಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಇದೊಂದು ಕಳ್ಳ ಸರ್ಕಾರವಾಗಿದೆ. ಈ ಸರ್ಕಾರ ಜನರ ಆಶೀರ್ವಾದದಿಂದ ಆದ ಸರ್ಕಾರವಲ್ಲ. ಕಳ್ಳತನ ಮಾಡಿದ ಸರ್ಕಾರ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರದಿಂದ ಮಾಡಿದ ಹಣದಿಂದ ಬಿಜೆಪಿ ಸರ್ಕಾರ ರಚನೆ ಮಾಡಿದ್ದಾರೆ. ಈಗ ರಾಜ್ಯದಲ್ಲಿ ಯಾರನ್ನೇ ಕೇಳಿ 40 ಅಂದರೆ ಏನೆಂದು ಹೇಳುತ್ತಾರೆ. ಈ ಬಾರಿಯೂ ಬಿಜೆಪಿಯವರು ಮತ್ತದೇ ಕಳ್ಳತನ ಸರ್ಕಾರ ಮಾಡಲು ಪ್ರಯತ್ನ ಮಾಡುತ್ತಾರೆ. ಹಾಗಾಗಿ, ಅವರಿಗೆ 40 ಅಂದರೆ ತುಂಬಾ ಪ್ರೀತಿ. ಅವರಿಗೆ 40 ಸ್ಥಾನ ನೀಡಿ ಕಾಂಗ್ರೆಸ್‌ಗೆ 150 ಸ್ಥಾನ ನೀಡಿ ಎಂದರು.
ನರೇಂದ್ರ ಮೋದಿಯವರು ಚುನಾವಣೆ ಸಮಯದಲ್ಲಿ ಮಾತ್ರ ರಾಜ್ಯಕ್ಕೆ ಭೇಟಿ ಕೊಡುತ್ತಾರೆ. ಆದರೆ, ಭ್ರಷ್ಟಾಚಾರದ ಬಗ್ಗೆ ಮಾತನಾಡಲ್ಲ. ಮೋದಿಯವರು ಕಂಟ್ರ್ಯಾಕ್ಟರ್ ಸಂಘದ ಅಧ್ಯಕ್ಷ ಕೆಂಪಣ್ಣನವರ ಪತ್ರಕ್ಕೆ ಉತ್ತರ ಕೊಡಲಿಲ್ಲಿ ಯಾಕೆ? ಎಂದು ಪ್ರಶ್ನಿಸಿದರು. ಅಲ್ಲದೆ ಭಾಷಣದ ವೇಳೆಯೂ ನಾವು ನಮ್ಮ ನಾಯಕರ ಎಲ್ಲರ ಹೆಸರು ಹೇಳುತ್ತೇವೆ. ಆದರೆ, ಮೋದಿಯವರು ಯಾರ ಹೆಸರನ್ನೂ ಹೇಳುವುದಿಲ್ಲ. ಬೊಮ್ಮಾಯಿ, ಬಿ.ಎಸ್.ವೈ ಸೇರಿದಂತೆ ಯಾರ ಹೆಸರನ್ನೂ ಹೇಳುವುದಿಲ್ಲ ಎಂದರು.
ಇನ್ನು ಚಿಕ್ಕಮಗಳೂರು ಅಜ್ಜಿ ಇಂದಿರಾ ಗಾಂಧಿ ಸ್ಪರ್ಧೆ ಮಾಡಿದಾಗ ಹೆಸರು ಕೇಳಿದ್ದೇ, ಅಜ್ಜಿ ಹೇಳಿದರು ಇದು ಸುಂದರ ಸ್ಥಳ ಅಂತಾ. ಅಮೇಲೆ ಗೊತ್ತಾಯಿತು ಚಿಕ್ಕಮಗಳೂರಿಗಿಂತ ಇಲ್ಲಿನ ಜನ ಒಳ್ಳೆಯವರು ಅಂತಾ. ಈ ಸುಡು ಬಿಸಿಲಿನಲ್ಲಿಯೂ ಇಷ್ಟೊಂದು ಜನ ಸೇರಿರುವುದು ತುಂಬಾ ಸಂತೋಷ ಆಯಿತು ಎಂದರು.
ಹಿಂದೂ ಸಂಘಟನೆಗಳ ಆಕ್ರೋಶ
ಮತ್ತೊಂದೆಡೆ ಚಿಕ್ಕಮಗಳೂರಿನ ಜಿಲ್ಲೆಯ ಹಲವು ಮನೆಗಳ ಮುಂದೆ ಕಾಂಗ್ರೆಸಿಗರು ಮತ ಕೇಳಲು ಬಂದರೆ ಅವರ ಮೇಲೆ "ನಾಯಿ ಬಿಡಲಾಗುವುದು ಎಚ್ಚರ" ಎಂಬ ಬೋರ್ಡ್ ಹಾಕಿ ಕಾಂಗ್ರೆಸ್‌ನ ಪ್ರಣಾಳಿಕೆಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂದೂ ಸಂಘಟನೆ, ಬಜರಂಗದಳವನ್ನು ನಿಷೇಧ ಮಾಡುತ್ತೇವೆ ಎನ್ನುವ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ಕೆಂಡವಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಗುಡ್ಡಟ್ಟಿ ಎಂಬ ಗ್ರಾಮದಲ್ಲಿ ಅರುಣ್ ಎಂಬ ಬಜರಂಗದಳ ಕಾರ್ಯಕರ್ತ ತಮ್ಮ ಮನೆ ಮುಂದೆ ಬೋರ್ಡ್ ಹಾಕಿ ಮತ ಕೇಳಲು ಬರುವ ಕಾಂಗ್ರೆಸಿಗರಿಗೆ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications