ಚಿಕ್ಕಮಗಳೂರು; ಬರದಿಂದ ಬೆಳೆ ಹಾನಿ, ಆರ್. ಅಶೋಕ ಪರಿಶೀಲನೆ
ಚಿಕ್ಕಮಗಳೂರು, ಡಿಸೆಂಬರ್ 01; ಕರ್ನಾಟಕದ ವಿರೋಧ ಪಕ್ಷದ ನಾಯಕ ಆರ್. ಅಶೋಕ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚಿಕ್ಕಪಟ್ಟಣಗೆರೆ ಗ್ರಾಮದಲ್ಲಿ ಬರದಿಂದ ಆಗಿರುವ ಬೆಳೆ ಹಾನಿಯ ಸಮೀಕ್ಷೆ ನಡೆಸಿದರು.
ರಾಗಿ ಮತ್ತು ಜೋಳದ ಹೊಲಗಳಿಗೆ ಭೇಟಿ ನೀಡಿದ ಅವರು ಸ್ಥಳದಲ್ಲಿಯೇ ರೈತರ ಸಮಸ್ಯೆಗಳನ್ನು ಆಲಿಸಿದರು. ರೈತರು ತಮ್ಮ ಹೊಲಗಳಲ್ಲಿ ಸರ್ಕಾರಿ ಅಧಿಕಾರಿಗಳು ಬಂದು ಸರ್ವೇ ನಡೆಸದೆ ಅನರ್ಹರಿಗೆ ಪರಿಹಾರ ಸಿಗುವಂತೆ ವರದಿ ನೀಡಿರುವುದಾಗಿ ರೈತರು ಆರೋಪಿಸಿದರು.

ಬಳಿಕ ಮಾತನಾಡಿದ ಆರ್. ಅಶೋಕ, "ಬರ ಪರಿಸ್ಥಿತಿ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಪಕ್ಷವು ಕಳೆದ ಚುನಾವಣೆಯಲ್ಲಿ ಹಲವು ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿತು. ಈಗ ಅದನ್ನು ಈಡೇರಿಸುವ ಭರದಲ್ಲಿ ರೈತರನ್ನು ಮತ್ತು ಅಭಿವೃದ್ದಿಯನ್ನು ಕಡೆಗಣಿಸಿದೆ" ಎಂದು ಟೀಕಿಸಿದರು.
"ರಾಜ್ಯಕ್ಕೆ ಬರದ ಛಾಯೆ ಆವರಿಸಿ ಎರಡು ತಿಂಗಳು ಕಳೆದಿದೆ. ಆಗ ಮೌನಕ್ಕೆ ಜಾರಿದ್ದ ಸರ್ಕಾರ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಬರ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಆದೇಶಿಸಿತು. ಆದರೆ ಅಧಿಕಾರಿಗಳು ನಡೆಸಿರುವ ಬರ ಸಮೀಕ್ಷೆ ಹಲವು ಲೋಪ ದೋಷಗಳಿಂದ ಕೂಡಿವೆ" ಎಂದು ದೂರಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಬರ ಸಮೀಕ್ಷೆ ವೇಳೆ ಆಗಿರುವ ಎಡವಟ್ಟುಗಳನ್ನು ಉದಾಹರಣೆ ಸಹಿತಿ ವಿವರಿಸಿದ ಆರ್. ಅಶೋಕ, "ರೈತರು ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಗಳನ್ನು ಕಳೆದುಕೊಂಡು ಹೈರಾಣಾಗಿರುವ ಚಿತ್ರ ರಾಜ್ಯದಾದ್ಯಂತ ಕಂಡುಬರುತ್ತಿದೆ, ತಾವು ಕಂದಾಯ ಸಚಿವರಾಗಿದ್ದ ಸಂದರ್ಭ ಇದೇ ಸ್ಥಿತಿ ಇತ್ತು. ಅಂದು ರಾಜ್ಯದ ರೈತರ ಹಿತ ಗಮನದಲ್ಲಿಟ್ಟುಕೊಂಡು ಕೇಂದ್ರದ ನೆರವಿಗೆ ಕಾಯದೆ ರಾಜ್ಯ ಸರ್ಕಾರದಿಂಲೇ ಪರಿಹಾರ ಮಂಜೂರು ಮಾಡಲಾಗಿತ್ತು" ಎಂದು ನೆನಪಿಸಿಕೊಂಡರು.
ಸಚಿವ ಕೆ. ಜೆ. ಜಾರ್ಜ್ ಪರಿಶೀಲನೆ; ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ. ಜೆ. ಜಾರ್ಜ್ ಜಿಲ್ಲೆಗೆ ಭೇಟಿ ನೀಡಿ ಬರ ಪರಿಸ್ಥಿತಿ ನಿರ್ವಹಣೆ ಕಾಮಗಾರಿಗಳ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. "ತೀವ್ರ ಬರಗಾಲದಿಂದ ಅಪಾರ ಬೆಳೆ ನಷ್ಟವಾಗಿದ್ದು ರೈತರು ಕಂಗಾಲಾಗಿದ್ದಾರೆ, ಬರಗಾಲ ನಿರ್ವಹಣೆ ಸಮರ್ಪಕವಾಗಿರಬೇಕೆಂಬ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕೆಂದು" ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಚಿವರು ಮಳೆ ಕೊರತೆಯಿಂದ ಬೆಳೆ ಹಾನಿಯಾದ ಕಡೂರು ತಾಲ್ಲೂಕಿನ ಬ್ರಹ್ಮ ಸಮುದ್ರ ಹಾಗೂ ರಾಮನಹಳ್ಳಿ ಗ್ರಾಮದ ರೈತರಾದ ಪ್ರಕಾಶ್ ಮತ್ತು ಚಿಕ್ಕಣ್ಣ ಇವರ ರಾಗಿ ಹಾಗೂ ಜೋಳ ಬೆಳೆಗಳನ್ನು ಜಮೀನುಗಳಿಗೆ ತೆರಳಿ ಬುಧವಾರ ವೀಕ್ಷಣೆ ಮಾಡಿದ್ದರು.
ಬಳಿಕ ಮಾತನಾಡಿದ್ದ ಕೆ. ಜೆ. ಜಾರ್ಜ್, "ರಾಜ್ಯ ಸರ್ಕಾರ ರೈತರಿಗೆ ಸಾಧ್ಯವಾದ ಎಲ್ಲ ರೀತಿಯ ನೆರವು ನೀಡಲು ಸಿದ್ದತೆ ಮಾಡಿಕೊಳ್ಳುತ್ತಿದೆ. ಬರದಿಂದ ನಷ್ಟ ಅನುಭವಿಸುತ್ತಿರುವ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುವ ಸೌಲಭ್ಯ ಕೊಡಿಸಲು ಪ್ರಯತ್ನ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಬರದ ವಾಸ್ತವ ಚಿತ್ರಣ ಅರಿಯಲು ರೈತರ ಜಮೀನುಗಳಿಗೆ ಭೇಟಿ ನೀಡಲಾಗುತ್ತಿದೆ" ಎಂದು ಹೇಳಿದ್ದರು.
"ಜಿಲ್ಲೆಯ 5 ತಾಲ್ಲೂಕುಗಳಲ್ಲಿ 4 ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ. ಉಳಿದ ಕೆಲ ಹೋಬಳಿಯನ್ನು ಪಟ್ಟಿಗೆ ಸೇರಿಸಲಾಗುವುದು. ಕೇಂದ್ರಕ್ಕೆ ರಾಜ್ಯ ಸರ್ಕಾರ ಪಾವತಿಸಿರುವ 4.5 ಲಕ್ಷ ಕೋಟಿ ರೂ. ಎನ್‌ಡಿಆರ್‌ಎಫ್ ನಿಧಿಯಲ್ಲಿ ಕೇವಲ 35-40 ಸಾವಿರ ಕೋಟಿ ರೂ. ಮಾತ್ರ ನೀಡಲಾಗುತ್ತಿದೆ" ಎಂದು ಸಚಿವರು ತಿಳಿಸಿದ್ದರು.












Click it and Unblock the Notifications