ಚುನಾವಣಾ ಪ್ರಚಾರಕ್ಕೂ ಮೊದಲು ಶೃಂಗೇರಿ ಶಾರದಾಂಬೆ ದರ್ಶನ ಪಡೆದ ಪ್ರಿಯಾಂಕಾ ಗಾಂಧಿ
ಚಿಕ್ಕಮಗಳೂರು, ಏಪ್ರಿಲ್, 26: ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪರ ಭರ್ಜರಿ ಪ್ರಚಾರ ನಡೆಸುತ್ತಿರುವ ಪ್ರಿಯಾಂಕಾ ಗಾಂಧಿ ಇಂದು(ಏಪ್ರಿಲ್ 26) ರಂದು ಕಾಫಿನಾಡು ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ. ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸುವ ಮೊದಲು ಜಿಲ್ಲೆಯ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.
ಶಕ್ತಿ ಪೀಠಗಳಲ್ಲಿ ಒಂದಾದ ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ದೇವಸ್ಥಾನ ಶೃಂಗೇರಿ ಶಾರದಾಂಬಾ ದೇವಸ್ಥಾನಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭೇಟಿ ನೀಡಿದ್ದಾರೆ. ಶಾರದಾಂಬೆಯ ದರ್ಶನ ಪಡೆದ ಪ್ರಿಯಾಂಕಾ ಗಾಂಧಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಗಾಂಧಿ ಕುಟುಂಬ ಶೃಂಗೇರಿ ಶಾರದಾಂಬಾ ದೇವಸ್ಥಾನದ ಮೇಲೆ ವಿಶೇಷ ನಂಬಿಕೆ ಹೊಂದಿದ್ದು, ಇಂದಿರಾ ಗಾಂಧಿ, ರಾಹುಲ್ ಗಾಂಧಿ ಕೂಡ ದೇವಾಲಯಕ್ಕೆ ಭೇಟಿ ನೀಡಿದ್ದರು. 1978ರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ಇಂದಿರಾ ಗಾಂಧಿ ಶೃಂಗೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.
2018ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕರ್ನಾಟಕಕ್ಕೇ ಭೇಟಿ ನೀಡಿದ್ದ ರಾಹುಲ್ ಗಾಂಧಿ ಶೃಂಗೇರಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದರು. ಅದರಂತೆ ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಪ್ರಿಯಾಂಕಾ ಗಾಂಧಿ ಶೃಂಗೇರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದೇವಸ್ಥಾನ ಭೇಟಿ ಬಳಿಕ ಪ್ರಿಯಾಂಕಾ ಗಾಂಧಿ ನರಸಿಂಹ ವನದಲ್ಲಿರುವ ಗುರುಗಳ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಶೃಂಗೇರಿ ಬಳಿಕ ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಭೇಟಿ ನೀಡಲಿರುವ ಪ್ರಿಯಾಂಕ ಗಾಂಧಿ ಬಳಿಕ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡರ ಪರ ಮತಯಾಚನೆ ನಡೆಸಲಿದ್ದಾರೆ.
ಇನ್ನು ಕೆಲವು ದಿನಗಳ ಹಿಂದಷ್ಟೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಹಾಗೂ ತಮ್ಮ ಗೆಲುವು ಸಿಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಚಂಡಿಕಾ ಯಾಗ ನಡೆಸಿದ್ದರು.
ಬಾಳೆಹೊನ್ನೂರು ಮಠಕ್ಕೆ ಭೇಟಿ ನೀಡಿದ ಪ್ರಿಯಾಂಕಾ ಗಾಂಧಿ
ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದ ಪ್ರಿಯಾಂಕಾ ಗಾಂಧಿ ಬಾಳೆಹೊನ್ನೂರು ಮಠಕ್ಕೆ ಭೇಟಿ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಮಠಕ್ಕೆ ಭೇಟಿ ನೀಡಿದ ಅವರು ಮಠದ ಆವರಣದಲ್ಲಿರುವ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವೀರಭದ್ರೇಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ. ಗುರುಗಳು ಮಠದಲ್ಲಿ ಇರದ ಕಾರಣ ಶ್ರೀ ಆಶೀರ್ವಾದ ಪಡೆಯಲು ಸಾಧ್ಯ ವಾಗಲಿಲ್ಲ. ಬಳಿಕ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.












Click it and Unblock the Notifications