ರಾಷ್ಟ್ರಪತಿ ಭೇಟಿ ಹಿನ್ನೆಲೆ: ಅ.8ರಂದು ಶೃಂಗೇರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧ
ಚಿಕ್ಕಮಗಳೂರು, ಅಕ್ಟೋಬರ್ 6: ಚಿಕ್ಕಮಗಳೂರು ಜಿಲ್ಲೆಯ ಧಾರ್ಮಿಕ ಕ್ಷೇತ್ರ ಶೃಂಗೇರಿ ಶಾರದಾ ಪೀಠಕ್ಕೆ ಅಕ್ಟೋಬರ್ 8ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ ನೀಡಲಿರುವ ಕಾರಣ ಶುಕ್ರವಾರದಂದು ಶೃಂಗೇರಿಯ ಶಾರದಾಂಬೆ ದೇಗುಲಕ್ಕೆ ಭಕ್ತರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಅಕ್ಟೋಬರ್ 8ರ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಶೃಂಗೇರಿ ಮಠದಲ್ಲಿ ರಾಷ್ಟ್ರಪತಿಗಳ ಕಾರ್ಯಕ್ರಮ ನಡೆಯಲಿದೆ. ಶಾರದಾಂಬೆ ದರ್ಶನದ ಜತೆಗೆ ಹಿರಿಯ ಹಾಗೂ ಕಿರಿಯ ಶ್ರೀಗಳನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ ಮಾಡಲಿದ್ದಾರೆ.
ಶೃಂಗೇರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ ಹಿನ್ನೆಲೆಯಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಕೆಲವು ಮರಗಳನ್ನು ಕಡಿಯಲಾಗಿದೆ. ಹೆಲಿಪ್ಯಾಡ್ ನಿರ್ಮಿಸಲು ಮರಗಳನ್ನು ಕಡಿಯುತ್ತಿರುವುದಕ್ಕೆ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 8ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶೃಂಗೇರಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಶೃಂಗೇರಿ ಶಾರದಾಂಬೆ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಕೆಲವು ನಿರ್ಬಂಧ ಹೇರಲಾಗಿದೆ. ರಾಷ್ಟ್ರಪತಿಗಳ ಭದ್ರತಾ ಪಡೆ ಸಿಬ್ಬಂದಿ ಹೆಲಿಕಾಪ್ಟರ್ ಪ್ರಾಯೋಗಿಕ ಹಾರಾಟ ನಡೆಸಿದರು.
ಬುಧವಾರದಿಂದ 4 ದಿನಗಳ ಕಾಲ ರಾಷ್ಟ್ರಪತಿ ರಾಮನಾಥ ಕೋವಿಂದ್ ಕರ್ನಾಟಕ ಪ್ರವಾಸದಲ್ಲಿ ಇರಲಿದ್ದಾರೆ. ಭಾರತೀಯ ವಾಯುಸೇನೆಯ ವಿಶೇಷ ವಿಮಾನದಲ್ಲಿ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಿಸಿದ್ದಾರೆ. ಕರ್ನಾಟಕ ಪ್ರವಾಸ ಮುಗಿಸಿ ಅ. 9ರಂದು ರಾಷ್ಟ್ರಪತಿಗಳು ದೆಹಲಿಗೆ ವಾಪಾಸ್ ಹೋಗಲಿದ್ದಾರೆ.

ನಾಲ್ಕು ದಿನಗಳ ರಾಜ್ಯ ಪ್ರವಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಮೈಸೂರು, ಚಾಮರಾಜನಗರ ಜಿಲ್ಲಾ ಪ್ರವಾಸ ಮಾಡಲಿದ್ದಾರೆ. ಅ. 7ರಂದು ಸಂಜೆ ಮಂಗಳೂರಿಗೆ ತೆರಳಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅ. 8ರಂದು ಚಿಕ್ಕಮಗಳೂರಿನ ಶೃಂಗೇರಿ ಶಾರದಾಂಬ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅ. 9ರಂದು ಮಂಗಳೂರು ವಿಮಾನ ನಿಲ್ದಾಣದ ಮೂಲಕ ರಾಮನಾಥ್ ಕೋವಿಂದ್ ದೆಹಲಿಗೆ ತೆರಳಲಿದ್ದಾರೆ.
ಅಕ್ಟೋಬರ್ 7ರಂದು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಲಿದ್ದು, ಬಳಿಕ ಅಂದು ಚಾಮರಾಜನಗರದ ಸರ್ಕಾರಿ ಮೆಡಿಕಲ್ ಕಾಲೇಜು ಉದ್ಘಾಟನೆ ಮಾಡಲಿದ್ದಾರೆ.
ನಂತರ ಅ. 8ರಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಗೆ ಭೇಟಿ ನೀಡಲಿರುವ ರಾಷ್ಟ್ರಪತಿಗಳು ಅದಕ್ಕಾಗಿ ಮಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅಕ್ಟೋಬರ್ 7 ಮತ್ತು 8ರಂದು ರಾಮನಾಥ್ ಕೋವಿಂದ್ ಮಂಗಳೂರಿನ ಸರ್ಕ್ಯುಟ್ ಹೌಸ್‌ನಲ್ಲಿ ಉಳಿದುಕೊಳ್ಳಲಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ರಾಷ್ಟ್ರಪತಿಗಳು ಮಂಗಳೂರಿನ ಸರ್ಕ್ಯುಟ್ ಹೌಸ್‌ಗೆ ಆಗಮಿಸಲಿದ್ದಾರೆ.

ರಾಮನಾಥ ಕೋವಿಂದ್ ಶೃಂಗೇರಿ ಶಾರದಾ ಪೀಠಕ್ಕೆ ಅ. 8ರಂದು ಆಗಮಿಸುವ ಹಿನ್ನೆಲೆಯಲ್ಲಿ ಮೂರು ಹೆಲಿಕಾಪ್ಟರ್ ಇಳಿಯುವುದಕ್ಕಾಗಿ ಹೆಲಿಪ್ಯಾಡ್‌ಗಳ ನಿರ್ಮಾಣ ಮಾಡಲಾಗಿದೆ. ಗಾಂಧಿ ಮೈದಾನದಲ್ಲಿದ್ದ ಅಂಗಡಿ ಮುಂಗಟ್ಟುಗಳು, ಹೋಟೆಲ್, ರಸ್ತೆ ಬದಿ ವ್ಯಾಪಾರದ 25ಕ್ಕೂ ಹೆಚ್ಚು ಅಂಗಡಿಗಳ ತೆರವು ಮಾಡಲಾಗಿದೆ.












Click it and Unblock the Notifications