ಚಿಕ್ಕಮಗಳೂರು: ಗಾಳಿ ಮೂಲಕ ಗುಡಿ ಸೇರುವ ದೇವಿರಮ್ಮ: ಕೌತುಕ ಕಣ್ತುಂಬಿಕೊಂಡ ಭಕ್ತ ವರ್ಗ
ಚಿಕ್ಕಮಗಳೂರು, ನವೆಂಬರ್ 14: ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಆಚರಣೆಯಂತೆ ಈ ಬಾರಿಯೂ ಗರ್ಭಗುಡಿಯ ಬಾಗಿಲಲ್ಲಿ ಹಾಕಿದ ಪರದೇ ತಾನಾಗಿಯೇ ತೆರದುಕೊಳ್ಳುವ ದೇವಿರಮ್ಮ ಗರ್ಭಗುಡಿ ಸೇರಿದ್ದಾಳೆ.
ನಾಡಿನೆಲ್ಲೆಡೆ ಬೆಳಕಿನ ಹಬ್ಬದ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜನತೆಗೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಬಿಂಡಿಗ ದೇವಿರಮ್ಮಳ ಪವಾಡ ನೋಡುವ ಕೌತುಕ. ದೀಪಾವಳಿಯ ಮೂರು ದಿನಗಳ ಕಾಲ ಬಿಂಡಿಗದಲ್ಲಿ ದೇವಿರಮ್ಮಳ ಜಾತ್ರಾ ಮಹೋತ್ಸವ ನಡೆಯುತ್ತಿದೆ.

ಭಾನುವಾರದಿಂದಲೇ ಜಾತ್ರೆ ಆರಂಭವಾಗಿದ್ದು, ಬೆಟ್ಟದ ಮೇಲೆ 50 ಸಾವಿರ ಭಕ್ತರು ಬೆಟ್ಟವನ್ನೇರಿ ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿರಮ್ಮ ದರ್ಶನ ಪಡೆದು ಪುನೀತರಾದರು. ಬೆಟ್ಟದ ಮೇಲೆ ಪೂಜೆ ನಡೆದಿದ್ದರೆ ಸೋಮವಾರ ಮಲ್ಲೇನಹಳ್ಳಿಯಲ್ಲಿರುವ ದೇವಸ್ಥಾನದಲ್ಲಿ ಮುಂಜಾನೆಯಿಂದ ಆರಂಭವಾದ ಧಾರ್ಮಿಕ ಪೂಜಾವಿಧಿವಿಧಾನಗಳು ಎಂದಿನಂತೆ ನಡೆಯಿತು.
ಸೋಮವಾರ ನಡೆದ ಕೌತುಕವನ್ನು ನೋಡಲು ಮುಂಜಾನಯೇ ದೇವಾಲಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದರು. ಮೊದಲನೇ ದಿನ ಬೆಟ್ಟದಲ್ಲಿ ದರ್ಶನ ನೀಡುವ ದೇವಿ, ಅಮಾವಾಸೆಯ ದಿನವಾದ ಇಂದು ಗಾಳಿರೂಪದಲ್ಲಿ ಗ್ರಾಮದ ಗುಡಿಗೆ ಪ್ರವೇಶಿಸುತ್ತಾಳೆ ಎನ್ನುವುದು ಗ್ರಾಮಸ್ಥರ ನಂಬಿಕೆಯಾಗಿದೆ.
ಈ ಶುಭ ಮೂಹರ್ತದಲ್ಲಿ ಸಂಭವಿಸುವ ಪವಾಡವನ್ನು ನೋಡಲು ಭಕ್ತರ ದಂಡೆ ಹರಿದು ಬಂದಿತ್ತು. ಅರ್ಚಕರು ಅಷ್ಟ ದಿಕ್ಕುಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವಾಲಯ ಸುತ್ತಾ ಪ್ರದಕ್ಷಿಣಿ ಹಾಕಿ ಮುಗಿಸುತ್ತಿದ್ದಂತೆ ಗಂಟೆ, ವಾದ್ಯಗೋಷ್ಠಿಗಳು ಮೊಳಗಲಾರಂಭಿಸುತ್ತಿದಂತೆ ದೇವಾಲಯದ ಬಾಗಿಲಲ್ಲಿ ಹಾಕಿದ ಪರದೇ ತಾನಾಗಿಯೇ ತೆರೆದುಕೊಳ್ಳುತ್ತದೆ.
ಈ ರೀತಿ ಗಾಳಿರೂಪದಲ್ಲಿ ದೇವಿರಮ್ಮ ಗರ್ಭಗುಡಿ ಸೇರುತ್ತಾಳೆ ಎನ್ನುವುದು ಗ್ರಾಮಸ್ಥರ ನಂಬಿಕೆ ಆಗಿದೆ. ದೇವಿರಮ್ಮಳ ದೇವಾಲಯದ ಬಾಗಿಲು ತನ್ನಿಂದ ತಾನೇ ತೆರದುಕೊಳ್ಳವುದು ಇಂದಿಗೂ ಕುತೂಹಲ ಮೂಡಿಸಿದೆ. ಜೊತೆಗೆ ಈ ವಿಸ್ಮಯ ಪ್ರಜ್ಞಾವಂತರಲ್ಲಿ ಹಲವು ಸಂಶಯಗಳನ್ನೂ ಹುಟ್ಟಾಕಿದೆ. ಇಲ್ಲಿನ ದೇವಿರಮ್ಮ ದೇವಿ ಪವಾಡ ಸೃಷ್ಠಿಸುವುದರ ಜೊತೆ ಭಕ್ತರ ಹರಕೆಯನ್ನು ತೀರಿಸುತ್ತಾಳೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.
ಆದ್ದರಿಂದ ಇಲ್ಲಿಗೆ ಭಕ್ತರ ದಂಡೆ ಹರಿದು ಬರೋದು ವಿಶೇಷ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. ವರ್ಷಕ್ಕೊಮ್ಮೆ ದರ್ಶನ ನೀಡುವ ದೇವರ ಸಾಲಿಗೆ ಈ ದೇವಿರಮ್ಮ ಕೂಡ ಸೇರಲಿದ್ದಾಳೆ.












Click it and Unblock the Notifications