ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ; ಅಧ್ಯಕ್ಷರ ಆಯ್ಕೆಗೆ ಅಪಸ್ವರ
ಚಿಕ್ಕಮಗಳೂರು, ಡಿಸೆಂಬರ್ 11: ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ಸಮ್ಮೇಳನಕ್ಕೆ ಆಯ್ಕೆ ಮಾಡಲಾಗಿರುವ ಅಧ್ಯಕ್ಷರ ವಿರುದ್ಧ ಅಪಸ್ವರಗಳು ಕೇಳಿ ಬಂದಿವೆ.
ಕಾಫಿನಾಡು ಚಿಕ್ಕಮಗಳೂರಿನ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಶುರುವಾಗಿದೆ. ಅದರಲ್ಲೂ ಈ ಬಾರಿ ಸಾಹಿತ್ಯ ಸಮ್ಮೇಳನ ಶಾರದಾಂಬೆಯ ಸನ್ನಿಧಿ ಶೃಂಗೇರಿಯಲ್ಲಿ ಆಯೋಜನೆಗೊಂಡಿದ್ದು, ಈಗ ಅಧ್ಯಕ್ಷರ ಆಯ್ಕೆ ವಿವಾದವಾಗಿ ಪರಿಣಮಿಸಿದೆ.
ಜಿಲ್ಲಾ ಸಾಹಿತ್ಯ ಪರಿಷತ್, ಮೂಲತಃ ಶೃಂಗೇರಿಯವರಾದ ಮಂಗನ ಬ್ಯಾಟೆ ಕೃತಿಯ ಮೂಲಕ ಮಲೆನಾಡಿನ ಚಿತ್ರಣವನ್ನು ಸೊಗಸಾಗಿ ಬಿಂಬಿಸಿದ್ದ ಕಲ್ಕುಳಿ ವಿಠ್ಠಲ ಹೆಗಡೆ ಅವರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಇದಕ್ಕೆ ಸಾಮಾಜಿಕ ಜಾಲತಾಣ ಸೇರಿದಂತೆ ಬಹಿರಂಗವಾಗಿಯೂ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. "ಮಂಗನ ಬ್ಯಾಟೆ" ಕೃತಿಯಲ್ಲಿ ವಿಠ್ಠಲ ಹೆಗಡೆ ಶೃಂಗೇರಿ ಮಠವನ್ನು ಅವಹೇಳನಕಾರಿಯಾಗಿ ಬಿಂಬಿಸಿದ್ದಾರೆ ಹಾಗೂ ವಿಠ್ಠಲ ಹೆಗಡೆ ನಕ್ಸಲ್ ಬೆಂಬಲಿಗ ಎಂಬ ಆರೋಪ ಇದೆ. ಹಾಗಾಗಿ ಈ ನಿರ್ಣಯಕ್ಕೆ ವಿರೋಧ ವ್ಯಕ್ತವಾಗಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಆಯ್ಕೆಯ ಬಗ್ಗೆ ಗಮನಹರಿಸಿ ಪರಾಮರ್ಶೆ ಮಾಡಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೆಲ ಸಂಘಟನೆಗಳು ಈ ಆಯ್ಕೆಗೆ ವಿರೋಧ ವ್ಯಕ್ತಪಡಿಸಿ ಸಮ್ಮೇಳನಾಧ್ಯಕ್ಷರ ಬದಲಾವಣೆ ಆಗಬೇಕು ಎಂದು ಆಗ್ರಹಿಸಿವೆ. ಶೃಂಗೇರಿಯಲ್ಲಿ ಸಾಕಷ್ಟು ಜನ ಸಾಹಿತಿಗಳಿದ್ದು ಅವರನ್ನು ಆಯ್ಕೆ ಮಾಡುವ ಬದಲು ಮಠದ ವಿರೋಧಿ ನಕ್ಸಲ್ ನಂಟು ಇರುವ ವ್ಯಕ್ತಿಗೆ ಯಾಕೆ ಅಧ್ಯಕ್ಷ ಸ್ಥಾನ ಎಂಬ ವಿರೋಧ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ, ಮತ್ತಷ್ಟು ಮಂದಿ ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆ ಹಲವು ವಿಶೇಷಗಳಿಗೆ ಸಾಕ್ಷಿಯಾಗಬೇಕಾಗಿದ್ದ ಕಾಫಿನಾಡಿನ ನುಡಿಜಾತ್ರೆ ವಿವಾದವಾಗಿ ಮಾರ್ಪಟ್ಟಿದೆ. ಮಲೆನಾಡಿನ ಸೊಬಗನ್ನು ತಮ್ಮ ಮಂಗನಬ್ಯಾಟೆ ಕೃತಿಯಲ್ಲಿ ಸೊಗಸಾಗಿ ಬಿಂಬಿಸಿದ್ದ ವಿಠ್ಠಲ ಹೆಗಡೆ ಆಯ್ಕೆ ಇದಕ್ಕೆ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾ ಕಸಾಪ ಮುಂದೆ ಯಾವ ನಿರ್ಧಾರ ತಗೆದುಕೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications