ಮೂಡಿಗೆರೆ: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ವ್ಯಕ್ತಿಗೆ ಧರ್ಮದೇಟು
ಮೂಡಿಗೆರೆ ತಾಲೂಕಿನ ಮುದ್ರೆಮುನೆ ಎಸ್ಟೇಟ್ ಬಳಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ವ್ಯಕ್ತಿಗೆ ಭಜರಂಗದಳ ಕಾರ್ಯಕರ್ತರು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿದ್ದಾರೆ. ಮುಂದೆನಾಯ್ತು ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಚಿಕ್ಕಮಗಳೂರು, ಜನವರಿ, 30: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಭಜರಂಗದಳ ಕಾರ್ಯಕರ್ತರು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿರುವ ಘಟನೆ ಮೂಡಿಗೆರೆ ತಾಲೂಕಿನ ಮುದ್ರೆಮುನೆ ಎಸ್ಟೇಟ್ ಬಳಿ ನಡೆದಿದೆ.
ಮೂಡಿಗೆರೆ ತಾಲೂಕಿನ ಕಾಫಿ ತೋಟಗಳಿಗೆ ಕೂಲಿಯನ್ನರಸಿ ಬಂದಿರುವ ಅಸ್ಸಾಂ ಮೂಲದ ವ್ಯಕ್ತಿ ಸಿಮೆಂಟ್ ಚೀಲದಲ್ಲಿ ಗೋಮಾಂಸವನ್ನು ತುಂಬಿಕೊಂಡು ಬೈಕಿನಲ್ಲಿ ಮಾರಾಟಕ್ಕೆ ಕೊಂಡೊಯುತ್ತಿದ್ದ. ವಿಷಯ ತಿಳಿದ ಭಜರಂಗದಳ ಕಾರ್ಯಕರ್ತರು ಅಸ್ಸಾಂ ಮೂಲದ ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದಾರೆ. ಆಗ ಚೀಲವನ್ನು ನೋಡಿದಾಗ ಗೋಮಾಂಸ ಇರುವುದು ಗೊತ್ತಾಗಿದೆ. ಕೂಡಲೇ ಆತನನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಗೋಣಿಬೀಡು ಪಿಎಸ್‌ಐ ಆತನನ್ನು ವಶಕ್ಕೆ ಪಡೆದಿದ್ದಾರೆ.
ಭಜರಂಗದಳ ಕಾರ್ಯಕರ್ತರ ಆರೋಪವೇನು?
ಇನ್ನು ಇತ್ತೀಚೆಗಷ್ಟೆ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಕಡಬಗೆರೆ ಬಳಿಯೂ ಅಸ್ಸಾಂ ಮೂಲದ ಕಾರ್ಮಿಕರು ಚೀಲದಲ್ಲಿ ಗೋಮಾಂಸ ತುಂಬಿಕೊಂಡು ಮಾರಾಟಕ್ಕೆ ಯತ್ನಿಸುವಾಗ ಸಿಕ್ಕಿಬಿದ್ದಿದ್ದರು. ಜಿಲ್ಲೆಯಲ್ಲಿ ಹಿಂದೆ ಈ ರೀತಿಯ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ, ಭಜರಂಗದಳ ಕಾರ್ಯಕರ್ತರು ಇವರು ಅಸ್ಸಾಂನವರು ಅಲ್ಲ. ಅಕ್ರಮ ಬಾಂಗ್ಲಾ ವಸಲಿಗರು ಎಂದು ಆರೋಪಿಸುತ್ತಿದ್ದಾರೆ.

ಕಲುಷಿತಗೊಂಡ ಹೇಮಾವತಿ ನದಿ ನೀರು
ಹೇಮಾವತಿ ಉಗಮ ಸ್ಥಾನದಲ್ಲೇ ನದಿ ನೀರು ಸಂಪೂರ್ಣ ಕಲುಷಿತಗೊಳ್ಳುತ್ತಿದ್ದು, ಇದರಿಂದ ಜನಸಾಮಾನ್ಯರು, ಜಲಚರಗಳು, ಬೆಳೆಗಳ ಮೇಲೂ ವ್ಯತಿರಿಕ್ತವಾದ ಪರಿಣಾಮ ಬೀರುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪವಿರುವ ಹೇಮಾವತಿ ನದಿ ನೀರು ಕಾಫಿ ಬೆಳೆಗಾರರಿಂದ ಕಲುಷಿತಗೊಳ್ಳುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ
ಮೂಡಿಗೆರೆ-ಸಕಲೇಶಪುರ ಭಾಗದ ಕಾಫಿ ಬೆಳೆಗಾರರು ಕಾಫಿಯನ್ನು ಪಲ್ಪರಿಂಗ್ ಮಾಡುತ್ತಾರೆ, ನಂತರ ಪಲ್ಪರಿಂಗ್‌ನ ಕಲುಷಿತ ನೀರನ್ನು ಹೇಮಾವತಿ ನದಿಗೆ ಬಿಡುತ್ತಿದ್ದಾರೆ. ಮಳೆಗಾಲದಲ್ಲಿ ಮಣ್ಣು ಮಿಶ್ರಿತ ಕೆಂಪು ನೀರು ಹೋದರೆ, ಬೇಸಿಗೆಯಲ್ಲಿ ನೀರಿಗೆ ಬಣ್ಣವಿಲ್ಲದಿದ್ದರೂ ಶುಭ್ರವಾಗಿ ಹರಿಯುತ್ತಾಳೆ. ಆದರೆ, ಕಾಫಿತೋಟದ ಮಾಲೀಕರು ಕಾಫಿ ಪಲ್ಪರಿಂಗ್ ನೀರನ್ನು ನೇರವಾಗಿ ಹೇಮಾವತಿ ನದಿಗೆ ಬಿಡುತ್ತಿದ್ದಾರೆ. ಇದರಿಂದ ಸ್ವಚ್ಛವಾಗಿ ಹರಿಯುವ ಹೇಮಾವತಿ ನದಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಅಧಿಕಾರಿಗಳು ಇತ್ತ ಗಮನಹರಿಸಿ ಕಾಫಿ ಪಲ್ಪರ್ ಮಾಡಿದ ನೀರನ್ನು ಇಂಗು ಗುಂಡಿ ಮೂಲಕ ಇಂಗಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.












Click it and Unblock the Notifications